ರಾಕೇಶ್‌ ಎನ್‌.ಎಸ್‌.

ಬೆಂಗಳೂರು(ಜ.13): ನಮ್ಮ ರಾಜ್ಯದ ಹೆಮ್ಮೆಯ ವಿಜಯನಗರ ಸಾಮ್ರಾಜ್ಯದ ಕಲಾ, ಸಾಂಸ್ಕೃತಿಕ ಶ್ರೀಮಂತಿಕೆ ಜನವರಿ 26ರಂದು ರಾಷ್ಟ್ರ ರಾಜಧಾನಿಯ ರಾಜಪಥದಲ್ಲಿ ವಿಶ್ವದ ಮುಂದೆ ಅನಾವರಣಗೊಳ್ಳಲಿದೆ!

ಜ.26ರಂದು ಗಣರಾಜ್ಯೋತ್ಸವದ ಪ್ರಯುಕ್ತ ನಡೆಯುವ ಸ್ತಬ್ಧಚಿತ್ರ ಪಥ ಸಂಚಲನದಲ್ಲಿ ರಾಜ್ಯವನ್ನು ವಿಜಯನಗರ (ಸಿಟಿ ಆಫ್‌ ವಿಕ್ಟರಿ) ಪ್ರತಿನಿಧಿಸಲಿದೆ. ರಾಜ್ಯದ ವಿಜಯನಗರ ಸ್ತಬ್ಧ ಚಿತ್ರವನ್ನು ಪರೇಡ್‌ಗೆ ಆಯ್ಕೆ ಮಾಡಿರುವುದನ್ನು ಈಗಾಗಲೇ ರಕ್ಷಣಾ ಸಚಿವಾಲಯವು ವಾರ್ತಾ ಇಲಾಖೆಗೆ ತಿಳಿಸಿದ್ದು, ವಾರ್ತಾ ಇಲಾಖೆ ತನ್ನ ತಯಾರಿಯನ್ನು ಪ್ರಾರಂಭಿಸಿದೆ.

ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ದೊರೆ ಕೃಷ್ಣದೇವರಾಯ ಸಿಂಹಾಸನ ರೂಢರಾಗಿರುವ ಚಿತ್ರಣವನ್ನು ಇಟ್ಟುಕೊಂಡು ಸ್ತಬ್ಧ ಚಿತ್ರ ನಿರ್ಮಾಣವಾಗಲಿದೆ ಎಂದು ವಾರ್ತಾ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
ಹಂಪಿಯ ಶಿಲ್ಪ ವೈಭವ, ಉಗ್ರ ನರಸಿಂಹ ದೇವಸ್ಥಾನ, ವಿಠಲ ದೇಗುಲ, ಹಳೆಯ ಕಂಬಗಳು, ಉಬ್ಬು ಶಿಲ್ಪಗಳು ಸ್ತಬ್ಧ ಚಿತ್ರಣದ ಪ್ರಮುಖ ಆಕರ್ಷಣೆಯಾಗಿರಲಿದೆ ಎಂದು ಮೂಲಗಳು ಹೇಳಿವೆ.

ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ದೇಶಕ್ಕೆ ಪರಿಚಯಿಸುವುದು ನಮ್ಮ ಸ್ತಬ್ಧ ಚಿತ್ರದ ಆಶಯ. ವಿಜಯನಗರದ ಕಲಾ ಶ್ರೀಮಂತಿಕೆ, ಸಂಸ್ಕೃತಿ ಮತ್ತು ಸಂಗೀತ, ಉಡುಗೆ- ತೊಡುಗೆಗಳನ್ನು ಮರು ಸೃಷ್ಟಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ರಾಜ್ಯದ ಗತ ಚರಿತ್ರೆಯನ್ನು ದೇಶಕ್ಕೆ ತೋರಿಸುವುದು ನಮ್ಮ ಉದ್ದೇಶ. ಇದರಿಂದ ರಾಜ್ಯದ ಪ್ರವಾಸೋದ್ಯಮಕ್ಕೆ ಹೆಚ್ಚು ಪ್ರಯೋಜನವಾಗಲಿದೆ ಎಂದು ನಂಬಿದ್ದೇವೆ. ವಿಜಯನಗರ ಹೊಸ ಜಿಲ್ಲೆಯಾಗುತ್ತಿರುವ ಸಂದರ್ಭದಲ್ಲಿ ಅಲ್ಲಿನ ಸಾಂಸ್ಕೃತಿಕ ಹೂರಣ ಜಗಜಾಹೀರು ಆಗುತ್ತಿರುವುದು ಖುಷಿಯ ವಿಚಾರ ಎಂದು ವಾರ್ತಾ ಇಲಾಖೆಯ ಉನ್ನತ ಮೂಲಗಳು ಹೇಳುತ್ತವೆ.

