ಮಹರ್ಷಿ ವಾಲ್ಮೀಕಿ ನಿಗಮದಿಂದ ಅಕ್ರಮವಾಗಿ ಹೈದರಾಬಾದ್‌ನ ಸಹಕಾರಿ ಬ್ಯಾಂಕ್‌ನ 17 ನಕಲಿ ಖಾತೆಗಳಿಗೆ ವರ್ಗಾವಣೆಯಾಗಿದ್ದ ಹಣವನ್ನು ಡ್ರಾ ಮಾಡಿಕೊಂಡು ಬಳ್ಳಾರಿ ಹಾಗೂ ಬೆಂಗಳೂರಿನ ವ್ಯಕ್ತಿಗಳಿಗೆ ನಗದು ರೂಪದಲ್ಲಿ ರವಾನೆ ಮಾಡಿರುವ ಬಗ್ಗೆ ವಿಶೇಷ ತನಿಖಾ ದಳ (ಎಸ್‌ಐಟಿ) ಪತ್ತೆಹಚ್ಚಿದೆ ಎಂದು ತಿಳಿದುಬಂದಿದೆ.

ಬೆಂಗಳೂರು (ಜೂ.08): ಮಹರ್ಷಿ ವಾಲ್ಮೀಕಿ ನಿಗಮದಿಂದ ಅಕ್ರಮವಾಗಿ ಹೈದರಾಬಾದ್‌ನ ಸಹಕಾರಿ ಬ್ಯಾಂಕ್‌ನ 17 ನಕಲಿ ಖಾತೆಗಳಿಗೆ ವರ್ಗಾವಣೆಯಾಗಿದ್ದ ಹಣವನ್ನು ಡ್ರಾ ಮಾಡಿಕೊಂಡು ಬಳ್ಳಾರಿ ಹಾಗೂ ಬೆಂಗಳೂರಿನ ವ್ಯಕ್ತಿಗಳಿಗೆ ನಗದು ರೂಪದಲ್ಲಿ ರವಾನೆ ಮಾಡಿರುವ ಬಗ್ಗೆ ವಿಶೇಷ ತನಿಖಾ ದಳ (ಎಸ್‌ಐಟಿ) ಪತ್ತೆಹಚ್ಚಿದೆ ಎಂದು ತಿಳಿದುಬಂದಿದೆ. ಹೈದರಾಬಾದ್‌ನ ‘ಫಸ್ಟ್‌ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್‌ ಸೊಸೈಟಿ’ಯ (ಎಫ್‌ಎಫ್‌ಸಿಸಿಎಸ್‌ಎಲ್‌) 18 ಖಾತೆಗಳಿಗೆ ವಾಲ್ಮೀಕಿ ನಿಗಮದ ಖಾತೆಯಿಂದ ಅಕ್ರಮವಾಗಿ 94.73 ಕೋಟಿ ರು. ಹಣ ವರ್ಗಾವಣೆಯಾಗಿತ್ತು. 

ಈ ಪೈಕಿ ಒಂದು ಖಾತೆದಾರ ಡ್ರಾ ಮಾಡಿದ್ದ 5 ಕೋಟಿ ರು. ಹಣವನ್ನು ಮತ್ತೆ ಬ್ಯಾಂಕ್‌ಗೆ ಮರಳಿಸಿದ್ದ. ಇನ್ನುಳಿದ 17 ಖಾತೆಗಳಿದ್ದ 89.73 ಕೋಟಿ ರು ಹಣದಲ್ಲಿ ಕೆಲವು ಖಾತೆದಾರರು ಡ್ರಾ ಮಾಡಿದ್ದರು. ಆನಂತರ ಆ ಹಣವನ್ನು ನಗದು ರೂಪದಲ್ಲಿ ಬಳ್ಳಾರಿ ಹಾಗೂ ಬೆಂಗಳೂರಿನ ವ್ಯಕ್ತಿಗಳಿಗೆ ರವಾನಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಎಸ್‌ಐಟಿ ಮೂಲಗಳು ಹೇಳಿವೆ. ಈ ಹಣ ವರ್ಗಾವಣೆಯಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರ ಆಪ್ತ ನೆಕ್ಕುಂಟಿ ನಾಗರಾಜ್ ಹಾಗೂ ಆತನ ಬಾಮೈದ ನಾಗೇಶ್ವರ್ ರಾವ್ ಪ್ರಮುಖ ಪಾತ್ರ ವಹಿಸಿದ್ದಾರೆ. 

