Asianet Suvarna News Asianet Suvarna News

2ಎಗೆ ಪಂಚಮಸಾಲಿ: ಶೀಘ್ರ ವರದಿಗೆ ವಚನಾನಂದ ಶ್ರೀ ಆಗ್ರಹ

*  ಹಿಂದುಳಿದ ವರ್ಗಗಳ ಆಯೋಗಕ್ಕೆ ಶ್ರೀಗಳ ನೇತೃತ್ವದ ನಿಯೋಗ ಮನವಿ
*  ‘ಮೀಸಲು ನೀಡದಿದ್ದರೆ ಸಮಾಜದ ಯುವಕರು ಉದ್ಯೋಗ ವಂಚಿತ’
*  ಕೂಲಂಕಷವಾಗಿ ಅಧ್ಯಯನ: ಹೆಗ್ಡೆ
 

Vachananand Swamiji Talks Over Panchamasali 2A Reservation Report grg
Author
Bengaluru, First Published Jun 15, 2022, 4:30 AM IST

ಬೆಂಗಳೂರು(ಜೂ.15): ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2 ‘ಎ’ ಗೆ ಸೇರ್ಪಡೆ ಮಾಡುವುದಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಶೀಘ್ರ ವರದಿ ನೀಡಬೇಕು ಎಂದು ಹರಿಹರದ ಪಂಚಮಸಾಲಿ ಗುರು ಪೀಠದ ವಚನಾನಂದ ಸ್ವಾಮೀಜಿ ನೇತೃತ್ವದ ನಿಯೋಗ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಮಾಡಿದೆ.

ದೇವರಾಜ ಅರಸು ಭವನದಲ್ಲಿರುವ ಆಯೋಗದ ಕಚೇರಿಗೆ ಮಂಗಳವಾರ ಆಗಮಿಸಿದ್ದ ವಚನಾನಂದ ಸ್ವಾಮೀಜಿ ನೇತೃತ್ವದ ನಿಯೋಗ, ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರನ್ನು ಭೇಟಿ ಮಾಡಿ, ‘ಪಂಚಮಸಾಲಿ ಸಮುದಾಯ ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದು ಮೀಸಲಾತಿ ನೀಡದಿದ್ದರೆ ಸಮಾಜದ ಯುವಜನತೆ ಉದ್ಯೋಗವಿಲ್ಲದೇ ಸಂಕಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಸರ್ಕಾರಕ್ಕೆ ಆದಷ್ಟುಬೇಗ ವರದಿ ನೀಡಬೇಕು’ ಎಂದು ವಿವರಿಸಿತು.

 

ಪಂಚಮಸಾಲಿ ಮೀಸಲಾತಿಗಾಗಿ ಸರ್ಕಾರಕ್ಕೆ ಗಡುವು ನೀಡೋದಿಲ್ಲ: ವಚನಾನಂದ ಶ್ರೀ

ಪಂಚಮಸಾಲಿ ಸಮುದಾಯವನ್ನು 3 ‘ಬಿ’ಗೆ ಸೇರಿಸಿದ್ದು ಹೆಚ್ಚು ಜನಸಂಖ್ಯೆ ಇರುವುದರಿಂದ ಸರಿಯಾಗಿ ಮೀಸಲಾತಿ ಸಿಗುತ್ತಿಲ್ಲ. ಆದ್ದರಿಂದ 2 ‘ಎ’ ಪ್ರವರ್ಗಕ್ಕೆ ಸೇರ್ಪಡೆ ಮಾಡಬೇಕು. ಈ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಫೆಬ್ರವರಿ 2021 ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರು ಆಯೋಗವನ್ನು ಕೋರಿದ್ದರು. ಈಗ ಆಯೋಗ ಶೀಘ್ರ ವರದಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ಭರವಸೆ ನೀಡಿದೆ. ಆದ್ದರಿಂದ ಕಾಲಮಿತಿಯೊಳಗೆ ವರದಿ ನೀಡಬೇಕು’ ಎಂದು ನಿಯೋಗ ಮನವರಿಕೆ ಮಾಡಿಕೊಟ್ಟಿತು.

