Vande Bharat Express: ಚೆನ್ನೈ-ಮೈಸೂರು ಪ್ರಯಾಣಕ್ಕೆ 921 ರೂಪಾಯಿ ಟಿಕೆಟ್!
ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ನ.11 ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಸಂಚಾರ ಮಾಡಲಿರುವ ಈ ಎಕ್ಸ್‌ಪ್ರೆಸ್ ರೈಲಿನ ದರವನ್ನು 921 ರೂಪಾಯಿ ನಿಗದಿ ಮಾಡಲಾಗಿದ್ದು, 7 ಗಂಟೆಗಿಂತ ಕಡಿಮೆ ಅವಧಿಯಲ್ಲಿ ಸಂಚಾರ ಮಾಡಲಿದೆ.
ನವದೆಹಲಿ (ನ. 4): ದೇಶದ ಅತ್ಯಂತ ವೇಗದ ಮತ್ತು ವಿಮಾನದ ರೀತಿಯ ಐಷಾರಾಮಿ ಸೌಲಭ್ಯ ಹೊಂದಿದ ರೈಲು ಎಂಬ ಹಿರಿಮೆಗೆ ಪಾತ್ರವಾಗಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನ.11ರಿಂದ ಮೈಸೂರು ಮತ್ತು ಚೆನ್ನೈ ನಡುವೆ ತನ್ನ ಮೊದಲ ಸಂಚಾರ ನಡೆಸಲಿದೆ. ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಎಂಬ ಹಿರಿಮಗೆ ಪಾತ್ರವಾಗಿರುವ ಈ ರೈಲು ಉಭಯ ನಗರಗಳ ನಡುವೆ ಸಂಚಾರಕ್ಕೆ ಎಷ್ಟುಸಮಯ ಪಡೆಯುತ್ತದೆ, ಟಿಕೆಟ್ ದರ ಎಷ್ಟಿರಬಹುದು ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಗರಿಷ್ಠ ವೇಗ 160 ಕಿ.ಮೀ. ಇದೆಯಾದರೂ, ಮೈಸೂರು ಮತ್ತು ಚೆನ್ನೈ ನಡುವೆ ಗಂಟೆಗೆ ಗರಿಷ್ಠ 75 ಕಿ.ಮೀ ವೇಗದಲ್ಲಿ ಸಂಚರಿಸಲಿದೆ ಎನ್ನಲಾಗಿದೆ. ಈ ಲೆಕ್ಕಾಚಾರದಲ್ಲಿ ಮೈಸೂರು ಮತ್ತು ಚೆನ್ನೈ ನಡುವೆ ಸಂಚಾರಕ್ಕೆ 7 ತಾಸು ತೆಗೆದುಕೊಳ್ಳಲಿದೆ.
ದರ: ಮೈಸೂರು- ಚೆನ್ನೈ ನಡುವೆ ಎಕಾನಮಿ ಕ್ಲಾಸ್‌ಗೆ 921 ರು, ಎಕ್ಸಿಕ್ಯುಟಿವ್ ಕ್ಲಾಸ್ ದರ 1,880 ರು.ನಷ್ಟಿರಲಿದೆ. ಇನ್ನು ಮೈಸೂರಿನಿಂದ ಬೆಂಗಳೂರಿಗೆ ಟಿಕೆಟ್ ದರ ಎಕಾನಮಿ ಕ್ಲಾಸಿನಲ್ಲಿ 368 ರು. ಹಾಗೂ ಎಕ್ಸಿಕ್ಯುಟಿವ್ ಕ್ಲಾಸಿನಲ್ಲಿ 768 ರು.ನಷ್ಟುನಿಗದಿ ಪಡಿಸಲಾಗಿದೆ. ಶತಾಬ್ದಿಗೆ ಹೋಲಿಸಿದರೆ ವಂದೇ ಭಾರತ ಎಕ್ಸಪ್ರೆಸ್ ಟಿಕೆಟ್ ದರ ಶೇ. 39ರಷ್ಟುಹೆಚ್ಚಾಗಿದೆ.
