ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಕೇಸ್: ಸುಳ್ಳು ದೂರು ನೀಡುವಂತೆ ಒತ್ತಡ, ಮೂವರ ವಿರುದ್ಧ ದೂರು
ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಯಾವುದೇ ಸಂತ್ರಸ್ತೆಯರಿಂದ ತಮಗೆ ದೂರು ಬಂದಿಲ್ಲ ಎಂದು ಸ್ಪಷ್ಟಪಡಿಸಿದ ರಾಷ್ಟ್ರೀಯ ಮಹಿಳಾ ಆಯೋಗ
ನವದೆಹಲಿ(ಮೇ.10): ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಯಾವುದೇ ಸಂತ್ರಸ್ತೆಯರಿಂದ ತಮಗೆ ದೂರು ಬಂದಿಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಸ್ಪಷ್ಟಪಡಿಸಿದೆ. ಮಹಿಳೆಯೊಬ್ಬರಿಂದ ಈ ಪ್ರಕರಣದ ವಿಚಾರವಾಗಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ಬಂದಿದೆ. ಪ್ರಕರಣದಲ್ಲಿ ಸುಳ್ಳು ದೂರು ನೀಡುವಂತೆ ತಮ್ಮ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಿ ಆಕೆ ಮೂವರು ವ್ಯಕ್ತಿಗಳ ವಿರುದ್ಧ ದೂರು ನೀಡಿದ್ದಾರೆ.
ಸಿವಿಲ್ ಡ್ರೆಸ್‌ನಲ್ಲಿ ಬಂದ ಮೂವರು ವ್ಯಕ್ತಿಗಳು ತಾವು ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಪ್ರಜ್ವಲ್ ಪ್ರಕರಣದಲ್ಲಿ ಸುಳ್ಳು ದೂರು ನೀಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಅನಾಮದೇಯ ಕರೆಗಳ ಮೂಲಕವೂ ದೂರು ನೀಡುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಪ್ರಜ್ವಲ್ ಸಂತ್ರಸ್ತೆ ಗೊತ್ತು ಎಂದು ಹೆಲ್ಪಲೈನ್‌ಗೆ ಮಾಹಿತಿದಾರರ ಕಾಟ..!
ಇದನ್ನು ನೋಡಿದರೆ ಗುಂಪೊಂದು ಒತ್ತಾಯಪೂರ್ವಕವಾಗಿ ದೂರು ದಾಖಲಿಸಲು ಪ್ರಯತ್ನಿಸುತ್ತಿದೆ ಅನ್ನುವುದು ಅರಿವಿಗೆ ಬರುತ್ತದೆ. ದೂರುದಾರರು ತಮ್ಮ ಮತ್ತು ತಮ್ಮ ಕುಟುಂಬದ ರಕ್ಷಣೆಗೆ ಮೊರೆ ಇಟ್ಟಿದ್ದಾರೆ ಎಂದು ಮಹಿಳಾ ಆಯೋಗದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರತ್ಯೇಕ ಬೆಳವಣಿಗೆಯೊಂದರಲ್ಲಿ 700 ಮಹಿಳೆಯರು ಆನ್‌ಲೈನ್ ಮೂಲಕ ದೂರು ನೀಡಿದ್ದು, ಇವರೆಲ್ಲರೂ ಸಾಮಾಜಿಕ ಹೋರಾಟ ನಡೆಸುವ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವರು. ಇವರಿಗೂ ನೊಂದ ಸಂತ್ರಸ್ತರಿಗೂ ಯಾವುದೇ ನೇರ ಸಂಬಂಧ ಇದ್ದಂತಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.