ನೆರೆಪೀಡಿತ ಭಟ್ಕಳಕ್ಕೆ ಭೇಟಿ ನೀಡಿದ ಸಿಎಂ, ತಲಾ 5 ಲಕ್ಷ ಪರಿಹಾರ!
ದಾಖಲೆಯ ಮಳೆಗೆ ಜರ್ಝರಿತವಾಗಿರುವ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿಗೆ ಸಿಎಂ ಬಸವರಾಜ ಬೊಮ್ಮಾಯಿ ಗುರುವಾರ ಭೇಟಿ ನೀಡಿ ನೆರೆ ಪೀಡಿತ ಪ್ರದೇಶಗಳನ್ನು ಪರಿಶೀಲಿಸಿದರು. ಇದೇ ವೇಳೆ ಗುಡ್ಡ ಕುಸಿತದಿಂದ ಸಾವಿಗೀಡಾದ ಕುಟುಂಬವನ್ನು ಭೇಟಿ ಮಾಡಿ ತಲಾ 5 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿದರು.
ಕಾರವಾರ (ಆ.3): ಭಾರಿ ಮಳೆಯಿಂದ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿರುವ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿಗೆ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ಮಾಡಿದರು. ಇದೇ ವೇಳೆ ಮುಟ್ಟಳಿಯಲ್ಲಿ ಮನೆ ಮೇಲೆ ಗುಡ್ಡ ಕುಸಿದು ಸಾವಿಗೀಡಾದ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಸಿಎಂ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ.ನಂತೆ 20 ಲಕ್ಷ ರೂ.ನ ಚೆಕ್ ವಿತರಣೆ ಮಾಡಿದರು. ಮುಟ್ಟಳ್ಳಿಯ ಪರಿಸ್ಥಿತಿಯನ್ನು ಪರಿಶೀಲನೆ ಮಾಡಿದರು. ಕಂದಾಯ ಸಚಿವ ಆರ್. ಅಶೋಕ್, ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮುಖ್ಯಮಂತ್ರಿಗೆ ಸಾಥ್ ನೀಡಿದ್ದರು. ಲಕ್ಷ್ಮೀ ನಾರಾಯಣ ನಾಯ್ಕ್, ಲಕ್ಷ್ಮೀ, ಅನಂತ ಹಾಗೂ ಪ್ರವೀಣ ಸಾವಿನ ಹಿನ್ನೆಲೆ ಕುಟುಂಬಸ್ಥರಿಗೆ ಪರಿಹಾರವನ್ನು ನೀಡಿ ಸಾಂತ್ವನ ಹೇಳಿದರು. ಭಟ್ಕಳದ ಮುಟ್ಟಳ್ಳಿಯಲ್ಲಿ ನಡೆದ ದುರ್ಘಟನೆ ವಿಚಾರ ಕೇಳಿ ಬಹಳ ಬೇಸರವಾಗಿದೆ. ಮೃತರ ಕುಟುಂಬಗಳಿಗೆ ಪರಿಹಾರ ನೀಡಲಾಗಿದ್ದು, ಭಟ್ಕಳದ ನೆರೆ ಸಂತ್ರಸ್ತರಿಗೂ ಪರಿಹಾರ ಒದಗಿಸಲಾಗುವುದು. ಜಿಲ್ಲೆಯಲ್ಲಿ ಸುಮಾರು ಅಂದಾಜು 40 ಕೋಟಿ ರೂ.ನಷ್ಟು ನಷ್ಟವಾಗಿರುವ ವರದಿ ದೊರಕಿದೆ. ಜಿಲ್ಲಾಡಳಿತದಲ್ಲಿರುವ ಎನ್‌ಡಿಆರ್‌ಎಫ್ ಫಂಡ್‌ನಲ್ಲಿರುವ 38ಕೋಟಿ ರೂ. ಅನ್ನು ವಿತರಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಅಂಗಡಿ ಹಾಗೂ ಕಟ್ಟಡಗಳ ನಷ್ಟಕ್ಕೆ ಹೆಚ್ಚಿನ ಅನುದಾನ ಸರಕಾರದಿಂದ ವಿತರಣೆ ಮಾಡಲಾಗುತ್ತದೆ ಎಂದೂ ಸಿಎಂ ಹೇಳಿದರು. ಸಿಎಂ ಬರುವ ಹಿನ್ನಲೆಯಲ್ಲಿ ಮುಟ್ಟಳ್ಳಿ ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಗುಡ್ಡ ಕುಸಿತವಾದ ಸ್ಥಳಕ್ಕೆ ಭೇಟಿ ನೀಡಿದ್ದಲ್ಲದೆ, ಗುಡ್ಡ ಕುಸಿತದಿಂದ ಸಾವಿಗೀಡಾದ ಕುಟುಂಬವನ್ನು ಭೇಟಿ ಮಾಡಿದರು. ಇದರೊಂದಿಗೆ ನೆರೆ ಸಂತ್ರಸ್ತರನ್ನು ಕೂಡಾ ಭೇಟಿ ಮಾಡಿ ಸಾಂತ್ವನದೊಂದಿಗೆ ಪರಿಹಾರ ಘೋಷಣೆ ಮಾಡಿದರು. ಸಿಎಂ ಅವರನ್ನು ಮೃತ ಲಕ್ಷ್ಮೀ ನಾರಾಯಣ ನಾಯ್ಕ್ ಅವರ ಪುತ್ರ ಈಶ್ವರ ನಾರಾಯಣ ನಾಯ್ಕ್, ಪುತ್ರಿ ಮಾಧವಿ ಸಂತೋಷ್ ಪೂಜಾರ್ ಹಾಗೂ ಮೃತ ಬಾಲಕ ಪ್ರವೀಣ ತಂದೆ ಬಾಲಕೃಷ್ಣ ಅವರು ಭೇಟಿಯಾಗಿ ಮಾತುಕತೆ ನಡೆಸಿದರು. ಮೃತ ಲಕ್ಷ್ಮೀ ನಾರಾಯಣ ನಾಯ್ಕ್ (60) ಅವರ ನಾಲ್ಕು ಮಕ್ಕಳ ಪೈಕಿ ಲಕ್ಷ್ಮೀ, ಅನಂತ ಬುಧವಾರ ಮೃತರಾಗಿದ್ದರು ಇನ್ನು ಬಾಲಕೃಷ್ಣ ಅವರ ಓರ್ವ ಪುತ್ರ ಪ್ರವೀಣ ನಿನ್ನೆ ಮೃತನಾಗಿದ್ದ. ಮನೆಗೆ ಆಧಾರ ಸ್ತಂಭವಾಗಿದ್ದ ಪ್ರವೀಣ, ತಂಗಿಯ ಶಿಕ್ಷಣ ವೆಚ್ಚ ಭರಿಸಿದ್ದ ಐಟಿಐ ಮಾಡಿಕೊಂಡು ಕೂಲಿ ಕೆಲಸ ಮಾಡಿ 16 ವರ್ಷದ ಪ್ರವೀಣ್ ಕುಟುಂಬವನ್ನು ಸಾಕುತ್ತಿದ್ದರು.
