ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ, ಸ್ವಾಮೀಜಿ ತಮ್ಮ ತೇಜೋವಧೆ ಮಾಡಲು 3 ಕೋಟಿ ರೂಪಾಯಿಗಾಗಿ ಮಹಿಳೆ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ.

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದ ಪ್ರಮುಖ ನಾಯಕ, ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿರುವ ಪ್ರಕರಣ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಸಂಬಂಧ ಬೆಂಗಳೂರಿನ ಮಹಿಳೆಯೊಬ್ಬರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿರುವುದಾಗಿ ತಿಳಿದುಬಂದಿದೆ.

Add Asianetnews Kannada as a Preferred SourcegooglePreferred

ಮಹಿಳೆ ನೀಡಿದ ದೂರಿನ ಪ್ರಕಾರ, ಸ್ವಾಮೀಜಿ ತಮ್ಮ ಮೇಲೆ ಅಸಭ್ಯ ವರ್ತನೆ ತೋರಿದ್ದು, ಬೆತ್ತಲೆ ವಿಡಿಯೋ ಕಾಲ್ ಮಾಡುವ ಮೂಲಕ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಆರೋಪಗಳು ಹೊರಬಿದ್ದ ತಕ್ಷಣವೇ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ಸ್ವಾಮೀಜಿ ಕಡೆಯಿಂದಲೂ ಪ್ರತಿದೂರು ದಾಖಲಾಗಿರುವುದು ಗಮನಾರ್ಹ ಸಂಗತಿಯಾಗಿದೆ.

ಸ್ವಾಮೀಜಿ ಪ್ರತಿದೂರು

ಇನ್ನೊಂದೆಡೆ, ಜಯಮೃತ್ಯುಂಜಯ ಸ್ವಾಮೀಜಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸ್ವಾಮೀಜಿ ತಮ್ಮ ದೂರಿನಲ್ಲಿ, ಸಂಬಂಧಿತ ಮಹಿಳೆ ತಾನು ಅನಾಥಾಶ್ರಮ ನಡೆಸುತ್ತಿರುವುದಾಗಿ ಹೇಳಿ ಪರಿಚಯ ಮಾಡಿಕೊಂಡಿದ್ದಳು ಎಂದು ತಿಳಿಸಿದ್ದಾರೆ.

ಪರಿಚಯವಾದ ನಂತರ ಆಕೆ ತನ್ನ ಬಳಿ ಹಣಕಾಸಿನ ನೆರವು ಕೇಳುತ್ತಾ ಬಂದಿದ್ದು, ಕ್ರಮೇಣ ಹಣಕ್ಕಾಗಿ ಒತ್ತಡ ಹೇರುತ್ತಿದ್ದಳು ಎಂದು ಸ್ವಾಮೀಜಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತಮ್ಮ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳು ಸಂಪೂರ್ಣ ಸುಳ್ಳು ಎಂದು ತಳ್ಳಿ ಹಾಕಿರುವ ಅವರು, ಕೆಲವು ರಾಜಕೀಯ ವ್ಯಕ್ತಿಗಳ ಪ್ರಚೋದನೆಯಿಂದ ತಮ್ಮ ತೇಜೋವಧೆ ಮಾಡಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ.

3 ಕೋಟಿಗೆ ಮಹಿಳೆ ಬೇಡಿಕೆ

ಹಣ ನೀಡಲು ನಿರಾಕರಿಸಿದ ಬಳಿಕ, ಆ ಮಹಿಳೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಬ್ಲಾಕ್‌ಮೇಲ್ ಮಾಡಲು ಯತ್ನಿಸಿದ್ದಾಳೆ ಎಂದು ಸ್ವಾಮೀಜಿ ಹೇಳಿದ್ದಾರೆ. ಅಲ್ಲದೆ, ತಾವು ಮಠಕ್ಕೆ ತೆರಳುತ್ತಿದ್ದ ವೇಳೆ ತಮ್ಮ ಕಾರನ್ನು ಅಡ್ಡಗಟ್ಟಿ ಹಣದ ಬೇಡಿಕೆ ಇಟ್ಟಿದ್ದಳು ಹಾಗೂ ಹಣ ನೀಡದಿದ್ದಕ್ಕೆ ಹಲ್ಲೆ ನಡೆಸಿದ್ದಾಳೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ. ಮೂರು ಕೋಟಿ ರೂಪಾಯಿ ಹಣ ನೀಡದಿದ್ದರೆ ತಮ್ಮ ವಿರುದ್ಧ ಅಪಪ್ರಚಾರ ಮಾಡುವುದಾಗಿ ಮಹಿಳೆ ಬೆದರಿಕೆ ಹಾಕಿದ್ದಾಳೆ ಎಂದು ಸ್ವಾಮೀಜಿ ದೂರಿನಲ್ಲಿ ತಿಳಿಸಿದ್ದಾರೆ. 

