'ವಿಶ್ವ ಕನ್ನಡ ಹಬ್ಬ' ಹೆಸರಿನಲ್ಲಿ ಸಿಂಗಾಪುರ, ದುಬೈ ಇವೆಂಟ್‌ಗಳಿಗಾಗಿ ಕನ್ನಡ ಅಭಿಮಾನಿ ಮಹಿಳೆಯರಿಂದ ಲಕ್ಷಾಂತರ ಹಣ ವಸೂಲಿ ಮಾಡಿ ವಂಚನೆ ಮಾಡಲಾಗಿದೆ. ಆರೋಪಿ ಶಿವಕುಮಾರ್ ನಗರ ನವಿಲೆ ವಿರುದ್ಧ ದೂರು ನೀಡಿರುವ ಮೀನಾಕ್ಷಿ ಮತ್ತು ರಂಜಿತಾ, ಸಿಎಂ ಫಂಡ್‌ನ 15 ಲಕ್ಷ ರೂ. ದುರುಪಯೋಗದ ಆರೋಪ ಮಾಡಿದ್ದಾರೆ.

ಬೆಂಗಳೂರು (ಡಿ.15): ಕನ್ನಡ ಪ್ರೇಮವನ್ನು ಬಂಡವಾಳ ಮಾಡಿಕೊಂಡು, 'ವಿಶ್ವ ಕನ್ನಡ ಹಬ್ಬ' ಹೆಸರಿನಲ್ಲಿ ಕನ್ನಡಾಭಿಮಾನಿಗಳು ಮತ್ತು ಮಹಿಳೆಯರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಂತ್ರಸ್ತೆಯರಾದ ಮೀನಾಕ್ಷಿ ಮತ್ತು 2024ರ ವಿಶ್ವ ಕನ್ನಡ ಹಬ್ಬದ ಕಾರ್ಯದರ್ಶಿ ರಂಜಿತಾ ಅವರು ಇಂದು ಪತ್ರಿಕಾಗೋಷ್ಠಿ ನಡೆಸಿ, ಆಯೋಜಕ ಶಿವಕುಮಾರ್ ನಗರ ನವಿಲೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವಂಚನೆಯು ವಿದೇಶದಲ್ಲಿ ಇಂಟರ್‌ನ್ಯಾಷನಲ್ ಶೋ ಮತ್ತು ಕನ್ನಡ ಹಬ್ಬಗಳನ್ನು ಆಯೋಜಿಸುವ ನೆಪದಲ್ಲಿ ನಡೆದಿದೆ. ವಂಚಕ ಶಿವಕುಮಾರ್ ನಗರ ನವಿಲೆ ಎಂಬುವವರು ಕನ್ನಡ ಅಭಿಮಾನಿಗಳು, ವಿಶೇಷವಾಗಿ ಮಹಿಳೆಯರನ್ನು ಗುರಿಯಾಗಿಸಿ, ವಿವಿಧ ಪದವಿಗಳು ಹಾಗೂ ಪ್ರಶಸ್ತಿಗಳನ್ನು ಕೊಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡಿದ್ದಾರೆ ಎನ್ನಲಾಗಿದೆ. ದುಬೈ, ಸಿಂಗಾಪುರ ಮತ್ತು ಮಸ್ಕಟ್‌ನಲ್ಲಿ ಈ ಹಬ್ಬಗಳನ್ನು ಆಯೋಜಿಸಲಾಗಿತ್ತು.

ಅಧಿಕ ಹಣ ವಸೂಲಿ ಮತ್ತು ಮೋಸ:

