ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳ ವಿರುದ್ಧ ಟ್ರಸ್ಟಿ ಚಂದ್ರಶೇಖರ ಪೂಜಾರ್ ಗಂಭೀರ ಆರೋಪ ಮಾಡಿದ್ದಾರೆ. ಶ್ರೀಗಳು ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು ಮತ್ತು ಅವರಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು ಎಂದು ಆರೋಪಿಸಿ, ಶ್ರೀಗಳು ತಕ್ಷಣವೇ ಮಠವನ್ನು ತೊರೆಯಬೇಕೆಂದು ಆಗ್ರಹಿಸಿದ್ದಾರೆ.
ದಾವಣಗೆರೆ (ಏ.14): ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳ ವಿರುದ್ಧ ಟ್ರಸ್ಟಿ ಚಂದ್ರಶೇಖರ ಪೂಜಾರ್ ಅತ್ಯಂತ ಗಂಭೀರ ಹಾಗೂ ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. ಪೀಠದಲ್ಲಿ ನಡೆಯುತ್ತಿರುವ ಅನಾಚಾರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರುವ ಅವರು, ಶ್ರೀಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ವಚನಾನಂದ ಶ್ರೀಗಳನ್ನು ಸುದ್ದಿಗೋಷ್ಠಿಯುದ್ದಕ್ಕೂ 'ಮಸಾಜ್ ಪ್ರಿಯ ಸ್ವಾಮೀಜಿ' ಎಂದು ಕರೆದ ಚಂದ್ರಶೇಖರ ಪೂಜಾರ್, ಶ್ರೀಗಳು ಸಣ್ಣ ಪುಟ್ಟ ಮಕ್ಕಳಿಂದ ಪ್ರತಿದಿನ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಪ್ರತಿನಿತ್ಯ ನಾಲ್ಕು ಮಕ್ಕಳನ್ನು ಸರದಿ ಸಾಲಿನಲ್ಲಿ ನಿಲ್ಲಿಸಿ ಮಸಾಜ್ ಮಾಡಲು ಕರೆಯುತ್ತಿದ್ದರು. ಹಾಸ್ಟೆಲ್‌ನಲ್ಲಿದ್ದ 60 ಮಕ್ಕಳ ಸಂಖ್ಯೆ ಈಗ ಐದಕ್ಕೆ ಇಳಿದಿದೆ. ಉಳಿದವರು ಈ ಕಿರುಕುಳ ತಾಳಲಾರದೆ ತೆರಳಿದ್ದಾರೆ ಎನ್ನಲಾಗಿದೆ.
ಪೊಕ್ಸೊ (POCSO) ಪ್ರಕರಣದ ಭೀತಿ
ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದ ವಿಚಾರ ತಿಳಿದ ಪೋಷಕರು ಇಂದು ಬೆಳಿಗ್ಗೆಯೇ ಸ್ವಾಮೀಜಿ ವಿರುದ್ಧ ಪೊಕ್ಸೊ ಪ್ರಕರಣ ದಾಖಲಿಸಲು ಮುಂದಾಗಿದ್ದರು. ಆದರೆ ಮಠದ ಗೌರವಕ್ಕಾಗಿ ನಾವು ಪೋಷಕರನ್ನು ಸಮಾಧಾನಪಡಿಸಿ ದೂರು ನೀಡದಂತೆ ತಡೆದಿದ್ದೇವೆ ಎಂದು ಪೂಜಾರ್ ತಿಳಿಸಿದ್ದಾರೆ. ಸ್ವಾಮೀಜಿಯ ಈ 'ಮಸಾಜ್ ಪ್ರಿಯ' ಹವ್ಯಾಸದ ಬಗ್ಗೆ ನಮಗೆ ಮೊದಲೇ ತಿಳಿದಿತ್ತು. ಇದನ್ನು ಬಹಿರಂಗಪಡಿಸಬಾರದು ಎಂಬ ಕಾರಣಕ್ಕೆ ಶ್ರೀಗಳನ್ನು ತಿದ್ದಲು ಪ್ರಯತ್ನಿಸಿದ್ದೆವು, ಆದರೆ ಅದು ಸಾಧ್ಯವಾಗಲಿಲ್ಲ ಎಂದು ಟ್ರಸ್ಟಿಗಳು ಅಳಲು ತೋಡಿಕೊಂಡಿದ್ದಾರೆ.
ಅವಾಚ್ಯ ಶಬ್ದಗಳ ಬಳಕೆಯ ಆಡಿಯೋ ರಿಲೀಸ್
ಮಕ್ಕಳು ಕಾರ್ಯಕ್ರಮವೊಂದಕ್ಕೆ ಬಾರದಿದ್ದಕ್ಕೆ ಶ್ರೀಗಳು ಅವರಿಗೆ ಅತ್ಯಂತ ಕೆಟ್ಟದಾದ ಅವಾಚ್ಯ ಶಬ್ದಗಳಿಂದ ಬೈದಿರುವ ಆಡಿಯೋವೊಂದನ್ನು ಚಂದ್ರಶೇಖರ ಪೂಜಾರ್ ಬಿಡುಗಡೆ ಮಾಡಿದ್ದಾರೆ. "ನನ್ನ ಕಚ್ಚೆ, ಕೈ, ಬಾಯಿ ಸ್ವಚ್ಛವಾಗಿದೆ" ಎಂದು ಸ್ವಾಮೀಜಿ ಹೇಳಿಕೊಳ್ಳುತ್ತಾರೆ. ಆದರೆ ಯಾವುದು ಎಷ್ಟು ಸ್ವಚ್ಛವಾಗಿದೆ ಎಂಬುದು ಮುಂದಿನ ದಿನಗಳಲ್ಲಿ ಇಡೀ ಜಗತ್ತಿಗೆ ಗೊತ್ತಾಗಲಿದೆ ಎಂದು ತಿರುಗೇಟು ನೀಡಿದ್ದಾರೆ.
ಮಠ ಬಿಟ್ಟು ತೊಲಗಲು ಎಚ್ಚರಿಕೆ
ವಚನಾನಂದ ಶ್ರೀಗಳು ಈ ಕೂಡಲೇ ಮಠವನ್ನು ತೊರೆದು ಹೋಗಬೇಕು ಎಂದು ಗೌರವಪೂರ್ವಕವಾಗಿ ಆಗ್ರಹಿಸುತ್ತಿದ್ದೇವೆ. ಇಲ್ಲದಿದ್ದರೆ ಹೇಗೆ ಖಾಲಿ ಮಾಡಿಸಬೇಕು ಎಂಬುದು ನಮಗೆ ಚೆನ್ನಾಗಿ ಗೊತ್ತು ಎಂದು ಪೂಜಾರ್ ಎಚ್ಚರಿಕೆ ನೀಡಿದ್ದಾರೆ. ಉಮಾಪತಿ ಹಾಗೂ ಸಿರಿಗೆರೆ ಶ್ರೀಗಳ ಬಗ್ಗೆ ವಚನಾನಂದರು ಸುಳ್ಳು ಹಬ್ಬಿಸುತ್ತಿದ್ದಾರೆ. ಈ ವಿಚಾರವಾಗಿ ರಾಜೀ ಪಂಚಾಯಿತಿ ಮಾಡಲು ಸಿರಿಗೆರೆ ಶ್ರೀಗಳು ಕಳೆದ ತಿಂಗಳು 24ರಂದು ಕರೆದಿದ್ದರು. ಆದರೆ ವಚನಾನಂದರು ಸಭೆಗೆ ಬಾರದೆ ತಪ್ಪಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.


