ಯಾದಗಿರಿ/ಕಲಬುರಗಿ(ಅ.12): ವಿದ್ಯಾಗಮ ಕಾರ‍್ಯಕ್ರಮದಿಂದಾಗಿ ಕಲಬುರಗಿಯಲ್ಲಿ ನಾಲ್ವರು ಹಾಗೂ ಯಾದಗಿರಿಯಲ್ಲಿ ಇಬ್ಬರು ಶಿಕ್ಷಕರಿಗೆ ಕೊರೋನಾ ಸೋಂಕಿದ್ದು, ಇದರಿಂದಾಗಿ ವಿದ್ಯಾಗಮದಡಿ ಈ ಶಿಕ್ಷಕರಿಂದ ಪಾಠ ಕೇಳಿದ ಮಕ್ಕಳಲ್ಲಿ ಆತಂಕ ಶುರುವಾಗಿದೆ.

ಕಲಬುರಗಿಯ ಆಳಂದ ತಾಲೂಕಿನ ಚಿಂಚನಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ವರು ಶಿಕ್ಷಕರು ಸೋಂಕಿತರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗೆ ಮಾಶಾಳ ವಠಾರ ಶಾಲೆಯ ನಾಲ್ವರು ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಈಗ ಮತ್ತೆ ನಾಲ್ವರು ಶಿಕ್ಷಕರಿಗೆ ಕೊರೋನಾ ತಗುಲಿರುವುದರಿಂದ ಪೋಷಕರಲ್ಲಿ ಆತಂಕ ಮನೆಮಾಡಿದೆ.

"

ಇನ್ನು ಯಾದಗಿರಿಯ ಸುರಪುರ ತಾಲೂಕಿನ ರತ್ತಾಳ್‌ ಗ್ರಾಮದಲ್ಲಿ ಶಿಕ್ಷಕ ಹಾಗೂ ಶಿಕ್ಷಕಿಗೆ ಕೊರೋನಾ ದೃಢಪಟ್ಟಿದ್ದು, ಹೋಂ ಕ್ವಾರಂಟೈನ್‌ ಆಗಿದ್ದು, ಇವರು ಪಾಠ ಮಾಡಿದ ಮಕ್ಕಳ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಮೂವರು ಶಿಕ್ಷಕರು ಮೃತಪಟ್ಟಿದ್ದಾರೆ. ಸುರಪುರದ ಒಬ್ಬರು ಹಾಗೂ ಶಹಾಪೂರದಲ್ಲಿ ಇಬ್ಬರು ಶಿಕ್ಷಕರು ಸೋಂಕಿಗೆ ಬಲಿಯಾಗಿದ್ದಾರೆ.

ವಿದ್ಯಾಗಮ ಯೋಜನೆ ಪ್ರಾರಂಭವಾದ ಬಳಿಕ ರಾಜ್ಯದ ವಿವಿಧೆಡೆ ಸುಮಾರು 47ಕ್ಕೂ ಹೆಚ್ಚು ಮಂದಿ ಶಿಕ್ಷಕರು ಮಹಾಮಾರಿ ಕೊರೋನಾಗೆ ಬಲಿಯಾಗಿದ್ದು, ನೂರಾರು ಮಕ್ಕಳು ಕೊರೋನಾ ಸೋಂಕಿತರಾಗಿದ್ದರು.