ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಬಿ.ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಅನುಮತಿ ನೀಡಿದ್ದಾರೆ. 

ಬೆಂಗಳೂರು (ಏ.10): ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಬಿ.ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಅನುಮತಿ ನೀಡಿದ್ದಾರೆ. ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಸಂಬಂಧ ಬಿ.ನಾಗೇಂದ್ರ ಸೇರಿ 24 ಮಂದಿ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ)ವು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದೂರು ಸಲ್ಲಿಸಿತ್ತು. 

ಹಗರಣ ನಡೆದ ಸಮಯದಲ್ಲಿ ಬಿ.ನಾಗೇಂದ್ರ ಸಚಿವರಾಗಿದ್ದ ಕಾರಣ ಅವರ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಅಗತ್ಯ. ಈ ಹಿನ್ನೆಲೆಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಇ.ಡಿ. ಮನವಿ ಮಾಡಿತ್ತು. ರಾಜ್ಯಪಾಲರು ಬುಧವಾರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದು, ಇದರಿಂದ ಸಂಪುಟ ಪುನರ್‌ ರಚನೆ ವೇಳೆ ಮತ್ತೆ ಸಚಿವರಾಗುವ ಆಸೆ ಹೊತ್ತಿದ್ದ ಬಿ.ನಾಗೇಂದ್ರ ಅವರಿಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.

ಹೊಸದಾಗಿ ತನಿಖಾ ಪ್ರಕ್ರಿಯೆ ಇಲ್ಲ: ಬಿ.ನಾಗೇಂದ್ರ ವಿರುದ್ಧದ ವಾಲ್ಮೀಕಿ ನಿಗಮ ಹಗರಣ ಪ್ರಕರಣದಲ್ಲಿ ಇ.ಡಿ ಹಾಗೂ ರಾಜ್ಯ ಸರ್ಕಾರದ ಎಸ್ಐಟಿ ತನಿಖೆ ಈಗಾಗಲೇ ಮುಗಿದಿದೆ. ಪ್ರಸ್ತುತ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್‌ಗೆ ಮಾತ್ರ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಹೀಗಾಗಿ ನ್ಯಾಯಾಲಯದ ಪ್ರಕ್ರಿಯೆ ಹೊರತುಪಡಿಸಿ ಉಳಿದಂತೆ ಯಾವುದೇ ತನಿಖಾ ಪ್ರಕ್ರಿಯೆಯೂ ಹೊಸದಾಗಿ ಶುರುವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಲಸ ಮಾಡಲಾಗದವರು ಹುದ್ದೆ ಬಿಡಿ: ಮಲ್ಲಿಕಾರ್ಜುನ ಖರ್ಗೆ ತಾಕೀತು

ನಿಗಮದ 187 ಕೋಟಿ ರು. ಹಣ ದುರ್ಬಳಕೆ ಆರೋಪದ ಮೇಲೆ ಕಳೆದ ವರ್ಷ ಇ.ಡಿ ಅಧಿಕಾರಿಗಳು ನಾಗೇಂದ್ರ ಅವರನ್ನು ಬಂಧಿಸಿದ್ದರು. ಆರೋಪದ ಬೆನ್ನಲ್ಲೇ ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಗಿತ್ತು. ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ಇ.ಡಿ ಅಧಿಕಾರಿಗಳು 4,970 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದರು. ಆರೋಪಪಟ್ಟಿಯಲ್ಲಿ 84 ಕೋಟಿ ರು. ಅಕ್ರಮ ವಹಿವಾಟು ನಡೆದಿರುವುದಾಗಿ ಆರೋಪಿಸಿದ್ದರು. ಮತ್ತೊಂದೆಡೆ ರಾಜ್ಯ ಸರ್ಕಾರ ಇದಕ್ಕೂ ಮೊದಲು ನೇಮಿಸಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) ಬಿ. ನಾಗೇಂದ್ರ ಅವರಿಗೆ ಕ್ಲೀನ್‌ಚಿಟ್‌ ನೀಡಿತ್ತು.