ರಾಜ್ಯದ ಆಡಳಿತ ಕೇಂದ್ರ ವಿಧಾನಸೌಧ ಇನ್ನು ಮುಂದೆ ಪ್ರವಾಸಿ ತಾಣವಾಗಲಿದೆ! ಹೌದು. ಪ್ರವಾಸೋದ್ಯಮ ಇಲಾಖೆ ಇಂತಹದೊಂದು ಪ್ರಸ್ತಾಪ ಇಟ್ಟಿದ್ದು, ಇದೇ ಮೊದಲ ಬಾರಿಗೆ ಸಾರ್ವಜನಿಕರಿಗೆ ವಿಧಾನಸೌಧದೊಳಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು (ಏ.09): ರಾಜ್ಯದ ಆಡಳಿತ ಕೇಂದ್ರ ವಿಧಾನಸೌಧ ಇನ್ನು ಮುಂದೆ ಪ್ರವಾಸಿ ತಾಣವಾಗಲಿದೆ! ಹೌದು. ಪ್ರವಾಸೋದ್ಯಮ ಇಲಾಖೆ ಇಂತಹದೊಂದು ಪ್ರಸ್ತಾಪ ಇಟ್ಟಿದ್ದು, ಇದೇ ಮೊದಲ ಬಾರಿಗೆ ಸಾರ್ವಜನಿಕರಿಗೆ ವಿಧಾನಸೌಧದೊಳಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ. ರಾಷ್ಟ್ರಪತಿ ಭವನ, ಸಂಸತ್‌ಗಳಿಗೆ ಇರುವಂತೆ ವಿಧಾನಸೌಧಕ್ಕೂ ‘ಗೈಡೆಡ್ ಟೂರ್’ ಏರ್ಪಡಿಸಲು ನಿರ್ಧರಿಸಲಾಗಿದೆ. ಸಾರ್ವತ್ರಿಕ ರಜಾ ದಿನಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 6ರವರೆಗೆ ಗೈಡೆಡ್ ಟೂರ್ ವ್ಯವಸ್ಥೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಸಂಸತ್ ಕಟ್ಟಡ, ರಾಷ್ಟ್ರಪತಿ ಭವನದಲ್ಲಿ ಗೈಡೆಡ್ ಟೂರ್ ವ್ಯವಸ್ಥೆ ಇದೆ. ಈ ಮೂಲಕ ಪ್ರವಾಸಿಗರನ್ನು ಸೆಳೆಯಲಾಗುತ್ತಿದೆ. ವಿಧಾನಸೌಧದ ಪಾರಂಪರಿಕತೆ, ಇತಿಹಾಸ, ಕಟ್ಟಡದ ಮಹತ್ವ ತಿಳಿಸುವ ನಿಟ್ಟಿನಲ್ಲಿ ಗೈಡೆಡ್ ಟೂರ್ ವ್ಯವಸ್ಥೆ ಕಲ್ಪಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.
ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಶುಲ್ಕ ನಿಗದಿ ಮಾಡಲು ತೀರ್ಮಾನಿಸಲಾಗಿದೆ. ಶೀಘ್ರದಲ್ಲೇ ಗೈಡೆಡ್ ಟೂರ್‌ಗೆ ಸಂಬಂಧಿಸಿ ದಿನಾಂಕ ಮತ್ತು ಶುಲ್ಕ ನಿಗದಿಗೊಳಿಸಲಾಗುವುದು. ಗೈಡೆಡ್ ಟೂರ್ ವ್ಯವಸ್ಥೆಯನ್ನು ಪ್ರವಾಸೋದ್ಯಮ ಇಲಾಖೆಯಿಂದ ಜಾರಿಗೊಳಿಸಲು ಕೆಲ ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ವಿಧಾನಸೌಧ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರನ್ನು ತಲಾ 30ರಂತೆ ತಂಡಗಳನ್ನಾಗಿ ವಿಭಜಿಸಿ, ವೀಕ್ಷಣೆಗೆ ಅವಕಾಶ ಕಲ್ಪಿಲಾಗುವುದು. ಪ್ರತಿ ತಂಡಗಳ ಮೇಲ್ವಿಚಾರಣೆಗೆ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಅಧಿಕಾರಿಗಳನ್ನು ಕಡ್ಡಾಯವಾಗಿ ನೇಮಿಸಲಾಗುತ್ತದೆ. ವೀಕ್ಷಣೆಗೆ ಆಗಮಿಸುವ ಪ್ರತಿ ಪ್ರವಾಸಿಗರ ಸಂಖ್ಯೆ ಹಾಗೂ ವಿವರಗಳನ್ನು ವಿಧಾನಸೌಧದ ಭದ್ರತಾ ವಿಭಾಗಕ್ಕೆ ಆಯಾ ದಿನವೇ ಸಲ್ಲಿಸಲು ಸೂಚಿಸಲಾಗಿದೆ. ಪ್ರವಾಸಿಗರು ಆನ್‌ಲೈನ್ ಮೂಲಕವೂ ಟಿಕೆಟ್ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ.
