ಬೆಂಗಳೂರು(ಸೆ.16): ಸುಳ್ಳು ದಾಖಲೆ ಸೃಷ್ಟಿಸಿ ನಕಲಿ ಫಲಾನುಭವಿಗಳಿಗೆ ಐದು ನಿವೇಶನಗಳಿಗೆ ಶುದ್ಧ ಕ್ರಯಪತ್ರ ಮಾಡಿಕೊಟ್ಟಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಆರು ಮಂದಿ ಅಧಿಕಾರಿಗಳು ಸೇರಿದಂತೆ 11 ಆರೋಪಿಗಳ ವಿರುದ್ಧ ಶೇಷಾದ್ರಿಪುರಂ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಬಿಡಿಎ ಉಪ ಕಾರ್ಯದರ್ಶಿ-4 ರಾಜು, ಉಪ ಕಾರ್ಯದರ್ಶಿ-4ರ ವಿಭಾಗದ ಮೇಲ್ವಿಚಾರಕ ಆರ್‌.ಕುಮಾರ್‌, ಪ್ರಥಮ ದರ್ಜೆ ಸಹಾಯಕಿ ಡಿ.ಮಂಜುಳಾ ಬಾಯಿ, ಬಿಡಿಎ ಅಧಿಕಾರಿಗಳಾದ ಎನ್‌.ಬಿ.ಜಯರಾಮು, ಜೆ.ಚನ್ನಕೇಶವ, ಮಲ್ಲಿಕಾರ್ಜುನ ಮತ್ತು ನಕಲಿ ಫಲಾನುಭವಿಗಳಾದ ಅನಸೂಯ ಗೋರ್‍, ಪಿ.ನಾಗಭೂಷಣ್‌, ವರಲಕ್ಷ್ಮೇ, ಜಯಲಕ್ಷ್ಮೇ, ಮಾಶ್ತಾನಯ್ಯ ಅವರ ವಿರುದ್ಧ ದೂರು ದಾಖಲಾಗಿದೆ.

ಬಿಡಿಎ ಬೆಂಗಳೂರು ಪೂರ್ವ ತಾಲೂಕು ವರ್ತೂರು ಹೋಬಳಿ ಕಾಡುಬಿಸನಹಳ್ಳಿ ಗ್ರಾಮದ ಸರ್ವೇ ನಂಬ.26/1ರಲ್ಲಿನ 1.18 ಎಕರೆ ಜಮೀನಿನಲ್ಲಿ ರಚಿಸಲಾಗಿದ್ದ ಬಡಾವಣೆಯಲ್ಲಿ 30*40 ಅಡಿ ಅಳತೆಯ ನಿವೇಶನ ಸಂಖ್ಯೆ 2,5,6,7 ಮತ್ತು 13 ಹೀಗೆ ಐದು ನಿವೇಶನಗಳನ್ನು ಜನರಲ್‌ ಪವರ್‌ ಆಫ್‌ ಅಟಾರ್ನಿ(ಜಿಪಿಎಫ್‌) ಮೂಲಕ ಅನುಸೂಯ ಗೊರ್ಲ, ಪಿ.ನಾಗಭೂಷಣ್‌, ವರಲಕ್ಷ್ಮೀ, ಜಯಲಕ್ಷ್ಮೀ ಹಾಗೂ ಮಶ್ತಾನಯ್ಯ ಡಾಮಿನೇನಿ ಅವರು ನೈಜ ಫಲಾನುಭವಿಗಳಲ್ಲದಿದ್ದರೂ ಅವರ ಹೆಸರಿಗೆ ಶುದ್ಧ ಕ್ರಯಪತ್ರ ಮಾಡಿಕೊಡಲಾಗಿತ್ತು.

240 ಕಾರ್ನರ್‌ ಸೈಟ್‌ ಮಾರಾಟ: ಬಿಡಿಎಗೆ 172 ಕೋಟಿ ಆದಾಯ

ಪ್ರಾಧಿಕಾರದ ಅಧಿಕಾರಿ ಸಿಬ್ಬಂದಿಯಾದ ಬಿ.ರಾಜು, ಆರ್‌.ಕುಮಾರ್‌, ಮಂಜುಳಾ ಬಾಯಿ, ಎನ್‌.ಬಿ.ಜಯರಾಮು ಹಾಗೂ ಗ್ರೂಪ್‌ ಡಿ.ನೌಕರರಾದ ಜೆ.ಚನ್ನಕೇಶವ, ಮಲ್ಲಿಕಾರ್ಜುನ್‌ ಅವರೊಂದಿಗೆ ಸೇರಿ ಸದರಿ ನಿವೇಶನಗಳನ್ನು ತಮಗೆ ಹಂಚಿಕೆಯಾಗಿರುವಂತೆ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಪ್ರಾಧಿಕಾರಕ್ಕೆ ಸಲ್ಲಿಸಿ ಅಕ್ರಮವಾಗಿ ಐದು ನಿವೇಶನಗಳಿಗೆ ಶುದ್ಧ ಕ್ರಯಪತ್ರಗಳನ್ನು ನೋಂದಾಯಿಸಿ ಕೊಟ್ಟಿದ್ದರು. ಇದರಿಂದ ಬಿಡಿಎಗೆ ಸುಮಾರು 10 ಕೋಟಿ ರು.ಗಳಷ್ಟು ಆರ್ಥಿಕ ನಷ್ಟವನ್ನು ಉಂಟು ಮಾಡಿ ನಂಬಿಕೆ ದ್ರೋಹ ವೆಸಗಿದ್ದಾರೆ ಎಂದು ಬಿಡಿಎ ದೂರು ದಾಖಲಿಸಿತ್ತು.

ಜತೆಗೆ ನಕಲಿ ಫಲಾನುಭವಿಗಳಿಗೆ ನಿವೇಶನ ಕ್ರಮ ಮಾಡಿಕೊಟ್ಟ ಪ್ರಕರಣದಲ್ಲಿ ಬಿಡಿಎ ಆಯುಕ್ತ ಡಾ.ಎಚ್‌.ಆರ್‌.ಮಹದೇವ್‌ ಅವರು, ಅಭಿಲೇಖಾಲಯ ವಿಭಾಗದ ಮೇಲ್ವಿಚಾರಕಿ ವಿ.ಮಹದೇವಯ್ಯ, ಆರ್ಥಿಕ ವಿಭಾಗದ ಪ್ರಥಮ ದರ್ಜೆ ಲೆಕ್ಕ ಸಹಾಯಕ ಎನ್‌.ಬಿ.ಜಯರಾಂ, ರಾಜು, ಆರ್‌.ಕುಮಾರ್‌ ಹಾಗೂ ಮಂಜುಳಾಬಾಯಿ ಅವರಿಗೆ ನೋಟಿಸ್‌ ಜಾರಿಗೊಳಿಸಿದ್ದರು. ಈ ನೋಟಿಸ್‌ಗೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಮೂವರು ಅಧಿಕಾರಿಗಳನ್ನು ಮಹದೇವ್‌ ಅಮಾನತುಗೊಳಿಸಿದ್ದರು.