ರಾಜ್ಯಕ್ಕೆ ಮೂರನೇ ‘ವಂದೇ ಭಾರತ್‌ ಎಕ್ಸ್‌ಪ್ರೆಸ್‌’ ರೈಲು ಲಭ್ಯವಾಗುತ್ತಿದ್ದು, ಅಂತಾರಾಜ್ಯ ಸಂಪರ್ಕಿಸುವ ಈ ರೈಲು ಯಶವಂತಪುರ-ಕಾಚಿಗುಡ ನಡುವೆ (ಬೆಂಗಳೂರು-ಹೈದ್ರಾಬಾದ್‌) ಆಗಸ್ಟ್‌ ಅಂತ್ಯದೊಳಗೆ ಸಂಚಾರ ಆರಂಭಿಸುವ ನಿರೀಕ್ಷೆಯಿದೆ.

ಬೆಂಗಳೂರು (ಆ.3) :  ರಾಜ್ಯಕ್ಕೆ ಮೂರನೇ ‘ವಂದೇ ಭಾರತ್‌ ಎಕ್ಸ್‌ಪ್ರೆಸ್‌’ ರೈಲು ಲಭ್ಯವಾಗುತ್ತಿದ್ದು, ಅಂತಾರಾಜ್ಯ ಸಂಪರ್ಕಿಸುವ ಈ ರೈಲು ಯಶವಂತಪುರ-ಕಾಚಿಗುಡ ನಡುವೆ (ಬೆಂಗಳೂರು-ಹೈದ್ರಾಬಾದ್‌) ಆಗಸ್ಟ್‌ ಅಂತ್ಯದೊಳಗೆ ಸಂಚಾರ ಆರಂಭಿಸುವ ನಿರೀಕ್ಷೆಯಿದೆ.

ಮೈಸೂರು-ಚೆನ್ನೈ, ಬೆಂಗಳೂರು-ಧಾರವಾಡ ಬಳಿಕ ಇದೀಗ ಮತ್ತೊಂದು ವಂದೇ ಭಾರತ್‌(Vande bharat) ರಾಜ್ಯದಲ್ಲಿ ಸಂಚರಿಸುತ್ತಿದೆ. ದಕ್ಷಿಣ ಮಧ್ಯ ರೈಲ್ವೆ ನಿರ್ವಹಿಸಲಿರುವ ರೈಲು ಇದಾಗಿದೆ. ಸುಮಾರು 7 ಗಂಟೆ ಅವಧಿಯಲ್ಲಿ ಈ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಯಶವಂತಪುರ-ಕಾಚಿಗುಡ ನಡುವಿನ 610 ಕಿ.ಮೀ. ಅಂತರವನ್ನು ಕ್ರಮಿಸಲಿದೆ ಎನ್ನಲಾಗಿದೆ. ಆದರೆ, ರಾಜ್ಯದಲ್ಲಿ ಈ ರೈಲು ಕೇವಲ 80-85 ಕಿ.ಮೀ. ಮಾತ್ರ ಸಂಚರಿಸಲಿದೆ.

ವಂದೇ ಭಾರತ್‌ ರೈಲಲ್ಲೂ ನಂದಿನಿ ಉತ್ಪನ್ನ

ಕಾಚಿಗುಡದಿಂದ ಬೆಳಗ್ಗೆ ಹೊರಟು ಮಧ್ಯಾಹ್ನ 1 ಗಂಟೆಗೆ ಯಶವಂತಪುರಕ್ಕೆ ಬರಬಹುದು, ಪುನಃ ಇಲ್ಲಿಂದ ಹೊರಟು ರಾತ್ರಿ ವೇಳೆಗೆ ಕಾಚಿಗುಡ ತಲುಪುವ ಸಾಧ್ಯತೆಯಿದೆ. ಯಶವಂತಪುರ, ಧರ್ಮಾವರಂ, ದೋನ್‌, ಕರ್ನೂಲ್‌ ನಗರ, ಗಡ್ವಾಲ ಜಂಕ್ಷನ್‌, ಮೆಹಬೂಬ ನಗರ, ಶಾದ್‌ನಗರ ಹಾಗೂ ಕಾಚಿಗುಡ ಮೂಲಕ ಈ ರೈಲು ಸಂಚರಿಸಲಿದೆ.