ಕರ್ನಾಟಕದಲ್ಲಿ ಮಳೆಯಬ್ಬರಕ್ಕೆ 11 ಬಲಿ: ಕೆಲವು ದಿನಗಳ ಬಿಡುವು ಬಳಿಕ ವರುಣನ ಆರ್ಭಟ
ರಾಜ್ಯ ಸಂಕಷ್ಟದಲ್ಲಿರೋವಾಗ ಜನ್ಮದಿನ ಆಚರಣೆ: ದಾವಣಗೆರೆಯಲ್ಲಿ ಸಿದ್ಧರಾಮೋತ್ಸವ ಆಚರಣೆ ಆಗುತ್ತಿರುವ ಬಗ್ಗೆಯೂ ಸಿಎಂ ಈ ವೇಳೆ ಮಾತನಾಡಿದರು. ಸಿದ್ದರಾಮಯ್ಯನವರಿಗೆ 75ನೇ ಹುಟ್ಟುಹಬ್ಬಕ್ಕೆ ವಯಕ್ತಿಕವಾಗಿ ಶುಭಾಶಯ ಕೋರುತ್ತೇನೆ. ಅವರಿಗೆ 75ವರ್ಷ ತುಂಬಿದ್ದಕ್ಕೆ ನಮಗೂ ಸಂತೋಷವಿದೆ ರಾಜ್ಯ ಸಂಕಷ್ಟದಲ್ಲಿರುವಾಗ ಹುಟ್ಟು ಹಬ್ಬ ಅದ್ಧೂರಿಯಾಗಿ ಆಚರಿಸಿದ್ದಕ್ಕೆ ಅವರೇ ಉತ್ತರ ಕೊಡಬೇಕು ಜನರ ಸಮಸ್ಯೆ, ನೆರೆ ಕಾಟ, ಸಾವು ನೋವಿಗಳಾಗೋವಾಗ ವ್ಯಯಕ್ತಿಕ ಆಚರಣೆ ಬೇಕಾ ಎಂದು ಅವರೇ ಹೇಳಬೇಕು ಎಂದು ತಿಳಿಸಿದರು.
ಭಟ್ಕಳದಲ್ಲಿ 24 ಗಂಟೆಯಲ್ಲಿ 55 ಸೆಂಮೀ ಮಳೆ: ಇದು ರಾಜ್ಯದ ಒಂದು ದಿನದ ಸಾರ್ವಕಾಲಿಕ ದಾಖಲೆ
ಫಾಜಿಲ್ ಮನೆಗೂ ಭೇಟಿ ನೀಡ್ತೇನೆ: ಮಂಗಳೂರಿನಲ್ಲಿ ಮೃತಪಟ್ಟ ಫಾಜಿಲ್ ಅವರ ಮನೆಗೂ ನಾನು ಭೇಟಿ ನೀಡುತ್ತೇನೆ ಎನ್ನುವ ಮೂಲಕ ಮೃತ ಹಿಂದೂಗಳ ಮನೆಗೆ ಮಾತ್ರ ಸಿಎಂ ಭೇಟಿ ನೀಡುತ್ತಾರೆ ಎನ್ನುವ ಆರೋಪವನ್ನು ತಳ್ಳಿ ಹಾಕಿದರು. ಪ್ರವೀಣ್ ಮನೆಗೆ ಭೇಟಿ ನೀಡಿದ್ದೇನೆ, ಮೃತ ಫಾಜೀಲ್ ಮನೆಗೂ ಭೇಟಿ ಕೊಡ್ತೇನೆ. ಸರ್ಕಾರ ಹಿಂದೂ ಮುಸ್ಲಿಂ ಅಂತಾ ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ. ಶೀಘ್ರದಲ್ಲಿ ಅವರ ಮನೆಗೆ ಭೇಟಿ ನೀಡುತ್ತೇನೆ ಎಂದು ಹೇಳಿದರು.