ಜು.15ರಂದು ಬೆಂಗಳೂರಲ್ಲಿ ವಿಶ್ವಕರ್ಮ ಸಮಾವೇಶ ಸಿಎಂ ಬೊಮ್ಮಾಯಿ ಚಾಲನೆ, ನಳೀನ್ ಕುಮಾರ್ ಕಟೀಲು ಭಾಗಿ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ.ನಂಜುಂಡಿ ಮಾಹಿತಿ
ಬೆಂಗಳೂರು (ಜು.14): ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ನಿರ್ಲಕ್ಷ್ಯಕ್ಕೆ ಒಳಪಟ್ಟು ಸಾಮಾಜಿಕ ನ್ಯಾಯದಿಂದ ವಂಚಿತವಾಗಿರುವ ವಿಶ್ವಕರ್ಮ ಸಮುದಾಯವನ್ನು ಪರಿಶಿಷ್ಟಪಂಗಡಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಿ ಜು.15ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ವಿಶ್ವಕರ್ಮ ಸಮಾಜದ ಮುಖಂಡರ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ವಿಶ್ವಕರ್ಮ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶುಕ್ರವಾರ ಮಧ್ಯಾಹ್ನ 3.30ಕ್ಕೆ ವೈಟ್ ಪೆಟಲ್ಸ್ ಗೇಟ್ ನಂ 3ರಲ್ಲಿ ಸಮುದಾಯದ ಮುಖಂಡರ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಾವೇಶ ಉದ್ಘಾಟಿಸಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉತ್ತರಾಖಂಡದ ಸಂಸದ ಅಜಯ್ ತಮಟಾ ಅವರು ಆಗಮಿಸಲಿದ್ದಾರೆ ಎಂದರು.
6 ಬೇಡಿಕೆಗಳು: ಈ ವೇಳೆ ಕುಲಶಾಸ್ತ್ರ ಅಧ್ಯಯನ ಹಾಗೂ ಸಮುದಾಯ 6 ಪ್ರಮುಖ ಬೇಡಿಕೆಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. ನಮ್ಮ ಹೋರಾಟವು ಸರ್ಕಾರದ ವಿರುದ್ಧ ಅಲ್ಲ. ಸಮುದಾಯದ ಏಳಿಗೆಗಾಗಿ ಎಂದು ಸ್ಪಷ್ಟಪಡಿಸಿದರು.
ದೇಶದಲ್ಲಿ 8 ರಿಂದ 10 ಕೋಟಿ ಜನಸಂಖ್ಯೆ ಹೊಂದಿರುವ ವಿಶ್ವಕರ್ಮ ಸಮುದಾಯವು ಕರ್ನಾಟಕದಲ್ಲಿ 40 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಹಿಮಾಚಲ ಪ್ರದೇಶ ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯದಲ್ಲಿ ಸಮುದಾಯವು ಪರಿಶಿಷ್ಟಜಾತಿ ಹಾಗೂ ಪರಿಶಿಷ್ಠ ವರ್ಗ ಪಟ್ಟಿಯಲ್ಲಿದೆ. ಕರ್ನಾಟಕದಲ್ಲಿ ಹಿಂದುಳಿದ ವರ್ಗ ಪಟ್ಟಿಯಲ್ಲಿದ್ದು, ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಎಲ್ಲ ಕ್ಷೇತ್ರದಲ್ಲಿಯೂ ಸಮುದಾಯ ಹಿಂದುಳಿದಿದೆ. ಹಾಗಾಗಿ, ಸಮುದಾಯವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ಹೇಳಿದರು.