ಈಗಾಗಲೇ ಕಾಚಿಗುಡ-ದೊನ್‌ ನಡುವೆ ಪ್ರಾಯೋಗಿಕ ಸಂಚಾರ ನಡೆಸಲಾಗಿದ್ದು, ಯಶವಂತಪುರದವರೆಗೆ ಪೂರ್ಣ ಪ್ರಾಯೋಗಿಕ ಸಂಚಾರ ಶೀಘ್ರವೇ ನಡೆಸುವುದಾಗಿ ತೆಲಂಗಾಣ ಕೇಂದ್ರ ಕಚೇರಿಯ ದಕ್ಷಿಣ ಮಧ್ಯ ರೈಲ್ವೆ ಹೇಳಿಕೆ ನೀಡಿದೆ.

ರಾಜ್ಯಕ್ಕೆ ಹೆಚ್ಚು ಉಪಯೋಗವಿಲ್ಲ:

ರೈಲ್ವೆ ಹೋರಾಟಗಾರ ಕೃಷ್ಣಪ್ರಸಾದ್‌ ಈ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಈ ರೈಲು ಕೇವಲ 80-85 ಕಿ.ಮೀ. ಮಾತ್ರ ಸಂಚರಿಸಲಿದೆ. ಇದರಿಂದ ರಾಜ್ಯದ ಜನತೆಗೆ ಹೆಚ್ಚಿನ ಪ್ರಯೋಜನ ಆಗುವ ನಿರೀಕ್ಷೆಯಿಲ್ಲ. ಯಶವಂತಪುರ ದಾಟಿದೊಡನೆ ಹಿಂದುಪುರ ರೈಲ್ವೆ ನಿಲ್ದಾಣ (ಆಂಧ್ರಪ್ರದೇಶ ಪ್ರವೇಶ) ಬಂದುಬಿಡುತ್ತದೆ. ವಂದೇ ಭಾರತ್‌ ರೈಲು ಬೆಂಗಳೂರಿಂದ ಹೈದ್ರಾಬಾದ್‌ ಹೋಗುವವರಿಗೆ, ಎರಡು ಐಟಿ ಸಿಟಿಗಳ ಉದ್ಯೋಗಿಗಳಿಗೆ ಮಾತ್ರ ಅನುಕೂಲ. ಗುಂತಕಲ್ಲು, ರಾಯಚೂರು ಮೂಲಕ ಸಂಚರಿಸಿದ್ದರೆ ರಾಯಚೂರು ಜಿಲ್ಲೆ, ಮಂತ್ರಾಲಯಕ್ಕೆ ತೆರಳುವವರಿಗೆ, ಸೇಡಂ ಬಳಿಯ ಸಿಮೆಂಟ್‌ ಕೈಗಾರಿಕೆ ಭಾಗ, ಯಾದಗಿರಿ ಜಿಲ್ಲೆ ಕಲ್ಯಾಣ ಕರ್ನಾಟಕ ಭಾಗದ ಪ್ರಯೋಜನ ಆಗುತ್ತಿತ್ತು ಎಂದಿದ್ದಾರೆ.

Vande Bharat Express: ಕೇಸರಿ ಬಣ್ಣದ ಐಷಾರಾಮಿ ರೈಲಿನಲ್ಲಿ ಕಾಣಲಿದೆ ಈ 10 ಬದಲಾವಣೆಗಳು

ವಂದೇಭಾರತ್‌ ಎಕ್ಸ್‌ಪ್ರೆಸ್‌ ರೈಲು ಆ.6 ಅಥವಾ ಆ.15ರಂದು ಚಾಲನೆ ಪಡೆಯಬಹುದು. ಇಲ್ಲದಿದ್ದರೆ ಆಗಸ್ಟ್‌ ಅಂತ್ಯದೊಳಗೆ ಖಚಿತವಾಗಿ ಸಂಚಾರ ಆರಂಭಿಸಲಿದೆ ಎಂದು ಮೂಲಗಳು ತಿಳಿಸಿವೆ. ಈ ಮಾರ್ಗದ ವಿದ್ಯುದೀಕರಣ ಸಂಪೂರ್ಣವಾಗಿದೆ. ಆದರೆ, ಹೊಸ ವಂದೇ ಭಾರತ್‌ ರೈಲಿನ ಸಂಚಾರದ ವೇಳಾಪಟ್ಟಿ, ಎಂದಿನಿಂದ ಆರಂಭವಾಗಲಿದೆ ಎಂಬುದು ಸೇರಿ ಇತರೆ ಮಾಹಿತಿ ಬಂದಿಲ್ಲ ಎಂದು ನೈಋುತ್ಯ ರೈಲ್ವೆ ಬೆಂಗಳೂರು ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್‌ ಪ್ರತಿಕ್ರಿಯಿಸಿದರು.