ರೈಲ್ವೆ ಟಿಕೆಟ್ ದರ ಏರಿಕೆ ಕುರಿತು ಸಿಎಂ ಸಿದ್ದರಾಮಯ್ಯ ಅವರ ಟೀಕೆಗೆ ಕೇಂದ್ರ ಸಚಿವ ವಿ. ಸೋಮಣ್ಣ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಬೆಲೆ ಏರಿಕೆಗಳನ್ನು ಉಲ್ಲೇಖಿಸಿ, ಸೋಮಣ್ಣ 'ಬುರುಡೆ ಬಿಡುವುದನ್ನು ಯಾವಾಗ ನಿಲ್ಲಿಸುತ್ತೀರಿ' ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು (ಜು.2): ಕೇಂದ್ರ ರೈಲ್ವೆ ಇಲಾಖೆ ಜು.1 ರಿಂದ ಅನ್ವಯವಾಗುವಂತೆ ರೈಲೆ ಟಿಕೆಟ್‌ನಲ್ಲಿ ಕೊಂಚ ಪ್ರಮಾಣದ ಏರಿಕೆ ಮಾಡಿದೆ. ಆದರೆ, ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿ ಟ್ವೀಟ್ ಮಾಡಿದ್ದ ಸಿಎಂ ಸಿದ್ದರಾಮಯ್ಯ, 'ಪ್ರಧಾನಿ ನರೇಂದ್ರ ಅವರ ನೇತೃತ್ವದ ಕೇಂದ್ರ ಸರ್ಕಾರವು ರೈಲ್ವೆ ಟಿಕೆಟ್ ದರ ಹೆಚ್ಚಳ ಮಾಡಿರುವುದು ಈಗಾಗಲೇ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆಗಳ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರ ಮೇಲೆ ಮತ್ತೆ ಗದಾಪ್ರಹಾರ ಮಾಡಿದಂತೆ. ನಾವು ರೈತರಿಗೆ ನೆರವಾಗುವ ದೃಷ್ಟಿಯಿಂದ ಹಾಲಿನ ಬೆಲೆಯೇರಿಕೆ ಮಾಡಿದಾಗ ನಮ್ಮ ವಿರುದ್ಧ ಬೀದಿಗಿಳಿದ ರಾಜ್ಯದ ಬಿಜೆಪಿ ನಾಯಕರು ಈಗ ಕೇಂದ್ರ ತನ್ನ ಖಜಾನೆ ಭರ್ತಿಗೆ ರೈಲ್ವೆ ಟಿಕೆಟ್ ದರ ಹೆಚ್ಚಳ ಮಾಡಿದರೂ ಬಾಯಿಮುಚ್ಚಿ ಕೂತಿರುವುದು ಖಂಡನೀಯ' ಎಂದು ಬರೆದಿದ್ದರು.
ಈಗ ಸಿದ್ಧರಾಮಯ್ಯ ಅವರ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಹಾಗೂ ತುಮಕೂರು ಸಂಸದ ವಿ.ಸೋಮಣ್ಣ 'ಕರ್ನಾಟಕದ ಮುಖ್ಯಮಂತ್ರಿಗಳೇ, ʼಬುರುಡೆʼ ಬಿಡುವುದನ್ನು ಯಾವಾಗ ನಿಲ್ಲಿಸುತ್ತೀರಿ?' ಎಂದು ಪ್ರಶ್ನೆ ಮಾಡಿದ್ದಾರೆ. ಅದರೊಂದಿಗೆ ರಾಜ್ಯ ಸರ್ಕಾರ ಮಾಡಿರುವ ಬೆಲೆ ಏರಿಕೆ, ಹಿಂದಿನ ಯುಪಿಎ ಸರ್ಕಾರ ಮಾಡಿದ್ದ ರೈಲ್ವೆ ಟಿಕೆಟ್ ಬೆಲೆ ಏರಿಕೆ ಎಲ್ಲವನ್ನೂ ದಾಖಲೆ ಸಮೇತ ಇಟ್ಟು ತಿರುಗೇಟು ನೀಡಿದ್ದಾರೆ.