ಈ ಕಾರ್ಯಕ್ರಮದ ಸೆಕ್ರೇಟರಿ ರಂಜಿತಾ ಅವರ ಹೇಳಿಕೆ ಪ್ರಕಾರ, ಸಿಂಗಾಪುರ ಇವೆಂಟ್‌ಗಾಗಿ ವಾಸ್ತವ ಪ್ಯಾಕೇಜ್ ₹ 55,000 ಇದ್ದರೂ, 80ಕ್ಕೂ ಹೆಚ್ಚು ಜನರ ಬಳಿ ₹ 1 ಲಕ್ಷಕ್ಕೂ ಅಧಿಕ ಹಣವನ್ನು ಸಂಗ್ರಹಿಸಲಾಗಿದೆ. ಆದರೆ ಪ್ರಯಾಣ, ವಸತಿ, ಟಿಕೆಟ್, ಟ್ರೋಫಿ ಮತ್ತು ಊಟದ ವ್ಯವಸ್ಥೆಗಾಗಿ ಸರಿಯಾದ ಹಣ ಪಾವತಿ ಮಾಡಿಲ್ಲ. ಈ ಬಗ್ಗೆ ನಾವು ಕೇಳಿದರೆ ವಂಚಕರು ಸಂತ್ರಸ್ತರ ಮೇಲೆಯೇ ಕೇಸ್ ಹಾಕಿ ಬೆದರಿಸುತ್ತಿದ್ದಾರೆ ಎಂದು ದೂರಲಾಗಿದೆ. ರಂಜಿತಾ ಅವರಿಗೆ ಮಾತ್ರ ₹ 3.8 ಲಕ್ಷ ವಂಚನೆಯಾಗಿದೆ ಎಂದು ತಿಳಿಸಿದ್ದಾರೆ.

ಸಿಎಂ ಫಂಡ್ ದುರುಪಯೋಗ ಆರೋಪ:

ಈ ವಂಚನೆಗೆ ಸರ್ಕಾರಿ ಹಣ ಕೂಡ ಬಳಕೆಯಾಗಿದೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಸಿದ್ದಿ ಬುಡಕಟ್ಟು ಜನಾಂಗದ 15 ಜನರನ್ನು ಸಿಂಗಾಪುರ ಇವೆಂಟ್‌ಗೆ ಕರೆದೊಯ್ಯುವ ನೆಪದಲ್ಲಿ, ಮುಖ್ಯಮಂತ್ರಿ ನಿಧಿಯಿಂದ ಸುಮಾರು ₹ 15 ಲಕ್ಷ ಹಣ ಬಿಡುಗಡೆಯಾಗಿತ್ತು. ಆದರೆ ಅವರಿಗೆ ಸಂತ್ರಸ್ತೆಯರ ಹಣದಿಂದಲೇ ಬುಡಕಟ್ಟು ಜನಾಂಗದವರಿಗೆ ಸೌಕರ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ದೂರಿದ್ದಾರೆ. ಅಷ್ಟೇ ಅಲ್ಲದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಿಡುಗಡೆಯಾದ ₹ 25 ಲಕ್ಷ ಹಣ ಕೂಡ ಮಿಸ್‌ಯೂಸ್ ಆಗಿದೆ. ಈ ಎಲ್ಲಾ ಹಣ 'ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್' ಎಂಬ ಖಾತೆಗೆ ವರ್ಗಾವಣೆಯಾಗಿದೆ ಎಂದು ಆರೋಪಿಸಲಾಗಿದೆ.

ದೂರುದಾರೆ ಮೀನಾಕ್ಷಿ ಅವರು ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ, ಶಿವಕುಮಾರ್ ನಗರ ನವಿಲೆ ಅವರ ಮೇಲೆ ಎಲ್ ಒ ಸಿ (Look Out Circular) ಹೊರಡಿಸಿ ಪೊಲೀಸರು ಬಂಧಿಸಿದ್ದರು. ಆದರೆ ಜಾಮೀನಿನ ಮೇಲೆ ಹೊರಬಂದ ವಂಚಕ, ಈಗಲೂ ಯೂಟ್ಯೂಬ್‌ನಲ್ಲಿ ಸಂತ್ರಸ್ತರ ವಿರುದ್ಧವೇ ಅಸಭ್ಯವಾಗಿ ಮಾತನಾಡುತ್ತಿದ್ದಾನೆ ಎಂದು ಮೀನಾಕ್ಷಿ ಆರೋಪಿಸಿದ್ದಾರೆ. ವಂಚಕರ ರಿಜಿಸ್ಟ್ರೇಷನ್ ಕೂಡ ನಕಲಿಯಾಗಿರಬಹುದು ಎಂದು ಸಂತ್ರಸ್ತರು ಅನುಮಾನ ವ್ಯಕ್ತಪಡಿಸಿದ್ದಾರೆ.