ಮಹಿಳೆ ಬೆಂಗಳೂರು ಕಮಿಷನರ್ ಗೆ ಇ ಮೇಲ್ ಮೂಲಕ ದೂರು ನೀಡಿದ್ದಾರೆ. ಮಹಿಳಾ ಆಯೋಗಕ್ಕೆ ಒಬ್ಬ ವ್ಯಕ್ತಿ ಬಂದು ದೂರು ನೀಡಿದ್ದಾನೆ. ದೂರು ಸ್ವೀಕಾರ ಮಾಡಿದ ಮಹಿಳಾ ಆಯೋಗ ಬಳಿಕ ಮಹಿಳೆ ಹೆಸರು ,ದೂರವಾಣೆ ಸಂಖ್ಯೆ ಸರಿಯಾಗಿ ಕೊಡುವಂತೆ ವ್ಯಕ್ತಿಗೆ ಕೇಳಿದೆ. ನಂತರ ಆ ವ್ಯಕ್ತಿ ಬೇರೆ ದೂರವಾಣೆ ಸಂಖ್ಯೆ ನೀಡಿ ತೆರಳಿದ್ದಾರೆ. ಈ ಬಗ್ಗೆ ಸತ್ಯಾತ್ಯತೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಮಹಿಳಾ ಆಯೋಗದ ಉನ್ನತ ಮೂಲಗಳ ಮಾಹಿತಿ ನೀಡಿದೆ.

ಮಹಿಳೆ ನೀಡಿರುವ ದೂರಿನಲ್ಲಿ ಏನಿದೆ?

ನಾನು Basava Jaya Mrutyunjaya Swamiji ಅವರ ಭಕ್ತೆಯಾಗಿದ್ದೆ. ವರು ನನ್ನನ್ನು ಮಠಕ್ಕೆ ಕರೆಸಿ “ಪ್ರಸಾದ ಕೊಡುತ್ತೇನೆ” ಎಂದು ಹೇಳಿ ನನ್ನ ವಿಶ್ವಾಸವನ್ನು ದುರುಪಯೋಗ ಮಾಡಿಕೊಂಡು ನನ್ನೊಂದಿಗೆ ದೈಹಿಕವಾಗಿ ತಪ್ಪಾಗಿ ವರ್ತಿಸಿದರು. ಸಮಯದಲ್ಲಿ ನನ್ನ ತಿಳುವಳಿಕೆಯಿಲ್ಲದೆ ವಿಡಿಯೋ ಮಾಡಿಕೊಂಡಿದ್ದಾರೆ. ವಿಡಿಯೋವನ್ನು ಬಳಸಿ ಅವರು ನನ್ನನ್ನು ಬ್ಲಾಕ್ಮೇಲ್ ಮಾಡುತ್ತಿದ್ದು, ಪ್ರತಿ ರಾತ್ರಿ ಫೋನ್ ಮಾಡಿ ಬೆತ್ತಲೆ ವಿಡಿಯೋ ಕಾಲ್ ಮಾಡು, ಇಲ್ಲದಿದ್ದರೆ ನಿನ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತೇನೆ ಎಂದು ಬೆದರಿಸುತ್ತಿದ್ದಾರೆ. ಕಾರಣದಿಂದ ನನಗೆ ಭಯ, ಮಾನಸಿಕ ಒತ್ತಡ ಹಾಗೂ ಅವಮಾನ ಉಂಟಾಗಿದೆ.ಆದ್ದರಿಂದ, ಮೇಲ್ಕಂಡ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ FIR ದಾಖಲಿಸಿ ತನಿಖೆ ನಡೆಸುವಂತೆ ವಿನಂತಿಸುತ್ತೇನೆ. ಎಂದು ಬೆಂಗಳೂರಿನ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಒಟ್ಟಾರೆ, ಪರಸ್ಪರ ವಿರುದ್ಧ ಆರೋಪ-ಪ್ರತ್ಯಾರೋಪಗಳಿಂದ ಈ ಪ್ರಕರಣ ಗಂಭೀರ ಸ್ವರೂಪ ಪಡೆದಿದ್ದು, ಸತ್ಯಾಸತ್ಯತೆ ತಿಳಿಯಲು ಸಮಗ್ರ ತನಿಖೆ ಅಗತ್ಯವಾಗಿದೆ.