ವರದಿಗೆ ಗಡುವು ನೀಡಿಲ್ಲ:

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಚನಾನಂದ ಸ್ವಾಮೀಜಿ, ‘ಎಲ್ಲಾ ಜಿಲ್ಲೆಗಳಲ್ಲೂ ಸಮೀಕ್ಷೆ ನಡೆಸಿ ಆದಷ್ಟುಬೇಗ ವರದಿ ನೀಡುವುದಾಗಿ ಆಯೋಗದ ಅಧ್ಯಕ್ಷರು ತಿಳಿಸಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಿಸುವುದಕ್ಕೆ ಸ್ವಲ್ಪ ವಿಳಂಬವಾಗುತ್ತಿದೆ. ವರದಿ ನೀಡಲು ನಾವು ಯಾವುದೇ ಗಡುವು ನೀಡಿಲ್ಲ. ಆದಷ್ಟುಶೀಘ್ರ ವರದಿ ಸಲ್ಲಿಸುವುದಾಗಿ ಅಧ್ಯಕ್ಷರು ಹೇಳಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಶಾಸಕ ಯತ್ನಾಳರನ್ನ ಪರೋಕ್ಷವಾಗಿ ರಾಕ್ಷಸ ಎಂದ ಸ್ವಾಮೀಜಿ

‘ಪ್ರವರ್ಗ 2 ‘ಎ’ಗೆ ಪಂಚಮಸಾಲಿ ಸಮುದಾಯವನ್ನು ಸೇರ್ಪಡೆ ಮಾಡಬೇಕೆಂದು 1993 ರಿಂದಲೂ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಅನೇಕ ಹೋರಾಟಗಳನ್ನೂ ಹಮ್ಮಿಕೊಳ್ಳಲಾಗಿದೆ. ಆದರೂ ಬೇಡಿಕೆ ಈಡೇರಿಲ್ಲ. ಸಮಾಜದಲ್ಲಿ ಬಡವರು, ಸಣ್ಣ ರೈತರು, ಕೃಷಿ ಕೂಲಿಯನ್ನೇ ಅವಂಬಿಸಿದವರೇ ಇದ್ದು ಇದ್ಯಾವುದನ್ನೂ ಪರಿಗಣಿಸದೇ 3 ‘ಬಿ’ ಗೆ ಸೇರ್ಪಡೆ ಮಾಡಿರುವುದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಜಮಖಂಡಿಯ ಪಂಚಮಸಾಲಿ ಜಗದ್ಗುರು ಪೀಠದ ಮಹಾದೇವ ಶಿವಾಚಾರ್ಯ ಸ್ವಾಮೀಜಿ, ಕಮರಿಮಠದ ಸಿದ್ದಲಿಂಗ ದೇವರು, ವಕೀಲ ಬಿ.ಎಸ್‌.ಪಾಟೀಲ್‌, ಮುಖಂಡರಾದ ಬಿ.ಸಿ.ಉಮಾಪತಿ, ಬಿ.ನಾಗನಗೌಡ ಮತ್ತಿತರರು ಹಾಜರಿದ್ದರು.

ಕೂಲಂಕಷವಾಗಿ ಅಧ್ಯಯನ: ಹೆಗ್ಡೆ

ಬೆಂಗಳೂರು: ಪಂಚಮಸಾಲಿ ನಿಯೋಗದಿಂದ ಮನವಿ ಸ್ವೀಕರಿಸಿದ ಬಳಿಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಮಾತನಾಡಿ, ಸಮುದಾಯಕ್ಕೆ ಮೀಸಲಾತಿ ನೀಡುವ ಬಗ್ಗೆ ಈಗಾಗಲೇ 12 ಜಿಲ್ಲೆಯಲ್ಲಿ ಪ್ರವಾಸ ಮಾಡಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲಾಗಿದೆ. ಎಲ್ಲ ಜಿಲ್ಲೆಗಳಿಂದಲೂ ಮಾಹಿತಿ ಸಂಗ್ರಹಿಸಬೇಕಾಗಿದೆ ಎಂದು ಸ್ಪಷ್ಟಪಡಿಸಿದರು.

ಯಾವ್ಯಾವ ಸಮುದಾಯದವರು ಸರ್ಕಾರಿ ಹುದ್ದೆಯಲ್ಲಿ ಇದ್ದಾರೆ ಎಂಬ ಮಾಹಿತಿ ಕೋರಿ ಸರ್ಕಾರದ ವಿವಿಧ ಇಲಾಖೆಗಳು, ವಿಶ್ವವಿದ್ಯಾಲಯಗಳಿಗೆ ಪತ್ರ ಬರೆಯಲಾಗಿದೆ. ಸಮಗ್ರ ಅಧ್ಯಯನದ ಬಳಿಕ ವರದಿ ನೀಡಲಾಗುವುದು. ಇಂತಿಷ್ಟೇ ಅವಧಿಯೊಳಗೆ ವರದಿ ಕೊಡುತ್ತೇವೆ ಎಂದು ನಿಖರವಾಗಿ ಹೇಳಲು ಬರುವುದಿಲ್ಲ. ಆದಷ್ಟುಬೇಗನೆ ವರದಿ ನೀಡಲಾಗುವುದು ಎಂದು ವಿವರಿಸಿದರು.
 

Follow Us:
Download App:
  • android
  • ios