ಪಂಚಮಸಾಲಿ ಮೀಸಲಾತಿಗಾಗಿ ಸರ್ಕಾರಕ್ಕೆ ಗಡುವು ನೀಡೋದಿಲ್ಲ: ವಚನಾನಂದ ಶ್ರೀ
* ಮೀಸಲಾತಿ ಸೌಲಭ್ಯ ಸಿಗಬೇಕಾದರೆ ಕುಲಶಾಸ್ತ್ರ ಅಧ್ಯಯನ ಅಗತ್ಯ
* ನಮ್ಮ ಸಮುದಾಯಕ್ಕೆ ಖಂಡಿತವಾಗಿ ಒಬಿಸಿ ಮೀಸಲಾತಿ ಸೌಲಭ್ಯ ಸಿಗುತ್ತದೆ ಎಂಬ ವಿಶ್ವಾಸವಿದೆ
* ಉದ್ಯೋಗ ಕಲ್ಪಿಸುವುದಕ್ಕಾಗಿ ಹರ ಉದ್ಯೋಗ ಮೇಳ ಆಯೋಜಿಸಿದ್ದೆವು
ಕೊಟ್ಟೂರು(ಮೇ.20): ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಒಬಿಸಿ ಮೀಸಲಾತಿ ಸೌಲಭ್ಯ ಕಲ್ಪಿಸುವುದಕ್ಕಾಗಿ ಸರ್ಕಾರಕ್ಕೆ ಯಾವುದೇ ಗಡುವು ನೀಡುವುದಿಲ್ಲ ಎಂದು ಹರಿಹರ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀವಚನಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಪಂಚಮಸಾಲಿ ಸಮುದಾಯ ಮುಖಂಡ ಚಾಪಿ ಚಂದ್ರಪ್ಪ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಮೀಸಲಾತಿ ಸೌಲಭ್ಯ ಸಿಗಬೇಕಾದರೆ ಕುಲಶಾಸ್ತ್ರ ಅಧ್ಯಯನ ಅಗತ್ಯವಾಗಿದೆ. ನಮ್ಮ ಒತ್ತಡ ಅಥವಾ ಗಡುವಿಗಾಗಿ ಸರ್ಕಾರ ಪೂರ್ವ ತಯಾರಿ ಇಲ್ಲದೇ ಸೌಲಭ್ಯ ಕಲ್ಪಿಸಿದರೆ ಕಾನೂನು ಸಮಸ್ಯೆ ಉಂಟಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಇತರೆ ಸಮುದಾಯದವರಿಂದಲೂ ಆಕ್ಷೇಪಣೆ ಬಾರದಂತೆ, ಕಾನೂನು ತೊಡಕಾಗದಂತೆ ಮೀಸಲಾತಿ ಸೌಲಭ್ಯ ಪಡೆಯಬೇಕು. ಪಂಚಮಸಾಲಿ ಸಮುದಾಯಕ್ಕೆ ಪೂರಕವಾಗಿರುವ ಅಂಕಿ ಅಂಶಗಳನ್ನೊಳಗೊಂಡ 900 ಪುಟಗಳ ವರದಿಯನ್ನು ರಾಜ್ಯ ಹಿಂದುಳಿದ ವರ್ಗದ ಆಯೋಗಕ್ಕೆ ಸಲ್ಲಿಸಿ, ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರೊಂದಿಗೆ ಸುದೀರ್ಘ 6 ತಾಸುಗಳ ಕಾಲ ಚರ್ಚೆ ನಡೆಸಿ ವಿಚಾರ ವಿನಿಮಯ ಮಾಡಿದ್ದೇವೆ. ಆಯೋಗದವರು ಕುಲಶಾಸ್ತ್ರ ಅಧ್ಯಯನ ಪೂರ್ಣಗೊಳಿಸಿ ವರದಿ ನೀಡಿದ ನಂತರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಮೀಸಲಾತಿ ಸೌಲಭ್ಯ ಪಡೆಯುತ್ತೇವೆ. ನಮ್ಮ ಸಮುದಾಯಕ್ಕೆ ಖಂಡಿತವಾಗಿ ಒಬಿಸಿ ಮೀಸಲಾತಿ ಸೌಲಭ್ಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದರು.
ಬಿಜೆಪಿ ಶಾಸಕ ಯತ್ನಾಳರನ್ನ ಪರೋಕ್ಷವಾಗಿ ರಾಕ್ಷಸ ಎಂದ ಸ್ವಾಮೀಜಿ
ಹರಿಹರದಲ್ಲಿ ಇತ್ತಿಚಿಗೆ ನಡೆಸಿದ ಹರ ಉದ್ಯೋಗ ಮೇಳದಲ್ಲಿ ಆಗಮಿಸಿದ್ದ ಅನೇಕ ಕಂಪನಿಗಳಲ್ಲಿ ಪಂಚಮಸಾಲಿ ಸೇರಿ ಸಮಾಜದ ಎಲ್ಲ ಸಮುದಾಯದ 6400ಕ್ಕೂ ಹೆಚ್ಚು ಯುವಕರು ಉದ್ಯೋಗ ಪಡೆದುಕೊಂಡಿದ್ದಾರೆ. ಕೊರೋನಾದಿಂದಾಗಿ ಅನೇಕರು ಉದ್ಯೋಗ ಕಳೆದುಕೊಂಡು ತಮ್ಮ ಮನೆಗಳಿಗೆ ವಾಪಸ್ಸಾಗಿ ಕಷ್ಟುಪಡುತ್ತಿರುವುದು ನೋಡಿದ್ದ ನಾವುಗಳು, ಅವರಿಗೆಲ್ಲ ಉದ್ಯೋಗ ಕಲ್ಪಿಸುವುದಕ್ಕಾಗಿ ಹರ ಉದ್ಯೋಗ ಮೇಳ ಆಯೋಜಿಸಿದ್ದೆವು ಎಂದು ವಿವರಿಸಿದರು.
ಪಂಚಮಸಾಲಿ ಮುಖಂಡ ಚಾಪಿ ಚಂದ್ರಪ್ಪ, ಪತಂಜಲಿ ಯೋಗ ಸಮಿತಿಯ ರಾಜೇಶ್‌ಕರ್ವಾ ಇತರರು ಇದ್ದರು.