18 ಮೇಲ್ಪಟ್ಟವರಿಗೆ ಲಸಿಕೆ: ನೋಂದಣಿ ಮಾಡಿಕೊಂಡವರಿಗೆ ಮಾತ್ರ ಲಭ್ಯ!
* 18 ಮೇಲ್ಪಟ್ಟವರಿಗೆ ಇಂದಿನಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ
* ವ್ಯಾಕ್ಸಿನ್ ಪೂರೈಕೆ ಹೆಚ್ಚಾದರೆ ಇನ್ನಷ್ಟು ಕಡೆ ನೀಡಿಕೆ
* ಸದ್ಯ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಲಭ್ಯ
ಬೆಂಗಳೂರು(ಮೇ.10): ರಾಜ್ಯದಲ್ಲಿ ಮೇ 10ರ ಸೋಮವಾರದಿಂದ 18-45 ವರ್ಷದ ಒಳಗಿನ ವಯೋಮಾನದವರಿಗೆ ಕೋವಿಡ್ ಲಸಿಕೆ ಅಭಿಯಾನ ಅಧಿಕೃತವಾಗಿ ಆರಂಭವಾಗಲಿದೆ. ಸದ್ಯ ಸೀಮಿತ ಆಸ್ಪತ್ರೆಗಳಲ್ಲಿ ಮಾತ್ರ ಲಸಿಕೆ ಸಿಗಲಿದೆ.
ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಡಾ.ಕೆ.ಸುಧಾಕರ್, ಮೇ 10ರಿಂದ ಬೆಂಗಳೂರಿನ ಕೆ.ಸಿ. ಜನರಲ…, ಜಯನಗರ ಸರ್ಕಾರಿ ಆಸ್ಪತ್ರೆ, ಸರ್ ಸಿ.ವಿ.ರಾಮನ್ ಆಸ್ಪತ್ರೆ, ಇಎಸ್‌ಐ ಮತ್ತು ನಿಮ್ಹಾನ್ಸ್ ಆಸ್ಪತ್ರೆ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್ ಲಸಿಕೆ ನೀಡುತ್ತೇವೆ. ಉಳಿದಂತೆ ಜಿಲ್ಲೆಗಳಲ್ಲಿ ಜಿಲ್ಲಾಸ್ಪತ್ರೆ, ತಾಲ್ಲೂಕು ಸರ್ಕಾರಿ ಆಸ್ಪತ್ರೆ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಲಸಿಕೆ ನೀಡಲಾಗುವುದು ಎಂದು ಹೇಳಿದ್ದಾರೆ.
ಸಮಯ ನಿಗದಿಯಾಗಿದ್ದರೆ ಮಾತ್ರ ಲಸಿಕೆ:
18-44 ವಯೋಮಾನದವರಿಗೆ ಲಸಿಕೆ ವಿತರಿಸುವ ಎಲ್ಲ ಕೇಂದ್ರಗಳಲ್ಲಿ ಪ್ರತ್ಯೇಕ ಸ್ಥಳ ಗುರುತಿಸಲಾಗುವುದು, ನೋಂದಣಿ ಇಲ್ಲದೆ ನೇರವಾಗಿ ಲಸಿಕಾ ಕೇಂದ್ರಕ್ಕೆ ಬರುವವರಿಗೆ ಅವಕಾಶವಿಲ್ಲ. ಕೋವಿನ್ ಪೋರ್ಟಲ್ ಅಥವಾ ಆರೋಗ್ಯ ಸೇತು ಆ್ಯಪ್ ಮೂಲಕ ಲಸಿಕೆ ಪಡೆಯಲು ನೋಂದಣಿಯಾಗಿ ಸಮಯ ನಿಗದಿಯಾದರೆ ಮಾತ್ರ ಲಸಿಕೆ ನೀಡಲಾಗುವುದು. ಲಸಿಕೆ ಪೂರೈಕೆ ಹೆಚ್ಚಾಗುತ್ತಿದ್ದಂತೆ ಇನ್ನಷ್ಟುಲಸಿಕೆ ಕೇಂದ್ರಗಳಲ್ಲಿ ಲಸಿಕೆ ವಿತರಣೆ ಆರಂಭಿಸಲಾಗುವುದು. ಎಲ್ಲರಿಗೂ ಲಸಿಕೆ ಸಿಗಲಿದ್ದು, ಯುವ ಮಿತ್ರರು ತಾಳ್ಮೆಯಿಂದ ಕಾಯಬೇಕು ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ 18ರಿಂದ 44 ವರ್ಷದೊಳಗಿನ 3.26 ಕೋಟಿ ಜನರಿದ್ದಾರೆ. ಇವರೆಲ್ಲರಿಗೂ ಲಸಿಕೆ ಕೊಡಲು ಒಟ್ಟು 6.52 ಕೋಟಿ ಡೋಸ್ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ ಸರ್ಕಾರದಿಂದ 2 ಕೋಟಿ ಕೋವಿಶೀಲ್ಡ…, 1 ಕೋಟಿ ಕೋವಾಕ್ಸಿನ್ ಲಸಿಕೆ ಡೋಸ್‌ಗೆ ಬೇಡಿಕೆ ಇಟ್ಟಿದ್ದೇವೆ. ಸೀರಂ ಸಂಸ್ಥೆಯಿಂದ ಈವರೆಗೆ 6.5 ಲಕ್ಷ ಡೋಸ್ ಕೋವಿಶೀಲ್ಡ… ಲಸಿಕೆ ಪಡೆಯಲಾಗಿದೆ. ಇನ್ನಷ್ಟುಲಸಿಕೆ ಮೇ 2 ಅಥವಾ 3ನೇ ವಾರ ರಾಜ್ಯಕ್ಕೆ ಬರಲಿದೆ ಎಂದು ಅವರು ಹೇಳಿದ್ದಾರೆ.
"
ಪ್ರತಿ ಕೇಂದ್ರದಲ್ಲಿ ನಿತ್ಯ 100 ಮಂದಿಗೆ ಮಾತ್ರ
ರಾಜ್ಯ ಸರ್ಕಾರ ಯುವಕರಿಗೆ ಲಸಿಕೆ ನೀಡಲು ನಿರ್ಧರಿಸಿದ್ದರೂ ಕೋವಿನ್ ಪೋರ್ಟಲ್‌ನಲ್ಲಿ ಲಸಿಕೆ ಪಡೆಯುವ ಸಮಯ ನಿಗದಿಯಾಗುತ್ತಿಲ್ಲ. ಆರೋಗ್ಯ ಇಲಾಖೆಯ ಅಧಿಕಾರಿಗಳು 18 ವರ್ಷ ಮೇಲ್ಟಟ್ಟ100 ಮಂದಿಗೆ ಮಾತ್ರ ಪ್ರತಿದಿನ ಪ್ರತಿ ಕೇಂದ್ರದಲ್ಲಿ ಲಸಿಕೆ ನೀಡುತ್ತೇವೆ. ಈ 100 ಜನರ ಸ್ಲಾಟ್ ನಿಗದಿಯಾದ ಬಳಿಕ ಅಂದಿನ ಸ್ಲಾಟ್ ಪಡೆಯುವ ಅವಕಾಶ ಇರುವುದಿಲ್ಲ ಎಂದು ಹೇಳಿದ್ದಾರೆ.
ಎಲ್ಲರಿಗೂ ಲಸಿಕೆ ಸಿಗುತ್ತೆ
ರಾಜ್ಯದಲ್ಲಿ 18ರಿಂದ 44 ವರ್ಷದೊಳಗಿನ 3.26 ಕೋಟಿ ಜನರಿದ್ದಾರೆ. ಲಸಿಕೆ ಪೂರೈಕೆ ಹೆಚ್ಚಾಗುತ್ತಿದ್ದಂತೆ ಇನ್ನಷ್ಟುಕೇಂದ್ರಗಳಲ್ಲಿ ನೀಡಲಾಗುವುದು. ಎಲ್ಲರಿಗೂ ಲಸಿಕೆ ಸಿಗಲಿದೆ. ಯುವ ಮಿತ್ರರು ತಾಳ್ಮೆಯಿಂದ ಕಾಯಬೇಕು.
- ಡಾ| ಕೆ.ಸುಧಾಕರ್, ಆರೋಗ್ಯ ಸಚಿವ
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona