ಬೆಂಗಳೂರು (ನ.30):  ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಫಿಟ್‌ ಇಂಡಿಯಾ’ ಅಭಿಯಾನಕ್ಕೆ ರಾಯಭಾರಿಯಾಗಿ ಕನ್ನಡತಿ ಹಾಗೂ ಫಿಟ್‌ನೆಸ್‌ ಎಕ್ಸ್‌ಪರ್ಟ್‌ ಆಗಿರುವ ವನಿತಾ ಅಶೋಕ್‌ ಆಯ್ಕೆಯಾಗಿದ್ದಾರೆ.

ರಾಜ್ಯದಲ್ಲಿ ಎಲ್ಲಾ ವಯಸ್ಸಿನ ವರ್ಗದವರನ್ನೂ ದೈಹಿಕ ಆರೋಗ್ಯದತ್ತ ಪ್ರಭಾವಿತಗೊಳಿಸುತ್ತಿರುವ ವನಿತಾ ಅಶೋಕ್‌ ಅವರು ಯೋಗ ಹಾಗೂ ಫಿಟ್ನೆಸ್‌ ತರಬೇತುದಾರರಾಗಿ ಹಲವು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ.

ಫಿಟ್‌ ಇಂಡಿಯಾ ಮಿಷನ್‌ ನಿರ್ದೇಶಕರಾದ ಏಕ್ತಾ ವಿಷ್ಣೋಯ್‌ ಪತ್ರ ಬರೆದಿದ್ದು, ‘2019ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಚಾಲನೆಗೊಂಡ ಫಿಟ್‌ ಇಂಡಿಯಾ ಅಭಿಯಾನದ ರಾಯಭಾರಿಯಾಗಿ ನೀವು ಆಯ್ಕೆಯಾಗಿದ್ದೀರಿ. ಅಭಿಯಾನದ ಮುಖ್ಯ ಉದ್ದೇಶದಂತೆ ಕಳೆದ ಒಂದು ವರ್ಷದಿಂದ ನೀವು ಜನರನ್ನು ದೈಹಿಕ ಆರೋಗ್ಯದತ್ತ ಪ್ರಭಾವಿತರನ್ನಾಗಿ ಮಾಡುತ್ತಿದ್ದೀರಿ. ದೈಹಿಕ ಆರೋಗ್ಯ ಹಾಗೂ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೀರಿ. ಹೀಗಾಗಿ ನಿಮ್ಮನ್ನು ಫಿಟ್‌ ಇಂಡಿಯಾ ರಾಯಭಾರಿಯಾಗಿ ಆಯ್ಕೆ ಮಾಡುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಈ ವಿಶೇಷ ಚಹಾದೊಂದಿಗೆ ದಿನವನ್ನು ಪ್ರಾರಂಭಿಸಿ ಅದ್ಭುತ ಆರೋಗ್ಯ ಪ್ರಯೋಜನ ಪಡೆಯಿರಿ ..

ವನಿತಾ ಹರ್ಷ:  ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ವನಿತಾ ಅಶೋಕ್‌, ‘ಬಹುಶಃ ದಕ್ಷಿಣ ಭಾರತದಿಂದ ಫಿಟ್‌ ಇಂಡಿಯಾ ರಾಯಭಾರಿಯಾಗಿ ಆಯ್ಕೆಯಾಗಿರುವ ಮೊದಲ ವ್ಯಕ್ತಿ ಎನಿಸುತ್ತಿದೆ. ಕನ್ನಡತಿಯಾಗಿ ಇಂತಹ ಗೌರವ ದೊರೆತಿರುವುದು ಹೆಮ್ಮೆ ಮೂಡಿಸಿದೆ. ಈಗಾಗಲೇ ಫಿಟ್ನೆಸ್‌ ತರಬೇತುದಾರಳಾಗಿ ಸೇವೆ ಸಲ್ಲಿಸುತ್ತಿರುವ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ’ ಎಂದು ಹೇಳಿದರು.

‘54 ವರ್ಷದ ನಾನು ಶಾಲಾ ದಿನಗಳಲ್ಲೇ ಕ್ರೀಡಾಪಟುವಾಗಿ, ಯುವತಿಯಾಗಿ, ಪತ್ನಿಯಾಗಿ, ತಾಯಿಯಾಗಿ ಈವರೆಗೆ ಎಲ್ಲಾ ಜವಾಬ್ದಾರಿಗಳನ್ನೂ ನಿಭಾಯಿಸಿದ್ದೇನೆ. ಹೀಗಾಗಿ ಎಲ್ಲಾ ವಯಸ್ಸಿನವರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳ ಅರಿವು ನನಗಿದೆ. ಹೀಗಾಗಿ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲೆ’ ಎಂದರು.