ಉತ್ತರ ಕನ್ನಡದಲ್ಲಿ ಬೆಕ್ಕುಗಳ ಜಗಳ ತಾರಕಕ್ಕೇರಿ ಮಾಲೀಕರು ಕತ್ತಿಯಿಂದ ಹೊಡೆದಾಡಿಕೊಂಡಿದ್ದಾರೆ. ಗಂಭೀರ ಗಾಯಗೊಂಡ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಉತ್ತರ ಕನ್ನಡ (ಮಾ.14): ಒಂದು ಬೀದಿ ಎಂದರೆ ನಾಯಿಗಳು, ಬೆಕ್ಕುಗಳು ಓಡಾಡುವುದು ಒಂದನ್ನೊಂದು ಬೆನ್ನಟ್ಟಿಕೊಂಡು ಹೋಗಿ ಕಚ್ಚಾಡುವುದು ಅಥವಾ ಸಂಪರ್ಕ ಮಾಡುವುದು ಎಲ್ಲವೂ ಸಾಮಾನ್ಯ. ಆದರೆ, ಇಲ್ಲೊಬ್ಬ ಮಾಲೀಕ ನಮ್ಮನೆ ಹೆಣ್ಣು ಬೆಕ್ಕಿನ ಹಿಂದೆ ನಿಮ್ಮನೆಯ ಗಂಡು ಬೆಕ್ಕು ಓಡಿ ಬಂದಿದೆ ಎಂದು ಪಕ್ಕದ ಮನೆಯವರೊಂದಿಗೆ ಮಚ್ಚಿನಿಂದ ಹಿಡಿದು ಹೊಡೆದಾಡಿಕೊಂಡು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೌದು, ಮನೆಯಲ್ಲಿ ಸಾಕಿದ್ದ ಬೆಕ್ಕುಗಳ ಜಗಳಕ್ಕಾಗಿ ಅವುಗಳ ಮಾಲೀಕರು ಕತ್ತಿಯಿಂದ ಹೊಡೆದಾಟ ಮಾಡಿಕೊಂಡಿದ್ದಾರೆ. ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ದೇಶಪಾಂಡೆ ನಗರ ಬಸ್ ಡಿಪೋ ಬಳಿ ನಿನ್ನೆ ರಾತ್ರಿ ನಡೆದಿದೆ. ಬೆಕ್ಕುಗಳ ಜಗಳದ ವಿಷಯಕ್ಕೆ ಅಕ್ಕಪಕ್ಕ ಮನೆದವರಲ್ಲಿ ಜಗಳ ಶುರುವಾಗಿದೆ. ಈ ಜಗಳ ವಿಕೋಪಕ್ಕೆ ಹೋಗಿ ಅಕ್ಕಪಕ್ಕದ ಮನೆಯವರ ನಡುವೆ ಹೊಡೆದಾಟ ನಡೆದಿದೆ. ಹೆಣ್ಣು ಬೆಕ್ಕಿನ ಯಜಮಾನ ಇಫ್ಜಾನ್ ಎಂಬಾತ, ಗಂಡು ಬೆಕ್ಕಿನ ಮನೆಯವರಾದ ಅದ್ನಾನ್ ತಲೆಗೆ ಹಾಗೂ ಸಹೋದರ ಅರ್ಜಾನ್ ಮೂಗಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಈ ಘಟನೆಯಿಂದ ಗಂಭೀರ ಗಾಯಗೊಂಡ ಇಬ್ಬರೂ ಸ್ಥಳೀಯರ ಸಹಕಾರದಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಸರ್ಕಾರಿ ಆಸ್ಪತ್ರೆಗೆ ಗಾಯಾಳುಗಳು ಬರುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದೆ. ಆಗ ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ದಾಂಡೇಲಿ ನಗರ ಠಾಣೆ ಪೊಲೀಸರು ಪ್ರಾಥಮಿಕ ಮಾಹಿತಿ ಸಂಗ್ರಹಿಸಿ ತನಿಖೆ ಮುಂದುವರೆಸಿದ್ದಾರೆ. ಆಗ ಪೊಲೀಸರಿಗೆ ತಿಳಿದುಬಂದ ವಿಷಯವೇನೆಂದರೆ ಅಕ್ಕಪಕ್ಕದಲ್ಲಿ ಇರುವ ಎರಡು ಮನೆಗಳ ಪೈಕಿ ಒಂದು ಮನೆಯ ಹೆಣ್ಣು ಬೆಕ್ಕು, ಪಕ್ಕದ ಮನೆಯ ಗಂಡು ಬೆಕ್ಕಿನ ಜತೆ ಕಾದಾಟಕ್ಕೆ ಇಳಿದಿತ್ತು. ಇದರಿಂದ ಹೆಣ್ಣು ಬೆಕ್ಕಿನ ಮನೆಯವರು ಮತ್ತು ಗಂಡು ಬೆಕ್ಕಿನ ಮನೆಯವರ ನಡುವೆ ಗಲಾಟೆ ನಡೆದಿದೆ ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ: ಸೂಪ್ ರುಚಿ ಹೆಚ್ಚಿಸಲು ಮೂತ್ರ ಮಾಡಿದ ರೆಸ್ಟೋರೆಂಟ್ ಸಿಬ್ಬಂದಿ; 4 ಸಾವಿರ ಗ್ರಾಹಕರಿಗೆ ಪರಿಹಾರ ಕೊಟ್ಟ ಮಾಲೀಕ!

ಬೆಕ್ಕಿನ ಜಗಳದ ವಿಷಯಕ್ಕೆ ಅಕ್ಕಪಕ್ಕದ ಮನೆಯವರು ಕೈ ಕೈ ಮೀಲಾಯಿಸುವ ಹಂತಕ್ಕೆ ತಿರುಗಿ, ಪರಸ್ಪರ ಹೊಡೆದಾಡಿಕೊಂಡಿದ್ದನ್ನು ನೋಡಿ ಪೊಲೀಸರಿಗೆ ಇದನ್ನು ಗಂಭೀರವಾಗಿ ಪರಿಗಣಿಸಬೇಕೋ ಅಥವಾ ಇಬ್ಬರಿಗೂ ಬುದ್ಧಿ ಹೇಳಬೇಕೋ ಎಂಬ ಪೇಚಿಗೆ ಸಿಲುಕಿದ್ದಾರೆ. ಇದೀಗ ಬೆಕ್ಕಿನ ಜಗಳಕ್ಕೆ ಮಾಲೀಕರು ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದ್ದು, ಚಿಕಿತ್ಸೆ ಪಡೆದು ಗುಣಮುಖರಾದ ನಂತರ ತನಿಖೆ ಮುಂದುವರೆಸುವುದಾಗಿ ತಿಳಿಸಿದ್ದಾರೆ.