ವಿಶ್ವ ಕರ್ಮ ಸಮುದಾಯದವರನ್ನು ಕುಲ ಶಾಸ್ತ್ರ ಅಧ್ಯಯನ ನಡೆಸಿದರೆ ನಮ್ಮ ಸಮಾಜದ ನಿಜವಾದ ಮೂಲ ಯಾವುದೆಂದು ತಿಳಿಯುತ್ತದೆ. ಪುರಾತನ ಕಾಲದಿಂದಲೂ ಗುಡ್ಡಗಾಡು ಹಳ್ಳಿಯಿಂದ ನಮ್ಮ ಕಸುಬು ಆರಂಭಗೊಂಡಿದೆ. ಹಳ್ಳಿಗಳಲ್ಲಿ ಇಂದಿಗೂ ಕುಲ ಕಸುಬು ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದಾಯವಿಲ್ಲದೇ ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಿಗೆ ವಲಸೆ ಬಂದು ಹೊಟ್ಟೆಪಾಡಿಗಾಗಿ ಬೇರೆ ಬೇರೆ ವೃತ್ತಿ ಮಾಡುತ್ತಿದ್ದಾರೆ ಎಂದರು.
ಜಾಗೃತಿ ಪಾದಯಾತ್ರೆ: ಪರಿಶಿಷ್ಟಪಂಗಡಕ್ಕೆ ಸೇರಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದ್ದು, ಹೋಬಳಿ, ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಸಭೆ ನಡೆಸಲಾಗುತ್ತಿದೆ. ಸಮಾರೋಪದ ಅಂಗವಾಗಿ ಬೀದರ್ ನಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ಮಾಡಲು ನಿರ್ಧರಿಸಲಾಗಿದೆ. ಶೀಘ್ರದಲ್ಲಿ ದಿನಾಂಕ ನಿಗದಿ ಪಡಿಸಲಾಗುವುದು ಎಂದು ತಿಳಿಸಿದರು.
‘ಸಮುದಾಯದಿಂದ ನಾನೊಬ್ಬ ವಿಧಾನ ಪರಿಷತ್ ಸದಸ್ಯನಾಗಿ ನೇಮಕಗೊಂಡಿದ್ದೇನೆ. ಸಚಿವನಾದರೂ ಸಮುದಾಯಕ್ಕೆ ಏನೂ ಮಾಡುವುದಕ್ಕೆ ಸಾಧ್ಯವಿಲ್ಲ. ವಿಧಾನಪರಿಷತ್ ಸದಸ್ಯನಾದ ಬಳಿಕ ವಿಶ್ವಕರ್ಮ ಜಯಂತ್ಯೋತ್ಸವ ಹಾಗೂ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಸರ್ಕಾರದಿಂದ ಆಚರಣೆ ಮಾಡುವಂತೆ ಮಾಡಲಾಗಿದೆ’ ಎಂದು ತಿಳಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರ ಆಯ್ಕೆ ಮಾಡಿಕೊಂಡು ಸ್ಪರ್ಧೆಗೆ ಬೇಕಾದಷ್ಟುಸಮುದಾಯ ಹಾಗೂ ಹಣದ ಬಲವಿಲ್ಲ. ಪಕ್ಷ ಬೆನ್ನಿಗೆ ನಿಂತುಕೊಳ್ಳದೇ ನಮ್ಮ ಸಮುದಾಯದ ಅಭ್ಯರ್ಥಿಗಳು ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಆದರೆ, ಹಲವು ಕ್ಷೇತ್ರದಲ್ಲಿ ಗೆಲುವಿನ ನಿರ್ಣಾಯಕ ಪಾತ್ರವನ್ನು ಸಮುದಾಯ ವಹಿಸಲಿದೆ. ಹಾಗಾಗಿ, ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ವರಿಷ್ಠರ ಬಳಿ ಮನವಿ ಮಾಡಲಾಗಿದೆ ಎಂದÜು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಯುವ ಘಟಕದ ರಾಜ್ಯಾಧ್ಯಕ್ಷ ಶ್ರೀನಿವಾಸ್, ಬೆಂಗಳೂರು ಘಟಕದ ಜಿಲ್ಲಾಧ್ಯಕ್ಷ ಗಂಗಾಧರ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಧರ್, ಟಿ.ಕೆ.ಪುರುಷೋತ್ತಮ್, ಕೃಷ್ಣಾಚಾರ್, ಅಣ್ಣಯ್ಯಚಾರ್ ಮೊದಲಾದವರು ಉಪಸ್ಥಿತರಿದ್ದರು.
