Asianet Suvarna News Asianet Suvarna News

 ಹೆಸರು ಬದಲಾವಣೆ ಬದಲು ಬಸವಜನ್ಮಭೂಮಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ : ಸಚಿವ ಶಿವಾನಂದ ಪಾಟೀಲ್

ಬಸವಣ್ಣನವರ ಕುರುಹು ಸಮಾಜಕ್ಕೆ ತಿಳಿಯಬೇಕಾದರೆ ಬಸವ ಜನ್ಮಭೂಮಿ ಹಾಗೂ ಐಕ್ಯಭೂಮಿ ಕೂಡಲಸಂಗಮದ ಅಭಿವೃದ್ಧಿ ಕಡೆಗೆ ಮುಖ್ಯಮಂತ್ರಿಗಳು ಹೆಚ್ಚಿನ ಒತ್ತು ನೀಡಿದರೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿರುವ ಶಿವಾನಂದ ಪಾಟೀಲ್, ಬಸವೇಶ್ವರ ಜನ್ಮಸ್ಥಳದ ಬಗ್ಗೆ ಯಾವುದೇ ಸರ್ಕಾರಗಳು ಮುತುವರ್ಜಿವಹಿಸಿಲ್ಲ ಎಂದಿದ್ದಾರೆ. 

Vijayapur district name change issue minister shivananda patil statement at vijayapur rav
Author
First Published Oct 28, 2023, 7:43 PM IST

- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಅ 28) : ರಾಜ್ಯಕ್ಕೆ ಬಸವಣ್ಣನವರ ಹೆಸರು ಇಟ್ಟರೇ ತಪ್ಪೇನು ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದ ಬೆನ್ನಲ್ಲೆ, ಈಗ ರಾಜ್ಯಾದ್ಯಂತ ಚರ್ಚೆಗಳು ಶುರುವಾಗಿವೆ. ಈ ನಡುವೆ ಈ ಕುರಿತು ವಿಜಯಪುರದಲ್ಲಿ ಸಚಿವ ಶಿವಾನಂದ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಬಸವೇಶ್ವರರು ಜನಿಸಿದ ಬಸವನ ಬಾಗೇವಾಡಿಯ ಶಾಸಕರಾಗಿರುವ ಶಿವಾನಂದ ಪಾಟೀಲ್ ಈ ಕುರಿತು ಏನ್ ಹೇಳ್ತಾರೆ ಎನ್ನುವ ಕುತೂಹಲ ಇತ್ತು. ಈಗ ಸಚಿವ ಶಿವಾನಂದ ಪಾಟೀಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಬಸವ ಜನ್ಮಭೂಮಿಯ ಅಭಿವೃದ್ಧಿಯ ಬಗ್ಗೆ ಮಾತನಾಡಿದ್ದಾರೆ. 

ಸರ್ಕಾರಗಳಿಗೆ ಬಸವ ಜನ್ಮ ಭೂಮಿಯ ಕಾಳಜಿ ಇಲ್ಲ ; ಸಚಿವ ಶಿವಾನಂದ ಪಾಟೀಲ್..!

ಅಣ್ಣ ಬಸವಣ್ಣನವರ ಹೆಸರು ಈಗಾಗಲೇ ಪ್ರಚಲಿತದಲ್ಲಿದ್ದು, ಅವರು ಜನಿಸಿರುವ ಜಿಲ್ಲೆ ವಿಜಯಪುರ ಎಂಬುದು ಜಗತ್ತಿಗೆ ಗೊತ್ತಿರುವ ವಿಚಾರ. ಯಾವುದೇ ಸರ್ಕಾರ ಬರಲಿ ಬಸವಣ್ಣನವರ ಜನ್ಮಭೂಮಿ ಅಭಿವೃದ್ಧಿ ಬಗ್ಗೆ ಅವರಿಗೆ ಸ್ವಾಭಿಮಾನವಿಲ್ಲ ಎಂದು ಸಚಿವ ಶಿವಾನಂದ ಪಾಟೀಲ್ ಅಸಮಧಾನ ಹೊರಹಾಕಿದ್ದಾರೆ‌.‌ ಬಸವ ಭೂಮಿಯ ಶಾಸಕರು, ಸಚಿವರಾಗಿರುವ ನಾವೇ ಬಡಿದಾಡಿ ಅನುದಾನ ತರುವುದರಿಂದ ಅಭಿವೃದ್ಧಿಯಾಗುವುದಿಲ್ಲ. ಬರಿ ಹೆಸರು ಬದಲಾವಣೆ ಮಾಡುವುದರಿಂದ ಬಸವಣ್ಣನವರ ಹಿರಿಮೆ, ಗರಿಮೆ ಜಗತ್ತಿಗೆ ಪರಿಚಯಿಸುತ್ತೇವೆ ಎಂಬುದು ಕಷ್ಟ ಎಂದು ಅಭಿಪ್ರಾಯ ಹೊರಹಾಕಿದ್ದಾರೆ‌.

ವಿಜಯಪುರ ಆಗಲಿದ್ಯಾ ಬಸವೇಶ್ವರ ಜಿಲ್ಲೆ? ಅಭಿಪ್ರಾಯ ಸಂಗ್ರಹಕ್ಕೆ ಮುಂದಾದ ಜಿಲ್ಲಾಡಳಿತ..!

ಮೊದಲು ಬಸವ ಭೂಮಿ ಅಭಿವೃದ್ಧಿಯಾಗಲಿ..!

ಬಸವಣ್ಣನವರ ಕುರುಹು ಸಮಾಜಕ್ಕೆ ತಿಳಿಯಬೇಕಾದರೆ ಬಸವ ಜನ್ಮಭೂಮಿ ಹಾಗೂ ಐಕ್ಯಭೂಮಿ ಕೂಡಲಸಂಗಮದ ಅಭಿವೃದ್ಧಿ ಕಡೆಗೆ ಮುಖ್ಯಮಂತ್ರಿಗಳು ಹೆಚ್ಚಿನ ಒತ್ತು ನೀಡಿದರೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿರುವ ಶಿವಾನಂದ ಪಾಟೀಲ್, ಬಸವೇಶ್ವರ ಜನ್ಮಸ್ಥಳದ ಬಗ್ಗೆ ಯಾವುದೇ ಸರ್ಕಾರಗಳು ಮುತುವರ್ಜಿವಹಿಸಿಲ್ಲ ಎಂದಿದ್ದಾರೆ. 

ಬಸವಣ್ಣನವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ರೆ ಸಾಧನೆ ಅಲ್ಲ!

ವಿಜಯಪುರ ಜಿಲ್ಲೆಗೆ ಬಸವೇಶ್ವರ ಅಥವಾ ಬಸವ ಜಿಲ್ಲೆ ಎಂದು ಮರುನಾಮಕರಣ ಮಾಡಲು ಸರ್ಕಾರ ಜಿಲ್ಲಾಡಳಿತದ ಮೂಲಕ ಜನಾಭಿಪ್ರಾಯ ಸಂಗ್ರಹಿಸುತ್ತಿರುವ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಸಿದರು. ನಾನು ಬಸವಣ್ಣನ ಅಭಿಮಾನಿಯಾಗಿ ಕೇವಲ ಅವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರೆ ಅದು ನನ್ನ ಸಾಧನೆಯಲ್ಲ. ಅಧಿಕಾರ ಅವಕಾಶವಿರುವ ಯಾವುದೇ ಸರ್ಕಾರದ, ಯಾರೇ ಮುಖ್ಯಮಂತ್ರಿಗಳಾಗಲಿ ಬಸವಣ್ಣನವರನ್ನು ಜಗತ್ತಿಗೆ ತೋರಿಸುವಂತಹ ಕೆಲಸ ಬಸವ ಜನ್ಮ ಭೂಮಿಯಲ್ಲಿ ಮಾಡಬೇಕಿತ್ತು ಎಂದು ಇಂಗಿತ ವ್ಯಕ್ತಪಡಿಸಿದರು.

ಈಗಾಗಲೇ ವಿಜಯಪುರ ಹೆಸರು ಪ್ರಸಿದ್ಧಿ ಪಡೆದಿದೆ:

ಬಸವಣ್ಣನವರ ಜನ್ಮಭೂಮಿ ಬಸವನಬಾಗೇವಾಡಿ ವಿಜಯಪುರ ಜಿಲ್ಲೆ ಎಂದು ಬರುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಗೋಳಗುಮ್ಮಟ ಹಾಗೂ ಐತಿಹಾಸಿಕ ಸ್ಮಾರಕಗಳಿಂದ ಜಗತ್ತಿಗೆ ಪ್ರಸಿದ್ದಿಯಾಗಿರುವ ಜಿಲ್ಲೆ. ಆದರೆ ಬಸವೇಶ್ವರರ ಹೆಸರೇ ಜಿಲ್ಲೆಗೆ ಇಟ್ಟರೆ ಅದನ್ನು ಹೇಳುವುದು ಕಷ್ಟವಾಗುತ್ತದೆ. ಯಾರೇ ರಾಷ್ಟ್ರೀಯ ಪುಣ್ಯಪುರುಷರಾಗಲಿ ಅವರನ್ನು ರಾಷ್ಟ್ರೀಯ ವಿಚಾರದ ದೃಷ್ಟಿಕೋನದಿಂದ ನೋಡಬೇಕೆ ವಿನಹಃ  ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ಬಸವಣ್ಣನವರ ಕುರುಹು ಉಳಿಯುವಂತ ಕೆಲಸ ವಿಜಯಪುರ ಜಿಲ್ಲೆಯಲ್ಲಿ ಮಾಡಿದರೆ ಜಿಲ್ಲೆಗೆ ಹೆಸರು ಬರುತ್ತದೆ ಎಂದರು.

 

ಕನ್ನಡ ಕಲಿಯಲು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುತ್ತಿವೆ ಮಕ್ಕಳು!

ಬಸವೇಶ್ವರ ಜನ್ಮಸ್ಥಳಕ್ಕೆ ಪ್ರತ್ಯೇಕ ಪ್ರಾಧಿಕಾರ:

ಬಹುವರ್ಷಗಳಿಂದ ಬಸವಣ್ಣನವರ ಜನ್ಮಸ್ಥಳಕ್ಕೆ ಪ್ರತ್ಯೇಕ ಪ್ರಾಧಿಕಾರ ರಚನೆ ಕೂಗಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಶಿವಾನಂದ ಪಾಟೀಲರು, ಬಸವಣ್ಣನವರ ಜನ್ಮಭೂಮಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯನವರು ಪ್ರಚಾರಕ್ಕೆ ಬಂದಾಗ ಘೋಷಣೆ ಮಾಡಿ ಹೋಗಿದ್ದಾರೆ. ನಾವೂ ಸಹ ಒತ್ತಾಯ ಮಾಡುತ್ತಿದ್ದೇವೆ. ಬರಿ ಘೋಷಣೆ ಮಾಡಿದರೆ ಸಾಲದು, ಅಭಿವೃದ್ಧಿಗೆ ಅನುದಾನ ಕೊಟ್ಟರೆ ನಾನು ಸಹ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಹೇಳುತ್ತೇನೆ ಎಂದರು.

Follow Us:
Download App:
  • android
  • ios