ವಿ.ಸೋಮಣ್ಣ ಮಾಡಿರುವ ಟ್ವೀಟ್‌ನ ಪೂರ್ಣ ಪಾಠ:
ಬೆಲೆ ಹೆಚ್ಚಳದ ಬಗ್ಗೆ ನಿಮ್ಮ ಮಾತು ಕೇಳಿ ʼಭೂತದ ಬಾಯಲ್ಲಿ ಭಗವದ್ಗೀತೆʼ ಎನ್ನುವ ಗಾದೆ ನೆನಪಾಗುತ್ತಿದೆ. ತಾವು ರಾಜ್ಯದ ಸಿಎಂ ಆದ ಕ್ಷಣದಿಂದಲೇ ಕನ್ನಡಿಗರು ನಿಮ್ಮ ಬೆಲೆ ಏರಿಕೆಯ ಹೊಡೆತಕ್ಕೆ ಬಳಲಿ ಬೆಂಡಾಗಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ಸಿಎಂ ಆಗಿದ್ದರೆ ಪೆಟ್ರೋಲ್, ಡೀಸೆಲ್ ಬೆಲೆ 10 ರೂ. ಕಡಿಮೆ ಮಾಡುತ್ತೇನೆ ಎಂದು ಬೊಬ್ಬಿರಿದು, ನಿಮ್ಮ ಸರದಿ ಬಂದಾಗ ಪೆಟ್ರೋಲ್ ಮೇಲೆ ಒಟ್ಟು 3 ರೂ., ಡೀಸೆಲ್ ಮೇಲೆ ಒಟ್ಟು 5 ರೂ. ಬೆಲೆ ಹೆಚ್ಚಳ ಮಾಡಿದ್ದನ್ನು ಇಡೀ ರಾಜ್ಯವೇ ಕಂಡಿದೆ.
ನಿಮ್ಮ ಆಡಳಿತದಲ್ಲಿ ಕಳೆದೆರಡು ವರ್ಷಗಳಲ್ಲಿನ ಬೆಲೆ ಹೆಚ್ಚಳ :
ನಂದಿನಿ ಹಾಲು : 9 ರೂ. ಹೆಚ್ಚಳ
ನಮ್ಮ ಮೆಟ್ರೋ : ಶೇ. 70 ರಷ್ಟು ಬೆಲೆ ಹೆಚ್ಚಳ
ಸರ್ಕಾರಿ ಬಸ್ ಪ್ರಯಾಣ ದರ : ಶೇ. 15-20 ರಷ್ಟು ಹೆಚ್ಚಳ
ಸ್ಟ್ಯಾಂಪ್ ಡ್ಯೂಟಿ, ನೋಂದಣಿ ಮತ್ತು ಮುದ್ರಾಂಕ ಶುಲ್ಕ : ಶೇ. 300 ರಿಂದ ಶೇ. 400 ರಷ್ಟು ಹೆಚ್ಚಳ
ವಿದ್ಯುತ್ : ಪ್ರತಿ ಯೂನಿಟ್‌ಗೆ 1.06 ರೂ. ಹೆಚ್ಚಳ (ನಿಗದಿತ ಶುಲ್ಕದ ಹೊರತಾಗಿ)
ನಿಮ್ಮ ಬೆಲೆ ಏರಿಕೆಯ ಕಥೆ ಹೇಳುತ್ತಾ ಹೋದರೆ, ಬಡವರು-ಮಧ್ಯಮ ವರ್ಗದವರ ಕಣ್ಣಂಚಲ್ಲಿ ರಕ್ತ ಹರಿಯುತ್ತೆ.
ಇನ್ನು ನಮ್ಮ ರೈಲ್ವೆ ಇಲಾಖೆಯ ಬೆಲೆ ಹೆಚ್ಚಳ ವಿಚಾರಕ್ಕೆ ಬಂದರೆ, 2012-13 ರಲ್ಲಿ ನಿಮ್ಮದೇ ಯುಪಿಎ ಸರ್ಕಾರ ಒಂದೇ ಬಾರಿಗೆ ಪ್ರತಿ ಕಿ.ಮೀ.ಗೆ 10 ಪೈಸೆ (10 ಪಟ್ಟು ಹೆಚ್ಚು) ಬೆಲೆ ಹೆಚ್ಚಳ ಮಾಡಿತ್ತು. ಆದರೆ, ನಮ್ಮ ಸರ್ಕಾರ 11 ವರ್ಷಗಳ ನಂತರ ಕೇವಲ 1 ಪೈಸೆ (ಪ್ರತಿ ಕಿ.ಮೀ) ಬೆಲೆ ಹೆಚ್ಚಳ ಮಾಡಿದೆ.
