ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಇದು 'ನೇರ ಭ್ರಷ್ಟಾಚಾರ'ದ ಫಲ ಎಂದು ಆರೋಪಿಸಿದ್ದಾರೆ. ಚುನಾವಣೆಗೆ ಮುನ್ನ ಮಹಿಳೆಯರಿಗೆ ತಲಾ ಹತ್ತು ಸಾವಿರ ರೂಪಾಯಿ ನೀಡಿ ಮತಗಳನ್ನು ಖರೀದಿಸಲಾಗಿದೆ ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆ ಎಂದಿದ್ದಾರೆ.
ಮಡಿಕೇರಿ (ನ.14): ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನೇತೃತ್ವದ ಮಹಾಘಟಬಂಧನ್‌ಗೆ ಭಾರೀ ಆಘಾತವಾದರೆ, ಎನ್‌ಡಿಎ (ಬಿಜೆಪಿ-ಜೆಡಿಯು) ಭರ್ಜರಿ ಗೆಲುವು ಪಡೆದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ವಿರಾಜಪೇಟೆ ಶಾಸಕ ಮತ್ತು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣರು ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿ, ಎನ್‌ಡಿಎ ಚುನಾವಣಾ ತಂತ್ರಗಳನ್ನು 'ನೇರ ಭ್ರಷ್ಟಾಚಾರ' ಎಂದು ಖಂಡಿಸಿದ್ದಾರೆ.
ಜನರ ತೀರ್ಪಿಗೆ ತಲೆಬಾಗುತ್ತೇವೆ:
ಚುನಾವಣೆ ಆಗುವವರೆಗೆ ನಾವು ಏನು ಬೇಕಾದರೂ ಮಾತನಾಡಬಹುದು. ಆದರೆ ಚುನಾವಣೆ ಮುಗಿದ ಮೇಲೆ ಜನರ ಅಭಿಮತಕ್ಕೆ ತಲೆ ಬಾಗಲೇಬೇಕು. ಜನರ ತೀರ್ಪನ್ನು ನಾವು ಗೌರವಿಸುತ್ತೇವೆ ಎಂದಿರುವ ಶಾಸಕ ಪೊನ್ನಣ್ಣ, ಚುನಾವಣಾ ಪ್ರಣಾಳಿಕೆಯಲ್ಲಿ ಹಲವು ಯೋಜನೆಗಳ ಹೇಳಿದ್ದೆವು. ಅಧಿಕಾರಕ್ಕೆ ಬಂದರೆ ಇಂಥ ಯೋಜನೆಗಳನ್ನ ಜಾರಿಗೆ ತರುತ್ತೇವೆ ಎಂದು ಹೇಳಿದ್ದೆವು. ಆದರೆ ಅವರು(ಎನ್‌ಡಿಎ) ಚುನಾವಣೆಗೆ ಒಂದು ದಿನ ಮೊದಲು ಪ್ರತಿ ಮಹಿಳೆಗೆ ನೇರವಾಗಿ ಹತ್ತು ಸಾವಿರ ರೂಪಾಯಿ ಕೊಟ್ಟರು. ಆ ಮೂಲಕ ನೇರವಾಗಿ ಚುನಾವಣಾ ಭ್ರಷ್ಟಾಚಾರ ಮಾಡಿದರು ಎಂದು ಆರೋಪಿಸಿದರು.
ಇದು ಎಲೆಕ್ಟೋರಲ್ ಮಾಲ್ ಪ್ರಾಕ್ಟೀಸ್, ಕರಪ್ಷನ್!
ಇದೊಂದು ಎಲೆಕ್ಟೋರಲ್ ಮಾಲ್ ಪ್ರಾಕ್ಟೀಸ್, ಕರಪ್ಷನ್. ದುಡ್ಡು ಕೊಟ್ಟು ಮತಗಳನ್ನು ಖರೀದಿಸಿದ್ದಾರೆ 75 ಲಕ್ಷ ಮಹಿಳೆಯರಿಗೆ ತಲಾ 10 ಸಾವಿರ ರೂಪಾಯಿ ನೀಡಿ ರಾಜಕೀಯ ವ್ಯವಸ್ಥೆಯ ಹದಗೆಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಪ್ರಜ್ಞಾವಂತರಾಗಬೇಕು. ಇಲ್ಲದಿದ್ದರೆ ಇಂತಹ ಭ್ರಷ್ಟಾಚಾರಕ್ಕೆ ಜನರು ಬಲಿಯಾಗಬೇಕಾಗುತ್ತದೆ. ನೇರವಾಗಿ ತಲಾ ಹತ್ತು ಸಾವಿರ ಕೊಟ್ಟರೆ ಹೇಗಾಗುತ್ತದೆ. ಜನರ ತೆರಿಗೆ ದುಡ್ಡಿನಲ್ಲಿ ನೇರವಾಗಿ ಖರೀದಿಸಿದ್ದಾರೆ. ಹೀಗಾದರೆ ಚುನಾವಣೆಯನ್ನು ಹೇಗೆ ಎದುರಿಸುವುದು. ಈ ಬಾರಿ ಚುನಾವಣೆಯಲ್ಲಿ ಮಹಿಳೆಯರು ಅತೀ ಹೆಚ್ಚು ಮತ ಹಾಕಿದ್ದಾರೆ ಎಂದರು. ಬಿಹಾರ ಚುನಾವಣಾ ಫಲಿತಾಂಶ ಕರ್ನಾಟಕದ ರಾಜಕೀಯದಲ್ಲೂ ಪರಿಣಾಮ ಬೀರಲಿದೆ.
