Asianet Suvarna News Asianet Suvarna News

Chandrashekhar Patil: ಕನ್ನಡದ ಹಿರಿಯ ಸಾಹಿತಿ, ಹೋರಾಟಗಾರ ಚಂಪಾ ಇನ್ನಿಲ್ಲ

* ಕವಿ, ನಾಟಕಕಾರ, ಕನ್ನಡಪರ ಹೋರಾಟಗಾರ ಡಾ.ಚಂದ್ರಶೇಖರ ಪಾಟೀಲ್ ನಿಧನ

* 83 ವರ್ಷ ವಯಸ್ಸಿನ ಚಂಪಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು

* 2017ರಲ್ಲಿ ಮೈಸೂರಿನಲ್ಲಿ ನಡೆದ 83ನೇ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು

Veteran Kannada Writer Chandrashekhar Patil Champa dies at 83 pod
Author
Bangalore, First Published Jan 10, 2022, 9:04 AM IST

ಬೆಂಗಳೂರು(ಜ.10): ಕವಿ, ನಾಟಕಕಾರ, ಕನ್ನಡಪರ ಹೋರಾಟಗಾರ ಡಾ.ಚಂದ್ರಶೇಖರ ಪಾಟೀಲ್ (ಚಂಪಾ) ಇಂದು ಮುಂಜಾನೆ ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. 83 ವರ್ಷ ವಯಸ್ಸಿನ ಚಂಪಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಮೂಲತಃ ಹಾವೇರಿ ಜಿಲ್ಲೆಯವರಾದ ಚಂಪಾ,  2017ರಲ್ಲಿ ಮೈಸೂರಿನಲ್ಲಿ ನಡೆದ 83ನೇ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. 

ಸಾಹಿತ್ಯ ಲೋಕದಲ್ಲಿ ಚಂಪಾ ಎಂಬ ಕಾವ್ಯನಾಮದಿಂದ ಪ್ರಖ್ಯಾತರಾಗಿದ್ದ ಪ್ರೊ.ಚಂದ್ರಶೇಖರ್ ಪಾಟೀಲ್, ಚಂಪಾ ಸಂಕ್ರಮಣ ಪತ್ರಿಕೆಯ ಸಂಪಾದಕರಾಗಿದ್ದರು. ಕನ್ನಡದ ವಿಚಾರಗಳು ಸದ್ದು ಮಾಡುತ್ತಿದ್ದಾಗ ಮುಂಚೂಣಿಯಲ್ಲಿದ್ದು, ಭಾಷೆಯ ಪರವಾಗಿ ಹೋರಾಟ ನಡೆಸುತ್ತಿದ್ದರು.  ಪುಸ್ತಕ ಸಂತೆ, ಗಡಿನಾಡು ಕನ್ನಡಿಗರ ಪರವಾಗಿ ಚಂಪಾ ಅವರು ಹೋರಾಟ ನಡೆಸಿದ್ದರು. ಸರ್ಕಾರಗಳ ಜನವಿರೋಧಿ ನೀತಿಯ ವಿರುದ್ಧ ತಮ್ಮ ಬರಹಗಳಿಂದಲೇ ಎಚ್ಚರಿಸಿ ಜನಪರವಾಗಿ ನಿಲ್ಲುತ್ತಿದ್ದ ಚಂಪಾ ಅವರು, ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.

"

ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ

ಚಂಪಾ ಅವರು ಕನ್ನಡದ ಕವಿಯಾಗಿ, ನಾಟಕಕಾರರಾಗಿ, ಸಂಘಟನಕಾರರಾಗಿ, ಪತ್ರಿಕಾ ಸಂಪಾದಕರಾಗಿ, ಆಡಳಿತಗಾರರಾಗಿ, ಕನ್ನಡ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಚಂದ್ರಶೇಖರ್ ಪಾಟೀಲ್ 1939 ಜೂನ್‌ 18ರಂದು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತೀಮತ್ತೂರಿನಲ್ಲಿ ಜನಿಸಿದರು. ತಂದೆ ಬಸವರಾಜ ಹಿರೇಗೌಡರು, ತಾಯಿ ಮುರಿಗೆವ್ವ.