ರೈಲ್ವೆಯ ಬೆಲೆ ಹೆಚ್ಚಳದ ವಿವರ (ಪ್ರತಿ ಕಿ.ಮೀ.ಗೆ) : ಸಾಮಾನ್ಯ ರೈಲಿನ ಸೆಕೆಂಡ್ ಕ್ಲಾಸ್ ಪ್ರಯಾಣಕ್ಕೆ 1 ಪೈಸೆ ಹೆಚ್ಚಳ ಮಾಡಿದ್ದು, ಮೊದಲ 500 ಕಿ.ಮೀ. ಪ್ರಯಾಣಕ್ಕೆ ಇದು ಅನ್ವಯ ಆಗೋದಿಲ್ಲ. ನಾನ್ ಎಸಿ ಎಕ್ಸ್‌ಪ್ರೆಸ್ ರೈಲುಗಳ ಪ್ರಯಾಣಕ್ಕೆ ಕೇವಲ 1 ಪೈಸೆ, ಎಸಿ ಕ್ಲಾಸ್ ಪ್ರಯಾಣಕ್ಕೆ ಕೇವಲ 2 ಪೈಸೆ ಹೆಚ್ಚಳ ಮಾಡಲಾಗಿದೆ. ಉಪನಗರ ರೈಲು ಪ್ರಯಾಣದಲ್ಲಿ ಯಾವುದೇ ದರ ವ್ಯತ್ಯಾಸವಾಗಿಲ್ಲ.
ಅಲ್ಲದೇ, ಪ್ರಧಾನಿ ನರೇಂದ್ರ ಮೋದಿಜೀಯವರ ನೇತೃತ್ವದಲ್ಲಿ ಕಳೆದ 11 ವರ್ಷಗಳಲ್ಲಿ ಭಾರತದ ರೈಲ್ವೆಯ ಮೂಲಸೌಕರ್ಯದ ಪ್ರಮಾಣ ಉತ್ತುಂಗಕ್ಕೇರಿದೆ. ಪ್ರಯಾಣಿಕರ ಸೌಕರ್ಯವನ್ನು ಹೆಚ್ಚಿಸಲು ಆಧುನೀಕರಣ, ಸುರಕ್ಷತೆ ಮತ್ತು ಅಭಿವೃದ್ಧಿಗೆ ನಮ್ಮ ಸರ್ಕಾರ ಆದ್ಯತೆ ನೀಡಿದೆ.
ದೇಶದಾದ್ಯಂತ 136ಕ್ಕೂ ಹೆಚ್ಚು ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ರೈಲು ಅಪಘಾತಗಳನ್ನು ತಡೆಗಟ್ಟಲು ಕವಚ್ ಅನ್ನು ಕಾರ್ಯಗತಗೊಳಿಸಲಾಗುತ್ತಿದೆ. ಸಾಮಾನ್ಯ ಪ್ರಯಾಣಿಕರ ಅನುಕೂಲಕ್ಕಾಗಿ 10,000 ಜನರಲ್ ಕೋಚ್‌ಗಳನ್ನು ತಯಾರಿಸಲಾಗುತ್ತಿದೆ. ಪ್ರಯಾಣಿಕರ ದೂರದ ಪ್ರಯಾಣವನ್ನು ಸುಗಮವಾಗಿಸಲು ಅಮೃತ್ ಭಾರತ್ ಎಕ್ಸ್ʼಪ್ರೆಸ್ ರೈಲುಗಳನ್ನು ಆರಂಭಿಸಲಾಗಿದೆ. ಅಲ್ಲದೇ, ರಾಜ್ಯದ 61 ರೈಲ್ವೆ ನಿಲ್ದಾಣಗಳನ್ನು ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ.
ರೈಲ್ವೆ ಬಜೆಟ್‌ನಲ್ಲಿ ಗಣನೀಯ ಪ್ರಮಾಣದ ಹೆಚ್ಚಳವಾಗಿದ್ದು, 2025-26ನೇ ಸಾಲಿನಲ್ಲಿ 2.65 ಲಕ್ಷ ಕೋಟಿ ರೂ. ಅನುದಾನ ಒದಗಿಸಲಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕದ ರೈಲ್ವೆ ಅಭಿವೃದ್ಧಿಗಾಗಿ ಕೇವಲ 835 ಕೋಟಿ ರೂ. ಅನುದಾನ ನೀಡಲಾಗುತ್ತಿತ್ತು. ನಾವು ಅದನ್ನು 25-26ರಲ್ಲಿ 7,564 ಕೋಟಿ ರೂ.ಗೆ ಹೆಚ್ಚಿಸಿದ್ದೇವೆ.
ಜನತೆ ಕೊಟ್ಟ ಅಧಿಕಾರವನ್ನು ಅವರ ಸೇವೆಗೆ, ಅವರ ಅಭಿವೃದ್ಧಿಗೆ ಮೀಸಲಿಡುವುದು ನಮ್ಮ ಸರ್ಕಾರದ ಬದ್ಧತೆಯೇ ಹೊರತು, ನಿಮ್ಮ ಹಾಗೆ ಬಡವರ, ಮಧ್ಯಮ ವರ್ಗದವರ ಕಿಸೆಗೆ ಕೈ ಹಾಕಿ ಆಡಳಿತ ನಡೆಸುವುದಲ್ಲ.
