ಸಮಾಜದಲ್ಲಿ ಯಾರು ಸೇವೆ ಮಾಡುತ್ತಾರೆಯೋ ಅವರನ್ನು ಜನ ಗುರುತಿಸುತ್ತಾರೆ ಎಂಬುದಕ್ಕೆ ಆಂಜನೇಯನೇ ಸಾಕ್ಷಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

 ತಿಪಟೂರು (ಆ.27) ಸಮಾಜದಲ್ಲಿ ಯಾರು ಸೇವೆ ಮಾಡುತ್ತಾರೆಯೋ ಅವರನ್ನು ಜನ ಗುರುತಿಸುತ್ತಾರೆ ಎಂಬುದಕ್ಕೆ ಆಂಜನೇಯನೇ ಸಾಕ್ಷಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ತಾಲೂಕಿನ ನೊಣವಿನಕೆರೆಯಲ್ಲಿ ಕರುವಗಲ್‌ ಆಂಜನೇಯಸ್ವಾಮಿ ನೂತನ ದೇವಾಲಯದ ಉದ್ಘಾಟನಾ ಮಹೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಶ್ರೀರಾಮನ ತಂದೆ ದಶರಥ ಮಹಾರಾಜನ ದೇವಸ್ಥಾನ ಎಲ್ಲೂ ಕಂಡು ಬರುವುದಿಲ್ಲ. ಸ್ವತಃ ಶ್ರೀರಾಮನ ದೇವಾಲಯಗಳಿಗಿಂತ ಹೆಚ್ಚಾಗಿ ರಾಮಭಕ್ತ ಆಂಜನೇಯನ ದೇವಸ್ಥಾನಗಳನ್ನು ಜನ ನಿರ್ಮಿಸಿದ್ದಾರೆ ಎಂದರೆ ರಾಮನ ಸೇವೆಗೆ ಮುಡಿಪಾಗಿದ್ದ ಆಂಜನೇಯನ ಭಕ್ತಿ ಮತ್ತು ಸೇವೆಗೆ ಮೆಚ್ಚಿ ಎಂದು ನುಡಿದರು.

ಕಾವೇರಿ ವಿವಾದಕ್ಕೆ ಮೇಕೆದಾಟು ಪರಿಹಾರ; ಆ ಡ್ಯಾಂ ಇದ್ದಿದ್ರೆ ಜಲ ವಿವಾದನೇ ಇರ್ತಿರಲಿಲ್ಲ: ಡಿಕೆಶಿ

ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಶಕ್ತಿ ಬಹಳಷ್ಟುಜನರಿಗೆ ಗೊತ್ತಿಲ್ಲ. ನಾನು ಈ ಮಠಕ್ಕೆ ಬಂದು 20 ವರ್ಷಗಳಾಯಿತು. ಈ ಅವಧಿಯಲ್ಲಿ ನನಗೆ ಮಾರ್ಗದರ್ಶನ ಮಾಡಿದ ಶ್ರೀಮಠ ಇದು. ಶ್ರೀಗಳು ನನ್ನ ಗುರುಗಳು. ಇವರ ಮಾರ್ಗದರ್ಶನ ಪಡೆದುಕೊಂಡೇ ನಾನು ಮತ್ತು ನನ್ನ ಕುಟುಂಬ ಜೀವನ ನಡೆಸುತ್ತಿದ್ದೇವೆ. ನಮ್ಮ ಮನೆಯನ್ನು ಕಾಪಾಡುವ ಶಕ್ತಿ ಇದಕ್ಕಿದೆ. ನಾವು ಈ ಮಠವನ್ನು ಕಾಪಾಡಬೇಕಿದೆ ಎಂದು ತಿಳಿಸಿದರು.