ನಾಳಿಗಿದೋ ಸ್ವಾಗತ, ಚರಿಪನಾದವೊ ಹಾಡು ಹಕ್ಕಿಯೋ ಮುಂತಾದ ಕವನ ಸಂಕಲನಗಳು, ಕೊಡೆಗಳು, ಅಪ್ಪ, ಕುಂಟ ಕುಂಟ ಕುರುವತ್ತಿ, ಗುರ್ತಿನವರು, ಟಿಂಗರ ಬುಡ್ಡಣ್ಣ, ಕತ್ತಲರಾತ್ರಿ, ಗೋಕರ್ಣದ ಗೌಡಸಾನಿ, ಜಗದಂಬೆಯ ಬೀದಿನಾಟಕ, ಬುರಡಿ ಬಾಬನ ವಸ್ತ್ರಾಪಹರಣ ಪವಾಡ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. ಸಂಕ್ರಮಣ ಕಾವ್ಯ, ಗಾಂಧಿ ಗಾಂಧಿ, ಬೇಂದ್ರೆ-ನಾ ಕಂಡಂತೆ, ನನಗೆ ಕಂಡಷ್ಟು ಸೇರಿದಂತೆ ಅನೇಕ ಕೃತಿಗಳನ್ನ ರಚಿಸಿದ್ದಾರೆ.

ಅವರ ಕನ್ನಡ ಸಾಹಿತ್ಯ ಕ್ಷೇತ್ರದ ಕೊಡುಗೆಗಾಗಿ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳ ಗೌರವಕ್ಕೆ ಭಾಜನರಾಗಿದ್ದರು.

ಅಗಲಿದ ಸಾಹಿತಿಗೆ ಗಣ್ಯರ ಸಂತಾಪ

ಜಲ ಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ ಚಂಪಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಕಾರಜೋಳ 'ಹಿರಿಯ ಕವಿ, ಸಾಹಿತಿ, ವಿಮರ್ಶಕ, ನಾಟಕಕಾರ ಪ್ರೋ ಚಂದ್ರಶೇಖರ್ ಪಾಟೀಲ್ ಅವರ ಅಕಾಲಿಕ ಅಗಲಿಕೆಯಿಂದ ಮನಸ್ಸಿಗೆ ತೀವ್ರ ದುಃಖವಾಗಿದೆ. ಅವರ ಅಗಲಿಕೆಯಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ...; ಎಂದು ಬರೆದಿದ್ದಾರೆ. 

ಇನ್ನು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಕೂಡಾ ಟ್ವೀಟ್ ಮಾಡಿದ್ದು, ಕನ್ನಡಪರ ಹೋರಾಟಗಾರ, ಕವಿ, ನಾಟಕಕಾರ, ಸಂಘಟನಕಾರ, ಪತ್ರಕರ್ತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ವಿಶ್ರಾಂತ ಅಧ್ಯಕ್ಷರಾಗಿದ್ದ ಶ್ರೀ ಚಂದ್ರಶೇಖರ ಪಾಟೀಲ ಅವರ ನಿಧನ ಬಹಳ ದುಃಖ ಉಂಟು ಮಾಡಿದೆ ಎಂದಿದ್ದಾರೆ. ಅಲ್ಲದೇ ಚಂಪಾ ಎಂದೇ ಸಾರಸ್ವತ ಲೋಕದಲ್ಲಿ ಹೆಸರಾಗಿದ್ದ ಅವರು ಸಾಹಿತ್ಯ ಕೃಷಿಯ ಜತೆಗೆ ನಾಡು, ನುಡಿ, ನೆಲಕ್ಕಾಗಿ ತಮ್ಮ ಬದುಕನ್ನು ಮೀಸಲಿಟ್ಟಿದ್ದರು. ಚಂಪಾ ಅವರ ಅಗಲಿಕೆ ನಾಡಿಗೆ ದೊಡ್ಡ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬದ ಸದಸ್ಯರು, ಅಭಿಮಾನಿಗಳಿಗೆ ಆ ಭಗವಂತ ನೀಡಲಿ ಎಂದು ಬರೆದಿದ್ದಾರೆ.

 

Follow Us:
Download App:
  • android
  • ios