ಕಾಲುಬಾಯಿ ರೋಗ ನಿಗ್ರಹಕ್ಕೆ ಲಸಿಕೆಯೇ ಮಾರ್ಗ: ಸಚಿವ ಚವ್ಹಾಣ್
ಈವರೆಗೂ ರಾಜ್ಯಾದ್ಯಂತ 31 ಲಕ್ಷಕ್ಕೂ ಹೆಚ್ಚು ರಾಸುಗಳಿಗೆ ಲಸಿಕೆ ಹಾಕಲಾಗಿದೆ: ಪಶು ಸಂಗೋಪಣಾ ಸಚಿವ ಪ್ರಭು ಚವ್ಹಾಣ್
ಬೆಂಗಳೂರು(ನ.22): ಕಾಲುಬಾಯಿ ರೋಗ ನಿಯಂತ್ರಿಸಲು ಜಾನುವಾರುಗಳಿಗೆ ಲಸಿಕೆ ಹಾಕಿಸುವುದೊಂದೇ ಏಕೈಕ ಮಾರ್ಗವಾಗಿದ್ದು, ಈವರೆಗೂ ರಾಜ್ಯಾದ್ಯಂತ 31 ಲಕ್ಷಕ್ಕೂ ಹೆಚ್ಚು ರಾಸುಗಳಿಗೆ ಲಸಿಕೆ ಹಾಕಲಾಗಿದೆ ಎಂದು ಪಶು ಸಂಗೋಪಣಾ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಕಾಲುಬಾಯಿ ರೋಗದ ವಿರುದ್ಧ ಪ್ರತಿ ಆರು ತಿಂಗಳಿಗೊಮ್ಮೆ ಲಸಿಕೆ ಕೊಡಿಸಿ ರೋಗ ಬರದಂತೆ ತಡೆಗಟ್ಟಬಹುದಾಗಿದೆ. ಜಾನುವಾರು ಸಾಕುತ್ತಿರುವ ಎಲ್ಲ ರೈತರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
ಕಾಮಗಾರಿ ಕಳಪೆಯಾದರೆ ಅಧಿಕಾರಿಗಳೇ ಹೊಣೆ: ಸಚಿವ ಪ್ರಭು ಚವ್ಹಾಣ್
84,51,740 ರಾಸುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಈವರೆಗೂ 31,74,880 ರಾಸುಗಳಿಗೆ ಕಾಲುರೋಗ ಲಸಿಕೆ ನೀಡಲಾಗಿದೆ. ಪ್ರತಿ ಜಿಲ್ಲೆ, ತಾಲ್ಲೂಕು ಮತ್ತು ಪ್ರತಿ ಪಶು ಆಸ್ಪತ್ರೆಗಳಲ್ಲಿ ಹಾಗೂ ಜಾನುವಾರುಗಳು ಇರುವ ಜಾಗಗಳಿಗೆ ತೆರಳಿ ಲಸಿಕೆ ಹಾಕಲಾಗುತ್ತಿದೆ. 20ನೇ ಜಾನುವಾರು ಗಣತಿಯಂತೆ ರಾಜ್ಯಾದ್ಯಂತ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ. ಲಸಿಕೆಯು ಸಂಪೂರ್ಣ ಉಚಿತವಾಗಿದ್ದು, ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಲಸಿಕಾದಾರರು ಜಾನುವಾರು ಮಾಲೀಕರ ಮನೆಗೆ ಬಂದಾಗ ಸಹಕಾರ ನೀಡಿ ನಾಲ್ಕು ತಿಂಗಳು ಮೇಲ್ಪಟ್ಟಎಲ್ಲಾ ದನ, ಎಮ್ಮೆಗಳಿಗೆ ಲಸಿಕೆ ಹಾಕಿಸುವಂತೆ ಸಚಿವರು ಕೋರಿದ್ದಾರೆ.