18ರಿಂದ 44 ವಯಸ್ಸಿನವರ ಲಸಿಕಾ ಪ್ರಕ್ರಿಯೆ ಮುಂದೂಡಿಕೆ : ಸುಳಿವು ನೀಡಿದ ಸುಧಾಕರ್
- ಇಂದಿನಿಂದ ರಾಜ್ಯದಲ್ಲಿ ಸಂಚಾರ ನಿರ್ಬಂಧ - ಕಠಿಣ ಲಾಕ್‌ಡೌನ್
- 18ರಿಂದ 44 ವರ್ಷದವರ ಲಸಿಕಾ ಪ್ರಕ್ರಿಯೆ ಮುಂದೆ ಹಾಕುವ ಸುಳಿವು
- 14 ದಿನಗಳ ಕಾಲ ಮುಂದೆ ಹಾಕುವ ಬಗ್ಗೆ ಗೃಹ ಸಚಿವರ ಬಳಿ ಚರ್ಚೆ
ಬೆಂಗಳೂರು (ಮೇ.10): ರಾಜ್ಯದಲ್ಲಿ ಕೋವಿಡ್ ಲಸಿಕೆ ಲಭ್ಯ ಇದೆ. ಕೇಂದ್ರದಿಂದ ಐದು ಲಕ್ಷ ಲಸಿಕೆ ಬಂದಿದ್ದು, ಯುವಕರಿಗೆ ಲಸಿಕೆ ಕೊಡಲು ಯಾವುದೇ ಸಮಸ್ಯೆ ಇಲ್ಲ ಎಂದಿರುವ ಆರೋಗ್ಯ ಸಚಿವ ಸುಧಾಕರ್ 18ರಿಂದ 44 ವರ್ಷದವರ ಲಸಿಕಾ ಪ್ರಕ್ರಿಯೆ ಮುಂದೆ ಹಾಕುವ ಸುಳಿವು ನೀಡಿದ್ದಾರೆ.
ಬೆಂಗಳೂರಿನಲ್ಲಿಂದು ಮಾತನಾಡಿದ ಸಚಿವ ಸುಧಾಕರ್ ರಾಜ್ಯದಲ್ಲಿ ಸದ್ಯ ಕೋವಿಡ್ ಲಸಿಕೆ ಕೊರತೆ ಇಲ್ಲ. 5 ಲಕ್ಷ ಲಸಿಕೆ ಬಂದಿವೆ. ಆದರೆ ಇಂದಿನಿಂದ ರಾಜ್ಯದಲ್ಲಿ ಸಂಚಾರ ನಿರ್ಬಂಧ ಇರುವ ನಿಟ್ಟಿನಲ್ಲಿ ಲಸಿಕಾ ಅಭಿಯಾನ ಮುಂದೆ ಹಾಕುವ ಬಗ್ಗೆ ಚರ್ಚೆಯಾಗಿದೆ ಎಂದರು. ನಿನ್ನೆಯಷ್ಟೇ (ಮೇ.9) ಮೇ10 ರಿಂದ 18 ವರ್ಷ ಮೇಲ್ಪಟ್ಟವರ ಲಸಿಕಾ ಪ್ರಕ್ರಿಯೆ ಆರಂಭವಾಗಲಿದೆ ಎಂದ ಸಚಿವರು ಇಂದು ಮುಂದೂಡಿಕೆ ಬಗ್ಗೆ ತಿಳಿಸಿದ್ದಾರೆ.
ಕೇಂದ್ರದಿಂದ ವ್ಯಾಕ್ಸಿನ್ ಪೂರೈಕೆ, ರಾಜ್ಯದಲ್ಲಿ ಮೇ.10ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ...