ಹಂಪಿ ಪ್ರವಾಸಿಗರೆ ಗಮನಿಸಿ : ಸ್ಟ್ರಿಕ್ಟ್ ರೂಲ್ಸ್

ಸ್ತಬ್ಧಚಿತ್ರದಲ್ಲಿ ಭಾಗಿಯಾಗುವ ವಿಷಯಗಳ ಪಟ್ಟಿರಚನೆ, ಸಮನ್ವಯ, ನಿರ್ಮಾಣ ಹೊಣೆ ಎಲ್ಲವೂ ರಾಜ್ಯ ವಾರ್ತಾ ಇಲಾಖೆಯದ್ದು. ಸ್ತಬ್ಧಚಿತ್ರ ನಿರ್ಮಾಣವನ್ನು ಖ್ಯಾತ ಕಲಾವಿದ ಶಶಿಧರ ಅಡಪ ಮಾಡಲಿದ್ದಾರೆ. ಸಂಗೀತವನ್ನು ಪ್ರವೀಣ್‌ ರಾವ್‌ ನೀಡಲಿದ್ದಾರೆ. ಹನ್ನೆರಡು ಮಂದಿ ಕಲಾವಿದರು ಭಾಗವಹಿಸಲಿದ್ದಾರೆ.

11ನೇ ವರ್ಷ ಪಾಲ್ಗೊಳ್ಳುವ ಹೆಗ್ಗಳಿಕೆ

ರಾಜ್ಯವು 2021ರ ಗಣರಾಜ್ಯೋತ್ಸವದ ಸ್ತಬ್ಧ ಚಿತ್ರ ಪಥ ಸಂಚಲನದಲ್ಲಿ ಭಾಗಿಯಾಗುವುದರೊಂದಿಗೆ ಸತತ 11ನೇ ವರ್ಷ ಈ ಪಥ ಸಂಚಲನದಲ್ಲಿ ಪಾಲ್ಗೊಂಡಂತೆ ಆಗಿದೆ. ರಾಜ್ಯವು 2011ರಲ್ಲಿ ಬಿದರಿ ಕಲೆ (ತೃತೀಯ ಸ್ಥಾನ), 2012ರಲ್ಲಿ ಭೂತಾರಾಧನೆ (ದ್ವಿತೀಯ ಸ್ಥಾನ), 2013ರಲ್ಲಿ ಕಿನ್ನಾಳ ಕಲೆ, 2014ರಲ್ಲಿ ಅಪ್ರತಿಮ ಹೋರಾಟಗಾರ ಟಿಪ್ಪು ಸುಲ್ತಾನ್‌, 2015ರಲ್ಲಿ ಚನ್ನಪಟ್ಟಣದ ಗೊಂಬೆ (ತೃತೀಯ ಸ್ಥಾನ), 2016ರಲ್ಲಿ ಕಾಫಿ ನಾಡು- ಕೊಡಗು, 2017ರಲ್ಲಿ ಕರ್ನಾಟಕದ ಜನಪದ ವೈಭವ, 2018ರಲ್ಲಿ ಕರ್ನಾಟಕದ ವನ್ಯಜೀವಿಗಳು, 2019ರಲ್ಲಿ ಮಹಾತ್ಮಾ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್‌ ಅಧಿವೇಶನ, 2020ರಲ್ಲಿ ಅನುಭವ ಮಂಟಪ ಎಂಬ ಪರಿಕಲ್ಪನೆಯೊಂದಿಗೆ ಪಥ ಸಂಚಲನದಲ್ಲಿ ಭಾಗವಹಿಸಿತ್ತು. 2008ರಲ್ಲಿ ಪಟ್ಟದಕಲ್ಲು ಸ್ತಬ್ಧ ಚಿತ್ರ ರಾಜ್ಯವನ್ನು ಪ್ರತಿನಿಧಿಸಿತ್ತು. 2006ರಲ್ಲಿ ಬಾಹುಬಲಿ ಮೂರ್ತಿಯ ಮಸ್ತಕಾಭಿಷೇಕ ಸ್ತಬ್ಧ ಚಿತ್ರಕ್ಕೆ ಪ್ರಥಮ ಸ್ಥಾನ ಬಂದಿತ್ತು.