ಕಾಡಸಿದ್ದೇಶ್ವರ ಮಠದ ಡಾ.ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ರಾಜಾ ಪ್ರತ್ಯಕ್ಷ ದೇವತಾ, ಮಾತೃ ಹೃದಯ ಸಂಪನ್ನನಾಗಿ ತಾಯಿಯ ಹೃದಯದಲ್ಲಿರುವ ಪ್ರತ್ಯಕ್ಷ ದೇವತಾ ಎಂಬಂತೆ ಇರುವ ವ್ಯಕ್ತಿ ಎಂದರು. ರಾಜಕೀಯದಲ್ಲಿ ಬಡವ, ಶ್ರೀಮಂತ, ಸೈನಿಕರು, ರೈತರು ಎಲ್ಲರ ಬದುಕನ್ನು, ಬಾಳನ್ನು ಬಂಗಾರ ಮಾಡಬೇಕೇಂದು ಸಂಕಲ್ಪ ತೊಟ್ಟಿರುವ ಡಿ.ಕೆ.ಶಿವಕುಮಾರ್‌ರವರಿಗೆ ಮುಂದಿನ ದಿನಗಳಲ್ಲಿ ಇನ್ನೂ ಉನ್ನತ ಅಧಿಕಾರ ಪ್ರಾಪ್ತಿಯಾಗಲಿ. ಸರ್ಕಾರ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿ ರಾಜಕೀಯದಲ್ಲಿ ಧರ್ಮವಿರಲಿ ಆದರೆ ಧರ್ಮದಲ್ಲಿ ರಾಜಕೀಯ ಬೇಡ ಎಂದರು.

ಶಾಸಕ ಕೆ.ಷಡಕ್ಷರಿ ಮಾತನಾಡಿ ಕಾಡಸಿದ್ದೇಶ್ವರ ಮಠ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ. ಈ ದೇವರನ್ನು ನಂಬಿದರೆ ಕೈಬಿಡುವುದಿಲ್ಲ ಎಂಬುದಕ್ಕೆ ಇಲ್ಲಿನ ಪರಮಭಕ್ತರಾಗಿರುವ ಡಿ.ಕೆ.ಶಿವಕುಮಾರ್‌ ಸಾಕ್ಷಿ. ಇಲ್ಲಿ ಆಶೀರ್ವಾದ ಪಡೆಯದೇ ಅವರು ಯಾವ ಕೆಲಸವನ್ನೂ ಮಾಡುವುದಿಲ್ಲ. ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕೆಂಬ ಆಸೆಯನ್ನು ಗಂಗಾಧರ ಅಜ್ಜಯ್ಯ ಈಡೇರಿಸುತ್ತಾನೆ ಎಂದು ನಂಬಿದ್ದೇನೆ. ಇವರ ಅವಧಿಯಲ್ಲಿ ತಿಪಟೂರು ತಾಲೂಕು ಹೆಚ್ಚು ಅಭಿವೃದ್ಧಿ ಕಾಣಲಿದೆ ಎಂದರು.

ಆಪರೇಷನ್ ಹಸ್ತ ಬೆನ್ನಲ್ಲೇ ಸಿಎಂ, ಡಿಸಿಎಂ ಭೇಟಿ ಮಾಡಿದ ಎಂಪಿ ರೇಣುಕಾಚಾರ್ಯ!

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬೆಂಗಳೂರು ವಿಭೂತಿಪುರ ಮಠದ ಮಹಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಬೆಲಗೂರಿನ ವಿಜಯ ಮಾರುತಿಶರ್ಮ ಸ್ವಾಮೀಜಿ, ಕಿರಿಯ ಸ್ವಾಮೀಜಿ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ, ಹೆಗ್ಗಡಹಳ್ಳಿ ಮಠದ ಷಡ್ಡಾವರಹಿತೇಶ್ವರ ಸ್ವಾಮೀಜಿ, ಕಾಂಗ್ರೆಸ್‌ ಮುಖಂಡರಾದ ಲೋಕೇಶ್ವರ, ಮುರಳೀಧರ ಹಾಲಪ್ಪ, ಚಿಕ್ಕಮಗಳೂರು ಶಾಸಕ ತಮ್ಮಯ್ಯ ಇನ್ನಿತರರು ಉಪಸ್ಥಿತರಿದ್ದರು.