ಹೊಸಪೇಟೆ (ಡಿ.07): ವಿಶ್ವ ವಿಖ್ಯಾತ ಹಂಪಿ ಸ್ಮಾರಕಗಳ ಗುಚ್ಛಕ್ಕೆ ಕೈಗನ್ನಡಿಯಾಗಿರುವ ಕಲ್ಲಿನತೇರನ್ನು ಇನ್ಮುಂದೆ ಮುಟ್ಟುವಂತಿಲ್ಲ. ಈ ಸ್ಮಾರಕ ಮುಟ್ಟಿ, ಅದರ ಮೇಲೆ ಹತ್ತಿ ಫೋಟೋ ತೆಗೆಯಲಾಗುತ್ತಿತ್ತು. ಈಗ ಅದರ ಸಂರಕ್ಷಣೆಗೆ ಸುತ್ತ ಸರಪಳಿ ಬ್ಯಾರಿಕೇಡ್‌ ಹಾಕಲಾಗಿದೆ.

ಐತಿಹಾಸಿಕ ಸ್ಮಾರಕದ ಸಂರಕ್ಷಣೆಗೆ ಒತ್ತು ನೀಡಿರುವ ಭಾರತೀಯ ಪುರಾತತ್ವ ಇಲಾಖೆ ಅದರ ಸುತ್ತ ಈಗ ಸರಪಳಿ ಹಾಕಿದ್ದು, ದೇಶ-ವಿದೇಶಿ ಪ್ರವಾಸಿಗರು ನಿಯಮ ಮೀರಿ ಫೋಟೋ ತೆಗೆಯುವುದಕ್ಕೆ ಕಡಿವಾಣ ಹಾಕಿದೆ.

ಪ್ರೀ ವೆಡ್ಡಿಂಗ್‌ ಶೂಟಿಂಗ್‌, ಹಂಪಿ ಪೊಲೀಸರಿಗೆ ದೂರು ...

ಹಂಪಿಯ ವಿಜಯ ವಿಠ್ಠಲ ದೇವಾಲಯದ ಸಂಗೀತ ಮಂಟಪದ ಆವರಣ, ಕಮಲ್‌ ಮಹಲ್‌ ಸೇರಿ ಕೆಲ ಸ್ಮಾರಕಗಳ ಮೇಲೆ ಹತ್ತದಂತೆ, ಮುಟ್ಟದಂತೆ ನಿಷೇಧಿಸಿ ಸೂಚನಾಫಲಕ ಅಳವಡಿಸಲಾಗಿದೆ. ಜತೆಗೆ ಬಿಗಿಭದ್ರತೆ ಒದಗಿಸಲಾಗಿದೆ. ಹೀಗಿದ್ದರೂ ಇತ್ತೀಚೆಗೆ ಹೈದರಾಬಾದ್‌ ಮೂಲದ ಭಾವಿ ದಂಪತಿ ಪ್ರೀ ವೆಡ್ಡಿಂಗ್‌ ಶೂಟಿಂಗ್‌ ನಡೆಸಿದ್ದು ಸುದ್ದಿಯಾಗಿತ್ತು.

ಜತೆಗೆ ಪ್ರವಾಸಿಗರೂ ಕಲ್ಲಿನತೇರಿನ ಬಳಿ ಹಾಕಿದ್ದ ಬಿಳಿಪಟ್ಟಿದಾಟಿ ಎಗ್ಗಿಲ್ಲದೆ ಫೋಟೋ ತೆಗೆಸಿಕೊಳ್ಳುತ್ತಿದ್ದರು. ಹೀಗಾಗಿ ಈಗ ಪುರಾತತ್ವ ಇಲಾಖೆ ಸುತ್ತ ಸರಪಳಿ ಬ್ಯಾರಿಕೇಡ್‌ ಹಾಕಿದೆ. ಸದ್ಯ ಕಲ್ಲಿನರಥಕ್ಕೆ ಸರಪಳಿಯ ಬ್ಯಾರಿಕೇಡ್‌ ಹಾಕಿದ್ದು, ಮುಂದಿನ ದಿನಗಳಲ್ಲಿ ಉಳಿದ ಸ್ಮಾರಕಗಳಿಗೂ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳುತ್ತಾರೆ ಪುರಾತತ್ವ ಇಲಾಖೆ ಅಧಿಕಾರಿಗಳು.