ಬಿಟಿ ಲಲಿತಾ ನಾಯಕ್ ಮಾತನ್ನು ಒಪ್ಪೋದಿಲ್ಲ, ದೈವ ನರ್ತಕರ ಪವಿತ್ರ ಆಚರಣೆ ಗೌರವಿಸಿ: ಯುಟಿ ಖಾದರ್
ಕಾಂತಾರ ಚಿತ್ರದ ಬಗ್ಗೆ ಮಾತನಾಡುತ್ತಾ, ಕರಾವಳಿ ಭಾಗದ ಭೂತಾರಾಧಾನೆ ಹಾಗೂ ದೈವ ನರ್ತಕರಿಗೆ ನೀಡುವ ಮಾಸಾಶನಕ್ಕೆ ವಿರೋಧ ವ್ಯಕ್ತಪಡಿಸಿದ್ದ ಮಾಜಿ ಸಚಿವ ಬಿಟಿ ಲಲಿತಾ ನಾಯಕ್ ಅವರ ಮಾತಿಗೆ ಮಂಗಳೂರು ಶಾಸಕ ಯುಟಿ ಖಾದರ್ ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ನ.5): ರಾಜ್ಯ ಸರ್ಕಾರ ದೈವ ನರ್ತಕರಿಗೆ ಮಾಸಾಶನ ನೀಡಿದ್ದನ್ನು ವಿರೋಧಿಸಿದ್ದ ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್ ವಿರುದ್ಧ ಮಂಗಳೂರು ಕ್ಷೇತ್ರದ ಶಾಸಕ ಯು ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂತಾರ ಚಿತ್ರದ ಕುರಿತಾಗಿ ಮಾತನಾಡುತ್ತಾ ಕರಾವಳಿ ಭಾಗದಲ್ಲಿ ವ್ಯಾಪಕವಾಗಿ ನಂಬಿಕೆಯಲ್ಲಿರಯವ ಭೂತಾರಾಧನೆ, ದೈವ ನಂಬಿಕೆಗಳ ಬಗ್ಗೆ ಮಾತನಾಡಿದ್ದ ಬಿಟಿ ಲಲಿತಾ ನಾಯಕ್, ದೈವ ನರ್ತಕರಿಗೆ ಸರ್ಕಾರ ಘೋಷಣೆ ಮಾಡಿರುವ ಮಾಸಾಶನದ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ದರು. ದೈವ ನರ್ತಕರಿಗೆ ಮಾಸಾಶನ ನೀಡಿದ್ದು ತಪ್ಪು ಎಂದು ಹೇಳಿದ್ದರು. ಇದಕ್ಕೆ ಯುಟಿ ಖಾದರ್ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಮಾನ್ಯ ಬಿಟಿ ಲಲಿತಾ ನಾಯಕ್ ಅವರೇ ನಿಮ್ಮ ಬಗ್ಗೆ ನಮಗೆ ಗೌರವಿದೆ. ಆದರೆ, ದೈವ ನರ್ತಕರಿಗೆ ನೀಡಿರುವ ಮಾಸಾಧನ ಸರಿ ಅಲ್ಲ ಎನ್ನುವ ಮಾತನನ್ನು ನಾನು ಒಪ್ಪಲು ಸಿದ್ಧನಿಲ್ಲ. ನನ್ನ ಕ್ಷೇತ್ರ ಹಾಗೂ ಸಂಪೂರ್ಣ ಕರಾವಳಿ ಜನರ ಪರವಾಗಿ ನಾನು ನಿಮ್ಮ ಮಾತನ್ನು ಖಂಡಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇನ್ನೊಂದು ಟ್ವೀಟ್‌ನಲ್ಲಿ ದೈವ ನರ್ತಕರ ಪವಿತ್ರ ಆಚರಣೆ ಗೌರವಿಸಿ ಹಾಗೂ ಕರಾವಳಿ ಸಂಸ್ಕೃತಿಯನ್ನ ಅರ್ಥೈಸಿಕೊಂಡು ನಿಮ್ಮ ನಿಲುವಿನ ಬಗ್ಗೆ ಮರು ಚಿಂತನೆ ಮಾಡುವುದು ಒಳಿತು ಎಂದು ಅವರು ಬರೆದಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಲೇಖಕಿ ಬಿಟಿ ಲಲಿತಾ ನಾಯಕ್, ಕಾಂತಾರ ಚಿತ್ರ ಕಾಡಿನ ಜನರ ನೋವಿನ ಕಥೆ. ಜಮೀನ್ದಾರಿ ಪದ್ಧತಿಯ ಮೂಲಕ ಅವರನ್ನು ಒಕ್ಕಲೆಬ್ಬಿಸಲು ನೋಡಿದರು. ಅವರಿಗೆ ಕೊಡಬಾರದ ಚಿತ್ರಹಿಂಸೆಗಳನ್ನೆಲ್ಲಾ ನೀಡಿದರು. ಕೊನೆಗೆ ತಮ್ಮ ಉಳಿವಿಗಾಗಿ ಹಾಗೂ ನ್ಯಾಯಕ್ಕಾಗಿ ಸರ್ಕಾರದ ಮೊರೆ ಹೋದರು. ಅವರಿಂದಲೂ ಕೂಡ ನ್ಯಾಯ ಸಿಗದೇ ಇದ್ದಾಗ, ತಮ್ಮ ನೋವನ್ನು ಈ ರೀತಿ ಚೀರಾಡುವ ಮೂಲಕ ಹೊರಹಾಕಿದರು. ಅದನ್ನೇ ಈಗ ದೈವ ಎಂದು ನಂಬುತ್ತಿದ್ದಾರೆ ಎಂದು ವಿವಾದಿತ ಹೇಳಿಕೆ ನೀಡಿದ್ದರು. ಇನ್ನು ಭೂತಾರಾಧನೆಯ ಸಮಯದಲ್ಲಿ ದೇವರು ಬರುತ್ತಾರೆ ಅನ್ನೋದೆಲ್ಲಾ ಸುಳ್ಳು. ದೈವ ನರ್ತಕರು ಓಹೋ ಎಂದು ಚೀರಾಟ ಮಾಡುವುದು ಕುಣಿಯುವುದರ ಹಿಂದೆ ಬೇರೆಯದೇ ಆದ ಕಾರಣವಿದೆ. ಅವರ ಮೇಲೆ ದೇವರು ಬಂದಾಗ ಮಾಡುವ ವರ್ತನೆ ಇದಲ್ಲ.ಕಾಂತಾರ ಚಿತ್ರ ವೀಕ್ಷಿಸಲು ಬಹಳ ಬುದ್ಧಿವಂತಿಕೆ ಬೇಕು. ಈ ಚಿತ್ರದ ಸ್ಫೂರ್ತಿಯೊಂದಿಗೆ ಸರ್ಕಾರ ಕೂಡ ದೈವ ನರ್ತಕರಿಗೆ 2 ಸಾವಿರ ರೂಪಾಯಿ ಸಹಾಯಧನ ನೀಡುವ ತೀರ್ಮಾನ ಮಾಡಿರುವುದು ತಪ್ಪು ಎಂದು ಹೇಳಿದ್ದರು.
Rishab Shetty Meets Rajinikanth: ಕಾಂತಾರದ ಶಿವನಿಗೆ ಗೋಲ್ಡ್ ಚೈನ್ ಗಿಫ್ಟ್ ಆಗಿ ನೀಡಿದ ರಜನಿಕಾಂತ್?
ಇದಕ್ಕೂ ಮುನ್ನ ನಟ ಚೇತನ್ ಕೂಡ ಕಾಂತಾರ ಚಿತ್ರದ ಕುರಿತಾಗಿ ಮಾತನಾಡುತ್ತಾ, ಭೂತಾರಾಧಾನೆ ಹಿಂದು ಸಂಸ್ಕೃತಿಯಲ್ಲ ಎಂದು ಹೇಳಿದ್ದರು. ಕಾಂತಾರ ಚಿತ್ರದಲ್ಲಿ ತೋರಿಸಿರುವಂತೆ, ಭೂತದ ಕೋಲ, ದೈವಾರಾದನೆ ಹಿಂದು ಸಂಸ್ಕೃತಿಗೆ ಸೇರಿದ ಆಚರಣೆಯಲ್ಲ. ಅದು ಆ ಪ್ರದೇಶದ ಮೂಲ ನಿವಾಸಿಗಳಾದ ