ತಮಿಳುನಾಡಲ್ಲಿ ಮತ್ತೊಂದು 'ಕಾವೇರಿ' ಯೋಜನೆ: ಕರ್ನಾಟಕದ ಯೋಜನೆಗೆ ಅಡ್ಡಿಯಾಗುವ ಆತಂಕ

ಕಾವೇರಿ-ಗುಂಡಾರ್‌ ನದಿ ಜೋಡಣೆಗೆ ತಮಿಳುನಾಡು ಚಾಲನೆ| ಕಾವೇರಿ ನದಿಯ ಹೆಚ್ಚುವರಿ ನೀರು ಬಳಕೆಗೆ ಯೋಜನೆ| ಇದರಿಂದ ಕರ್ನಾಟಕದ ಯೋಜನೆಗೆ ಅಡ್ಡಿಯಾಗುವ ಆತಂಕ

Tamil Nadu govt lays foundation stone for Cauvery Gundar interlinking pod

ಪುದುಕೊಟ್ಟೈ(ಫೆ.22): ಕಾವೇರಿ ನದಿಯ ಹೆಚ್ಚುವರಿ ನೀರನ್ನು ಬಳಕೆ ಮಾಡಿಕೊಳ್ಳಲು ಮೇಕೆದಾಟು ಅಣೆಕಟ್ಟು ನಿರ್ಮಿಸುವ ಕರ್ನಾಟಕ ಸರ್ಕಾರದ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿರುವ ತಮಿಳುನಾಡು ಸರ್ಕಾರ ಇದೀಗ ಕಾವೇರಿ, ವೈಗೈ ಹಾಗೂ ಗುಂಡಾರ್‌ ನದಿಗಳನ್ನು ಜೋಡಿಸಿ ಬರಪೀಡಿತ ಪ್ರದೇಶಗಳಿಗೆ ನೀರು ಒದಗಿಸುವ ಯೋಜನೆಯೊಂದಕ್ಕೆ ಚಾಲನೆ ನೀಡಿದೆ. ಕೇಂದ್ರದ ಆರ್ಥಿಕ ನೆರವಿನೊಂದಿಗೆ 14,400 ಕೋಟಿ ರು. ಮೊತ್ತದ ನದಿ ಜೋಡಣೆ ಯೋಜನೆಗೆ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ವೀರಾಳಿಮಲೈ- ಕಣ್ಣತ್ತೂರ್‌ ಬಳಿ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಈ ಯೋಜನೆಯಿಂದ ತನ್ನ ಪಾಲಿನ ಕಾವೇರಿ ನದಿಯ ಹೆಚ್ಚುವರಿ ನೀರನ್ನು ಬಳಕೆ ಮಾಡಿಕೊಳ್ಳುತ್ತದೆ. ಆಗ ಹೆಚ್ಚುವರಿ ನೀರು ಬಳಸಿಕೊಳ್ಳುವ ಕರ್ನಾಟಕದ ಯೋಜನೆಗಳಿಗೆ ಮತ್ತಷ್ಟುಅಡ್ಡಿಪಡಿಸಬಹುದು ಎಂದು ಹೇಳಲಾಗಿದೆ. ಅಲ್ಲದೇ ದಕ್ಷಿಣ ಭಾರತದ ನದಿ ಹೆಸರಿನಲ್ಲಿ ಕೇಂದ್ರದಿಂದಲೂ ಹಣಕಾಸು ನೆರವನ್ನು ತಮಿಳುನಾಡು ಸರ್ಕಾರ ಪಡೆದುಕೊಂಡಿದೆ.

ಏನಿದು ಯೋಜನೆ?:

ಕರೂರು ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ ಮಾಯನೂರ್‌ ಜಲಾಶಯದಿಂದ ಕಾವೇರಿ ನದಿಯ ಹೆಚ್ಚುವರಿ ನೀರನ್ನು ಕಾಲುವೆಗಳ ಮೂಲಕ ಬರಪೀಡಿತ ಪ್ರದೇಶಗಳಿಗೆ ಒದಗಿಸುವ ಯೋಜನೆ ಇದಾಗಿದೆ. ಒಟ್ಟು 262 ಕಿ.ಮೀ. ಉದ್ದದ ಕಾಲುವೆ ನಿರ್ಮಾಣ ಯೋಜನೆ ಇದಾಗಿದ್ದು, ಯೋಜನೆಯ ಮೊದಲ ಹಂತವಾಗಿ 6,300 ಕೋಟಿ ರು.ವೆಚ್ಚದಲ್ಲಿ 118.5 ಕಿ.ಮೀ. ಉದ್ದದ ಕಾಲುವೆ ನಿರ್ಮಾಣಕ್ಕೆ ಚಾಲನೆ ದೊರೆತಿದೆ. ಇದರಿಂದ ಪ್ರವಾಹದ ವೇಳೆ ವ್ಯರ್ಥವಾಗಿ ಸಮುದ್ರ ಸೇರುವ ಸುಮಾರು 6,300 ಕ್ಯುಬಿಕ್‌ ಅಡಿಯಷ್ಟುನೀರನ್ನು ತಮಿಳುನಾಡು ಬಳಕೆ ಮಾಡಿಕೊಳ್ಳಬಹುದಾಗಿದ್ದು, ಪುದುಕೊಟ್ಟೈ, ರಾಮನಾಥಪುರಂ, ಶಿವಗಂಗಾ ಹಾಗೂ ವಿರುದುನಗರ ಜಿಲ್ಲೆಗಳಲ್ಲಿ ಅಂತರ್‌ ಜಲ ಹೆಚ್ಚಿಸಲು, 1 ಸಾವಿರಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಲು ಹಾಗೂ 1 ಲಕ್ಷ ಎಕರೆ ಪ್ರದೇಶಕ್ಕೆ ನೀರುಣಿಸಲು ಬಳಕೆ ಮಾಡಿಕೊಳ್ಳಬಹುದಾಗಿದೆ.

Latest Videos
Follow Us:
Download App:
  • android
  • ios