ರಾಜ್ಯದಲ್ಲಿ ಇಂದಿನಿಂದ ಕಟ್ಟುನಿಟ್ಟಿನ ಲಾಕ್‌ಡೌನ್ ಇದ್ದು ಸಂಚಾರಕ್ಕೆ ತೊಡಕಾಗುತ್ತದೆ. ಆಸ್ಪತ್ರೆಗಳಿಗೆ ತೆರಳಲು ಆಗುವುದಿಲ್ಲ. ಈ ನಿಟ್ಟಿನಲ್ಲಿ 18 ರಿಂದ 44 ವರ್ಷ ವಯಸ್ಸಿನವರಿಗೆ ಲಸಿಕೆ ಕೊಡುವ ಪ್ರಕ್ರಿಯೆನ್ನು 14 ದಿನಗಳ ಕಾಲ ಮುಂದೆ ಹಾಕುವ ಬಗ್ಗೆ ಗೃಹ ಸಚಿವರ ಬಳಿ ಚರ್ಚಿಸಲಾಗಿದೆ. ಆದರೆ ಲಸಿಕಾ ಪ್ರಕ್ರಿಯೆ ಮುಂದೆ ಹಾಕುವ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ. ಇಂದು ಮಧ್ಯಾಹ್ನದ ವೇಳೆಗಾಗಲೇ ತೀರ್ಮಾನ ಮಾಡಲಾಗುತ್ತದೆ ಎಂದರು.
ಕೊರೋನಾ ನಿಯಂತ್ರಣ ಬರೀ ಸರ್ಕಾರದ ಜವಾಬ್ದಾರಿ ಅಷ್ಟೇ ಅಲ್ಲ. ಸರ್ಕಾರ ನಿಯಂತ್ರಣದ ಕೆಲಸ ಮಾಡುತ್ತಿದೆ. ನಾವು ಜನರ ಜೀವನ ಉಳಿಸಲು ಕ್ರಮ ಕೈಗೊಂಡಿದ್ದೇವೆ. ಸರ್ಕಾರಕ್ಕೆ ಎಲ್ಲಾ ರೀತಿಯ ಆದಾಯದಲ್ಲಿಯೂ ಸಮಸ್ಯೆ ಎದುರಾಗಿದೆ ಎಂದರು.
18 ಮೇಲ್ಪಟ್ಟವರಿಗೆ ಲಸಿಕೆ: ನೋಂದಣಿ ಮಾಡಿಕೊಂಡವರಿಗೆ ಮಾತ್ರ ಲಭ್ಯ! ...
ಇನ್ನು ರಾಜ್ಯದಲ್ಲಿ ಹಲವೆಡೆ ಕೋವಿಡ್ ಸೋಂಕಿತರ ಪ್ರಾಣ ಉಳಿಸುವುದಕ್ಕೆ ಪ್ರಾಣವಾಯುವಿನ ಕೊರತೆಯಾಗುತ್ತಿದೆ. ಇಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಜೊತೆಗೆ ಸಭೆ ನಡೆಸಿ ನಮ್ಮ ರಾಜ್ಯದಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ನಾವೇ ಬಳಸಿಕೊಳ್ಳಲು ಅನುಮತಿ ಕೇಳುತ್ತೇನೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು.
ಲಸಿಕೆಗೂ ಮಣಿಯಲ್ಲ ಭಾರತದ ಬಿ.1.617 ತಳಿಯ ವೈರಸ್? ..
ಮೇ 10 ರಿಂದ 18 ವರ್ಷ ಮೇಲ್ಪಟ್ಟವರ ಲಸಿಕಾ ಪ್ರಕ್ರಿಯೆ ಆರಂಭವಾಗಲಿದ್ದು, ರಿಜಿಸ್ಟರ್ ಮಾಡಿಸಿದವರಿಗೆ ಅವಕಾಶ ಎಂದು ತಿಳಿಸಿದ್ದರು. ಆದರೆ 45 ವರ್ಷ ಮೇಲ್ಪಟ್ಟ 2ನೇ ಡೋಸ್‌ಗೆ ಕಾಯುತ್ತಿರುವವರ ಸಂಖ್ಯೆಯೂ ರಾಜ್ಯದಲ್ಲಿ ಅಧಿಕ ಪ್ರಮಾಣದಲ್ಲಿದೆ. ಇನ್ನು ಇಂದಿನಿಂದ ಕಠಿಣ ಲಾಕ್‌ಡೌನ್ ಪ್ರಕ್ರಿಯೆಯೂ ಜಾರಿಯಲ್ಲಿರುವ ಕಾರಣ ಮುಂದೂಡಿಕೆ ಸಾಧ್ಯತೆ ದಟ್ಟವಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona