ಬೆಂಗಳೂರು(ಸೆ.17): ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಪೂರೈಕೆ ಕೊರತೆಯುಂಟಾಗಿ ತರಕಾರಿ, ಸೊಪ್ಪಿನ ಬೆಲೆ ಗಗನಕ್ಕೇರಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆ ಏರಿಕೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಲಾಕ್‌ಡೌನ್‌ ವೇಳೆ ಇಳಿಕೆ ಕಂಡಿದ್ದ ತರಕಾರಿಗಳ ಬೆಲೆ ದಿನೇ ದಿನೆ ಏರುಗತಿಯಲ್ಲಿ ಸಾಗುತ್ತಿದೆ. ಕೋವಿಡ್‌ನ ಸಂದಿಗ್ಧ ಸಂದರ್ಭದಲ್ಲಿ ಬೆಲೆ ಏರಿಕೆ ಜನರನ್ನು ತಲ್ಲಣಗೊಳಿಸಿದೆ. ಆದರೆ, ಗ್ರಾಹಕರಿಗೆ ಬೆಲೆ ಬಿಸಿ ತಟ್ಟಿದರೆ, ರೈತರಿಗೆ ಖುಷಿ ತಂದಿದೆ.

ನವರಾತ್ರಿ ಸಮಯದಲ್ಲಿ ತರಕಾರಿ ಬೆಲೆ ಏರಿಕೆ ಸಾಮಾನ್ಯ. ಆದರೆ, ಈ ಬಾರಿ ಒಂದು ತಿಂಗಳಿಗೆ ಮುನ್ನವೇ ದರ ಹೆಚ್ಚಳಗೊಂಡಿದೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದಲ್ಲಿ ಮಳೆಗೆ ಬಹುತೇಕ ಬೆಳೆ ಹಾನಿಯಾಗಿದೆ. ಟೊಮೆಟೋಗೆ ಬೇಡಿಕೆ ಇರುವ ರಾಜ್ಯಗಳಿಗೆ ಪೂರೈಕೆಯಾಗುತ್ತಿರುವುದು ಸಹ ರಾಜ್ಯದಲ್ಲಿ ಕೊರತೆ ಸಮಸ್ಯೆಯಾಗಿದೆ. ಜತೆಗೆ ಲಾಕ್‌ಡೌನ್‌ ಸಮಯದಲ್ಲಿ ಬಹುತೇಕರು ತರಕಾರಿ ಬೆಳೆ ಬೆಳೆದಿಲ್ಲ. ಇದರಿಂದ ಪೂರೈಕೆ ಕೊರತೆಯಾಗಿರುವುದಾಗಿ ವ್ಯಾಪಾರಿಗಳು ತಿಳಿಸಿದರು.

