ಸಿಎಂ ಯಡಿಯೂರಪ್ಪಗೆ ಕರ್ನಾಟಕ ಬಂದ್ ಎಚ್ಚರಿಕೆ ಸಂದೇಶ
ತಮಿಳುನಾಡು ಕಾವೇರಿ ಯೋಜನೆಯನ್ನು ಸರ್ಕಾರ ತಡೆಹಿಡಿಯದಿದ್ದರೇ ಕರ್ನಾಟಕ ಬಂದ್ ಮಾಡುವುದಾಗಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ಕೊಟ್ಟಿದ್ದಾರೆ.
ಚಾಮರಾಜನಗರ, (ಫೆ.25): ತಮಿಳುನಾಡು ಕಾವೇರಿ ಯೋಜನೆ ಖಂಡಿಸಿ ಇಂದು (ಗುರುವಾರ) ಚಾಮರಾಜನಗರದ ಜಿಲ್ಲಾಡಳಿತ ಭವನದ ಮುಂದೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ಮಾಡಿದರು.
ಈ ವೇಳೆ ಮಾತನಾಡಿದ ವಾಟಾಳ್, ಜಯಲಲಿತಾ ಸಾವನ್ನಪ್ಪಿದ ನಂತರ ತಮಿಳುನಾಡು ಸರ್ಕಾರ ಬಿಜೆಪಿ ಏಜೆಂಟ್ ಆಗಿದೆ. ಹಾಗಾಗಿ ಕೇಂದ್ರದ ಮೋದಿ ಸರ್ಕಾರ ಈ ಯೋಜನೆಗೆ 6,800 ಕೋಟಿ ರೂ. ಬಳುವಳಿ ನೀಡಿದೆ. ನದಿ ಜೋಡಣೆ ವಿಚಾರ ಮಾಹಿತಿ ಕಲೆಹಾಕುವಲ್ಲಿ ರಾಜ್ಯ ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದರು.
ತಮಿಳುನಾಡಲ್ಲಿ ಮತ್ತೊಂದು 'ಕಾವೇರಿ' ಯೋಜನೆ: ಕರ್ನಾಟಕದ ಯೋಜನೆಗೆ ಅಡ್ಡಿಯಾಗುವ ಆತಂಕ
118 ಕಿಲೋ ಮೀಟರ್ ಕಾಲುವೆ ತೆಗೆದು ನದಿ ಜೋಡಣೆ ಮಾಡಿದಲ್ಲಿ ಮುಂದೆ ಕರ್ನಾಟಕಕ್ಕೆ ಭಾರೀ ಅಪಾಯ ಹಾಗೂ ಅನ್ಯಾಯವಾಗಲಿದೆ. ಇಷ್ಟೊಂದು ದೊಡ್ಡ ಮಟ್ಟದ ಯೋಜನೆಯ ಬಗ್ಗೆ ಮಾಹಿತಿ ಕಲೆಹಾಕುವಲ್ಲಿ ವಿಫಲವಾಗಿದೆ. ಯಡಿಯೂರಪ್ಪ ತಮ್ಮ ಕುರ್ಚಿ ಉಳಿಸಿಕೊಳ್ಳುವಲ್ಲಿ ತಲ್ಲೀನರಾಗಿದ್ದು ರಾಜ್ಯದ ಹಿತಕಾಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಉಳಿಯಲು ನೈತಿಕತೆ ಇಲ್ಲ. ಕೂಡಲೇ ಈ ಯೋಜನೆ ಕಾಮಗಾರಿ ತಡೆಹಿಡಿಯಬೇಕು. ತಮಿಳುನಾಡಿನ ವಿರುದ್ಧ ಹೋರಾಟ ರೂಪಿಸಲು 27 ರಂದು ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆಗಳ ಸಭೆ ಕರೆಯಲಾಗಿದೆ. ಅಷ್ಟರೊಳಗೆ ತಡೆಹಿಡಿಯದಿದ್ದಲ್ಲಿ ಕರ್ನಾಟಕ ಬಂದ್ಗೆ ತೀರ್ಮಾನಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.