ವಿಧಾನಪರಿಷತ್‌ ಚುನಾವಣೆ: ಕಾಂಗ್ರೆಸ್‌ಗೆ 3, ಮೈತ್ರಿಗೆ 3 ಸ್ಥಾನ

ಆದರೆ ಹಣದ ವಿಚಾರವಾಗಿ ಬಂಧಿತನಾಗಿರುವ ಫಸ್ಟ್ ಫೈನಾನ್ಸ್ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸತ್ಯನಾರಾಯಣ್ ಬಾಯ್ಬಿಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಇನ್ನು ಈ 17 ನಕಲಿ ಖಾತೆಗಳನ್ನು ತೆರೆದಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದ್ದು, ಕೃತ್ಯ ಬೆಳಕಿಗೆ ಬಂದ ನಂತರ ಕೆಲವರು ತಲೆಮರೆಸಿಕೊಂಡಿದ್ದಾರೆ. ಹೀಗಾಗಿ ನಕಲಿ ಖಾತೆದಾರರ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೇಸ್‌ಗೆ ಸಿಬಿಐ ಎಂಟ್ರಿ: ವಾಲ್ಮಿಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಕೋಟ್ಯಂತರ ರು. ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ತನಿಖೆಗೆ ಸಿಬಿಐ ಪ್ರವೇಶಿಸಿದ್ದು, ರಾಜ್ಯ ಸರ್ಕಾರಕ್ಕೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಯೂನಿಯನ್‌ ಬ್ಯಾಂಕ್‌ನ ಅಧಿಕಾರಿಗಳು ಸೇರಿ ಐವರ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದೆ. ಪ್ರಕರಣದ ತನಿಖೆಯನ್ನು ಸಿಬಿಐ ತೆಗೆದುಕೊಂಡಿರುವುದರಿಂದ ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿ ತನಿಖೆ ಸ್ಥಗಿತಗೊಳ್ಳಲಿದೆ. ಏಕಕಾಲಕ್ಕೆ ಎರಡು ತನಿಖಾ ತಂಡಗಳು ತನಿಖೆ ನಡೆಸುವುದು ಸಾಧ್ಯವಾಗುವುದಿಲ್ಲ. ಕೇಂದ್ರ ತನಿಖಾ ಸಂಸ್ಥೆ ಪ್ರಕರಣದಲ್ಲಿ ಪ್ರವೇಶಿಸಿರುವುದರಿಂದ ರಾಜ್ಯ ಸರ್ಕಾರದ ತನಿಖಾ ಸಂಸ್ಥೆಯ ತನಿಖೆ ಸ್ಥಗಿತವಾಗಲಿದೆ.

ಮಂತ್ರಿಗಿರಿಗಾಗಿ ಬಿಜೆಪಿ ಮೇಲೆ ಒತ್ತಡ ಹೇರಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ನಗರದ ಎಂ.ಜಿ.ರಸ್ತೆ ಶಾಖೆಯ ಉಪ ಪ್ರಧಾನ ವ್ಯವಸ್ಥಾಪಕ ಜೆ.ಮಹೇಶ್‌ ನೀಡಿರುವ ದೂರಿನನ್ವಯ ಸಿಬಿಐ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದೆ. ಪ್ರಕರಣ ಸಂಬಂಧ ಸಂಬಂಧ ಅಮಾನತುಗೊಂಡಿರುವ ಯೂನಿಯನ್‌ ಬ್ಯಾಂಕ್‌ ಅಧಿಕಾರಿಗಳಾದ ಸುಚಿಸ್ಮಿತಾ ರೌಲ್, ಡಿ.ದೀಪಾ, ಕೆ.ವಿ.ಕೃಷ್ಣಮೂರ್ತಿ ಹಾಗೂ ಇಬ್ಬರು ಖಾಸಗಿ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಆರೋಪಿತರು ವಾಲ್ಮಿಕಿ ಅಭಿವೃದ್ಧಿ ನಿಗಮ ನಿಯಮಿತದ ಖಾತೆಗಳಿಂದ ಅಕ್ರಮ ಹಣ ವರ್ಗಾವಣೆ ಮಾಡುವ, ಮೊತ್ತವನ್ನು ಹಿಂತೆಗೆದುಕೊಳ್ಳುವ ಮೂಲಕ ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.