ಮಾರುಕಟ್ಟೆಯಲ್ಲಿ ಟೊಮೆಟೋ, ಬೀನ್ಸ್‌, ಕ್ಯಾರೆಟ್‌, ಈರುಳ್ಳಿ, ನುಗ್ಗೆ, ಬೆಂಡೆಕಾಯಿ, ಬಟಾಣೆ, ಸೊಪ್ಪುಗಳ ದರದಲ್ಲಿ ಏರಿಕೆಯಾಗಿದೆ. ಟೊಮೆಟೋ ಹೆಸರು ಕೇಳಿದರೆ ಗ್ರಾಹಕರು ಗಾಬರಿಗೊಳ್ಳುವಂತಿದೆ. ಕೆಲವೆಡೆ ಕೆ.ಜಿ. ಟೊಮೆಟೋ 60-80 ರು. ವರೆಗೆ ಬೆಲೆ ದಾಖಲಿಸಿದೆ. ಕೆಲ ಪ್ರದೇಶಗಳಲ್ಲಿ ಬೆಲೆ ಕಡಿಮೆ ಇದ್ದರೆ, ವ್ಯಾಪಾರ-ವಹಿವಾಟು ಹೆಚ್ಚಾಗಿ ನಡೆಯುವ ಪ್ರದೇಶಗಳಲ್ಲಿ ಹೆಚ್ಚಿನ ಬೆಲೆಯಿದೆ. ಸಗಟು ಮಾರುಕಟ್ಟೆಯಲ್ಲಿ ಟೊಮೆಟೋ 14 ಕೆ.ಜಿ. ಬಾಕ್ಸ್‌ ಗೆ 400-550 ರು. (ಕೆ.ಜಿ.40-50)ವರೆಗೆ ನಿಗದಿಯಾಗಿದೆ. ಕ್ಯಾರೆಟ್‌ ಒಂದು ಚೀಲ 5000-6000 ರು. (ಊಟಿ ಕ್ಯಾರೆಟ್‌ ಕೆ.ಜಿ. 60 ರು.), ಬೀನ್ಸ್‌ ಕೆ.ಜಿ. 80-85 ರು., ಮೆಣಸಿನಕಾಯಿ ಕೆ.ಜಿ. 40 ರು. ನುಗ್ಗೆಕಾಯಿ ಕೆ.ಜಿ. 60 ರು., ಬೆಂಡೆಕಾಯಿ ಕೆ.ಜಿ. 50-60 ರು, ಬಟಾಣೆ ಕೆ.ಜಿ. 80-100 ರು.ಗೆ ಮಾರಾಟವಾಗುತ್ತಿವೆ. ಇನ್ನು ಇತರೆ ತರಕಾರಿಗಳು ಕೆ.ಜಿ.ಗೆ 10ರಿಂದ 30ರು. ವರೆಗೆ ಖರೀದಿಯಾಗುತ್ತಿದೆ. ಇನ್ನೆರಡು ಮೂರು ತಿಂಗಳು ಬೆಲೆಯಲ್ಲಿ ವ್ಯತ್ಯಾಸವಿರುತ್ತದೆ ಎಂದು ಯಶವಂತಪುರ-ದಾಸನಪುರ ಮಾರುಕಟ್ಟೆಯ ಮುನೀಂದ್ರ ತಿಳಿಸಿದರು.

'ಆ್ಯಪ್‌ ಮೂಲಕವೇ ಹಣ್ಣು, ತರಕಾರಿ ಬೀಜ ಖರೀದಿಸಿ'

ಈರುಳ್ಳಿ ದರ ಮತ್ತೆ ಏರಿಕೆ!

ರಾಜ್ಯದಲ್ಲಿ ಅತಿವೃಷ್ಟಿ, ರೋಗ ಭಾದೆಗೆ ಈರುಳ್ಳಿ ಬೆಳೆ ಹಾನಿಯಾಗಿದೆ. ಆಂಧ್ರಪ್ರದೇಶದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಎರಡು ವಾರಗಳ ಹಿಂದೆ 20-25 ರು. ಇದ್ದದ್ದು, 30-45 ರು.ವರೆಗೆ ಏರಿಕೆಯಾಗಿದೆ. ಕರ್ನಾಟಕದ ಈರುಳ್ಳಿ ಕೆ.ಜಿ.ಗೆ 26-27 ರು. ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ದ್ವಿತೀಯ, 3ನೇ ದರ್ಜೆಯ ಈರುಳ್ಳಿಯನ್ನು 30 ರು.ಗೂ ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ. ಜತೆಗೆ ಈರುಳ್ಳಿ ಕೊರತೆಯಿಂದಾಗಿ ಕೇಂದ್ರ ಸರ್ಕಾರ ರಫ್ತು ಅನ್ನು ನಿರ್ಬಂಧಿಸಿದೆ. ಇದರಿಂದ ದೇಶಾದ್ಯಂತ ಮುಂದಿನ ಬೆಳೆ ಬರುವವರೆಗೆ ಮಹಾರಾಷ್ಟ್ರದ ಹಳೆಯ ದಾಸ್ತಾನು ಇರುವ ಈರುಳ್ಳಿ ಅವಲಂಬಿಸಬೇಕಾಗಿದೆ. ಮಹಾರಾಷ್ಟ್ರ, ರಾಜಸ್ಥಾನದಲ್ಲಿ ನವೆಂಬರ್‌ ಬಳಿಕ ಹೊಸ ಬೆಳೆ ಬರಬೇಕು. ಈಗಾಗಲೇ ಮಳೆಗೆ ನಾಟಿ ಮಾಡಲು ಅಣಿಯಾಗಿರುವ ಸಸಿಗಳು ಸಹ ಹಾನಿಗೊಳಗಾಗಿವೆ. ಮಳೆ ಇನ್ನೂ ಸುರಿದರೆ ಉಳಿದ ಬೆಳೆಯೂ ಕೊಳೆತು ಹೋಗಬಹುದು. ಹೀಗಾಗಿ ಈರುಳ್ಳಿ ಧಾರಣೆ ಕಳೆದ ವರ್ಷದಂತೆ ಈ ವರ್ಷವೂ ಸಹ ಅತಿ ಹೆಚ್ಚಾಗುವ ಸಂಭವವಿದೆ ಎಂದು ಯಶವಂತಪುರ ಎಪಿಎಂಸಿ ರವಿ ಟ್ರೇಡಿಂಗ್‌ ಕಂಪನಿಯ ಬಿ. ರವಿಶಂಕರ್‌ ತಿಳಿಸಿದರು.

