ಬೆಂಗಳೂರು(ಸೆ.26): ಬೆಂಗಳೂರು ನಗರದಲ್ಲಿನ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನದ ನಿವೇಶನದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕಕ್ಕೆ ಸದನವು ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪರವಾಗಿ ಶುಕ್ರವಾರ ವಿಧೇಯಕ ಮಂಡಿಸಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಬೆಂಗಳೂರು ನಗರದಲ್ಲಿ ಅನಧಿಕೃತವಾಗಿ ಹಲವು ವರ್ಷಗಳಿಂದ ಮನೆ ನಿರ್ಮಿಸಿಕೊಂಡಿರುವವರಿಂದ ದಂಡ ಪಡೆದು ಸಕ್ರಮಗೊಳಿಸಲು ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ. ನಿವೇಶನದ ಅಳತೆಯನ್ನು ಆಧರಿಸಿ ಮಾರ್ಗಸೂಚಿ ದರದ ಶೇ.10 ರಿಂದ ಶೇ.50 ರಷ್ಟು ದಂಡ ವಿಧಿಸಲಾಗುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ಆದಾಯ ಬರಲಿದೆ ಎಂದು ಹೇಳಿದರು.

ನಕಲಿ ದಾಖಲೆ: ಬಿಡಿಎ ಅಧಿಕಾರಿಗಳು ಸೇರಿ 11 ಆರೋಪಿಗಳ ವಿರುದ್ಧ FIR

ಸರ್ಕಾರ ಮಂಡಿಸಿದ ವಿಧೇಯಕಕ್ಕೆ ಜೆಡಿಎಸ್‌ ಹಿರಿಯ ಸದಸ್ಯ ಎ.ಟಿ.ರಾಮಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿ ವಿಧೇಯಕದ ಕಾಗದವನ್ನು ಆಕ್ರೋಶದಿಂದ ಬಿಸಾಡಿದರು. ಬಿಡಿಎ ವಿಧೇಯಕವು ಬಡವರ ಹಿತಕ್ಕಾಗಿ ಇಲ್ಲ. ಬದಲಿಗೆ ಬಲಾಢ್ಯರು, ಅಕ್ರಮ ಮಾಡಿದವರಿಗೆ ಮನೆ ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ. ಬಿಬಿಎಂಪಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ವಿಧೇಯಕವನ್ನು ತಂದಿದೆ. ಬಲಾಢ್ಯರಿಗೆ ಅತ್ಯಂತ ಅಗ್ಗದ ದರದಲ್ಲಿ ನೀಡಬೇಕಾದ ಅಗತ್ಯ ಇಲ್ಲ. ಸರ್ಕಾರ ನೀಡುತ್ತಿರುವುದು ಮಾರುಕಟ್ಟೆ ದರ ಅಲ್ಲ, ಬದಲಿಗೆ ಮಾರ್ಗಸೂಚಿ ದರದ ಶೇ.10, 20ರಂತೆ ನಿಗದಿ ಮಾಡಿ ಸಕ್ರಮಕ್ಕೆ ಮುಂದಾಗಿದೆ. ಇದು ಸರಿಯಾದ ಕ್ರಮವಲ್ಲ ಎಂದು ವಾಗ್ದಾಳಿ ನಡೆಸಿದರು.

ಆಡಳಿತ ಪಕ್ಷದ ಹಿರಿಯ ಸದಸ್ಯ ಕೆ.ಜಿ.ಬೋಪಯ್ಯ ಸಹ ಇದಕ್ಕೆ ಧ್ವನಿಗೂಡಿಸಿದರು. ಒತ್ತುವರಿ ತೆರವು ಸಮಿತಿ ಅಧ್ಯಕ್ಷನಾಗಿ ಈ ಬಗ್ಗೆ ಪರಿಶೀಲನೆ ನಡೆಸಿದ್ದು, ಸರ್ಕಾರ ನಮ್ಮ ಶಿಫಾರಸುಗಳನ್ನು ಒಪ್ಪಿಕೊಂಡಿಲ್ಲ. ಪ್ರಬಲರು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂದು ಸರ್ಕಾರ ವಿರುದ್ಧ ಹರಿಹಾಯ್ದರು. ಇದೇ ವೇಳೆ ಕೆಲವು ಸದಸ್ಯರು ಇದನ್ನು ಇತರ ನಗರಗಳಿಗೂ ಅನ್ವಯವಾಗುವಂತೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು. ಈ ಗದ್ದಲ ನಡುವೆಯೇ ವಿಧೇಯಕವನ್ನು ಅಂಗೀಕರಿಸಲಾಯಿತು.