ಸೂಚನಾ ಫಲಕ ಅಳವಡಿಕೆ: ವಿಧಾನಸೌಧ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ನಿಯಮಗಳನ್ನು ಪಾಲಿಸಬೇಕಿದೆ. ಪ್ರವಾಸಿಗರ ಅಧಿಕೃತ ಗುರುತಿನ ಚೀಟಿ ಪರಿಶೀಲಿಸಿದ ಬಳಿಕ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ವಿಧಾನಸೌಧ ಕಟ್ಟಡ, ಉದ್ಯಾನವನಗಳು, ಪ್ರತಿಮೆಗಳಿಗೆ ಯಾವುದಕ್ಕೂ ಧಕ್ಕೆ ಉಂಟಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಈ ಕುರಿತು ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸಲು ಲೋಕೋಪಯೋಗಿ ಇಲಾಖೆ ಕ್ರಮವಹಿಸಲು ಸೂಚಿಸಲಾಗಿದೆ.
ಚಲುವರಾಯಸ್ವಾಮಿಯನ್ನು ಮಂತ್ರಿ ಮಾಡಲು ಶ್ರಮ ಹಾಕಿದ್ದೇನೆ, ಆಣೆಗೆ ಸಿದ್ಧ: ಎಚ್.ಡಿ.ಕುಮಾರಸ್ವಾಮಿ
ಡ್ರೋನ್ ಕ್ಯಾಮೆರಾ ನಿಷೇಧ: ಪ್ರವಾಸಿಗರ ಅನುಕೂಲಕ್ಕಾಗಿ ಸುಸಜ್ಜಿತ ವೈದ್ಯಕೀಯ ತಂಡದೊಂದಿಗೆ ಆ್ಯಂಬುಲೆನ್ಸ್ ಸೌಲಭ್ಯ ಕಲ್ಪಿಸಲು ಆರೋಗ್ಯ ಇಲಾಖೆ ಅಗತ್ಯ ಕ್ರಮ ವಹಿಸಬೇಕು. ಪ್ರವಾಸಿಗರು ವಿಧಾನಸೌಧದ ಆವರಣದ ಸ್ವಚ್ಛತೆ ಕಾಪಾಡಲು ಬದ್ಧರಾಗಿರಬೇಕು. ವಿಧಾನಸೌಧ ಕಟ್ಟಡದ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಡ್ರೋನ್ ಕ್ಯಾಮೆರಾ ಬಳಸಲು ನಿಷೇಧಿಸಿದೆ. ಪ್ರವಾಸಿಗರು ಕುಡಿಯುವ ನೀರು ಹೊರತುಪಡಿಸಿ ಯಾವುದೇ ಆಹಾರ/ತಿಂಡಿಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಕಡ್ಡಾಯವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗುತ್ತದೆ. ವಿಧಾನಸೌಧದ ಆವರಣದಲ್ಲಿ ವಾಹನ ನಿಲುಗಡೆ ನಿರ್ಬಂಧಿಸಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