ಮೊಟ್ಟೆ ದರ 6 ರು.ಗೆ ಏರಿಕೆ

ಸದ್ಯ ಪಿತೃಪಕ್ಷ ಬಂದಿರುವುದರಿಂದ ಮಟನ್‌, ತರಕಾರಿ ಬೆಲೆ ಹೆಚ್ಚಾಗಿದೆ. ಇನ್ನೊಂದೆಡೆ ಮೊಟ್ಟೆಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಒಂದು ಮೊಟ್ಟೆದರ 6 ರು. ತಲುಪಿದೆ.

ಮಾವಳ್ಳಿ ಮಾರುಕಟ್ಟೆ ದರ (ಕೆ.ಜಿ.ಗಳಲ್ಲಿ)

ಹುರುಳಿಕಾಯಿ 80-100 ರು.
ಟೊಮೆಟೋ 50-80 ರು.
ಕ್ಯಾರೆಟ್‌ (ಊಟಿ) 80-90 ರು.
ನುಗ್ಗೆಕಾಯಿ 80-100 ರು.
ಬೆಂಡೆಕಾಯಿ 60-65 ರು.
ಟೊಮ್ಯಾಟೋ 50-60 ರು.
ಈರೇಕಾಯಿ 50 ರು.
ಎಲೆಕೋಸು 30 ರು.
ಅಲೂಗಡ್ಡೆ 30-45 ರು.
ಮೈಸೂರು ಬದನೆ 45 ರು.
ಗುಂಡು ಬದನೆ 20 ರು.
ಮೂಲಂಗಿ 25-30 ರು.
ಈರುಳ್ಳಿ 25-35 ರು.
ಬೀಟ್‌ರೂಟ್‌ 30-50 ರು.
ಶುಂಠಿ 120 ರು.
ಬೆಳ್ಳುಳ್ಳಿ 120 ರು.
ಹೂಕೋಸು 25-30 ರು.
ಸೀಮೆಬದನೆಕಾಯಿ 25-30 ರು.
ಹಾಪ್‌ಕಾಮ್ಸ್‌ ಸೊಪ್ಪು, ತರಕಾರಿ ದರ (ಕೆ.ಜಿ.ಗಳಲ್ಲಿ)
ಗೋರಿಕಾಯಿ 74 ರು.
ಊಟಿ ಕ್ಯಾರಟ್‌ 95 ರು.
ನಾಟಿ ಕ್ಯಾರಟ್‌ 80 ರು.
ನಿಂಬೆಹಣ್ಣು 98 ರು.
ಆಲೂಗಡ್ಡೆ 46 ರು.
ಎಲೆಕೋಸು 29 ರು.
ಮೂಲಂಗಿ 30 ರು.
ಟೊಮೆಟೋ 55 ರು.
ಈರುಳ್ಳಿ 55 ರು.
ಮೆಂತ್ಯ ಸೊಪ್ಪು 74 ರು.
ಪಾಲಾಕ್‌ 48 ರು.
ಸಬ್ಬಕ್ಕಿ 80 ರು.
ಕೊತ್ತಂಬರಿ ಸೊಪ್ಪು 80 ರು.