ಈ ರೈಲು ವಿದ್ಯುತ್‌ಚಾಲಿತವಾಗಿದ್ದು, ಈವರೆಗಿನ ರೈಲಿಗಿಂತ ಸುಧಾರಿತ ತಂತ್ರಜ್ಞಾನವನ್ನು ಹೊಂದಿದೆ. ಸಂಪೂರ್ಣ ಏರ್‌ಕಂಡಿಷನ್ ಬೋಗಿಗಳನ್ನು ಹೊಂದಿದ್ದು, ಎಕಾನಮಿ ಹಾಗೂ ಎಕ್ಸಿಕುಟಿವ್ ಎಂಬ 2 ವಿಭಾಗ ಇದರಲ್ಲಿದೆ. ಎಕ್ಸಿಕ್ಯುಟಿವ್ ಬೋಗಿಗಳಲ್ಲಿರುವ ಆಸನಗಳನ್ನು 180 ಡಿಗ್ರಿ ತಿರುಗಿಸಬಹುದಾಗಿದೆ. ಬುಧವಾರವನ್ನು ಹೊರತುಪಡಿಸಿ ವಾರದ ಉಳಿದ 6 ದಿನ ಈ ರೈಲು ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗವಾಗಿ ಸಂಚರಿಸಲಿದೆ. 16 ಬೋಗಿಗಳು ಹಾಗೂ 1128 ಪ್ರಯಾಣಿಕರ ಸಾಮರ್ಥ್ಯವನ್ನು ಇದು ಹೊಂದಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಟೈಮಿಂಗ್: ವಂದೇ ಭಾರತ್ ಎಕ್ಸ್‌ಪ್ರೆಸ್ ಚೆನ್ನೈ ಸೆಂಟ್ರಲ್‌ನಿಂದ (Chennai Central) ಬೆಳಿಗ್ಗೆ 05:50 ಕ್ಕೆ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಅಂದಾಜು 359 ಕಿಲೋಮೀಟರ್ ಪ್ರಯಾಣ ಮಾಡಿದ ಬಳಿಕ 10:25ಕ್ಕೆ ಬೆಂಗಳೂರು ಸಿಟಿ ಜಂಕ್ಷನ್‌ಗೆ ತಲುಪಲಿದೆ. ಇಲ್ಲಿ ರೈಲು 5 ನಿಮಿಷಗಳ ಕಾಲ ನಿಲ್ಲಲಿದ್ದು, ಬೆಳಗ್ಗೆ 10.30ಕ್ಕೆ ಹೊರಡಲಿದೆ. ಇದು ಇನ್ನೂ 137.6 ಕಿ.ಮೀ ಕ್ರಮಿಸಿ ಮೂಲಸ್ಥಾನವಾದ ಮೈಸೂರು ಜಂಕ್ಷನ್ ಅನ್ನು ಮಧ್ಯಾಹ್ನ 12:30 ಕ್ಕೆ ತಲುಪುತ್ತದೆ.
ಗೂಳಿಗೆ ಗುದ್ದಿ ಮತ್ತೆ ನುಜ್ಜುಗುಜ್ಜಾದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು..!
ಹಿಂದಿರುಗುವ ಪ್ರಯಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಮೈಸೂರು ಜಂಕ್ಷನ್‌ನಿಂದ (Mysore Junction) ಮಧ್ಯಾಹ್ನ 1:05 ಕ್ಕೆ ಹೊರಡಲಿದ್ದು, ಮಧ್ಯಾಹ್ನ 2:55 ಕ್ಕೆ ಬೆಂಗಳೂರು ಸಿಟಿ ಜಂಕ್ಷನ್‌ಗೆ ತಲುಪಲಿದೆ. 5 ನಿಮಿಷಗಳ ನಿಲುಗಡೆ ನಂತರ, ರೈಲು ಬೆಂಗಳೂರು ಸಿಟಿ (Bengaluru City Junction) ಜಂಕ್ಷನ್‌ನಿಂದ ಮಧ್ಯಾಹ್ನ 3:00 ಗಂಟೆಗೆ ಹೊರಡಲಿದೆ. 359 ಕಿಲೋಮೀಟರ್ ಪ್ರಯಾಣದೊಂದಿಗೆ ರಾತ್ರಿ 7:35 ಕ್ಕೆ ಚೆನ್ನೈ ಸೆಂಟ್ರಲ್ ತಲುಪಲಿದೆ.
Vande Bharat Express: ನ.10ರಂದು ರಾಜ್ಯಕ್ಕೆ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್!
ವೇಳಾಪಟ್ಟಿ& ಟ್ರೇನ್ ನಂಬರ್: ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharath Express) ವಾರದಲ್ಲಿ ಏಳು ದಿನ ಪ್ರಯಾಣ ನಡೆಸಲಿದೆ. ಬುಧವಾರ ಹೊರತುಪಡಿಸಿ ವಾರದ ಎಲ್ಲಾ ದಿನ ಇದು ಸೇವೆಯಲ್ಲಿ ಇರಲಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಚೆನ್ನೈ ಸೆಂಟ್ರಲ್‌ನಿಂದ ಮೈಸೂರು ಜಂಕ್ಷನ್ ರೈಲು 20608 ಸಂಖ್ಯೆಯನ್ನು ಹೊಂದಿರಲಿದ್ದರೆ, ವಂದೇ ಭಾರತ್ ಎಕ್ಸ್‌ಪ್ರೆಸ್ ಮೈಸೂರು ಜಂಕ್ಷನ್‌ನಿಂದ ಚೆನ್ನೈ ಸೆಂಟ್ರಲ್ ರೈಲು 20607 ಸಂಖ್ಯೆಯನ್ನು ಹೊಂದಿರಲಿದೆ.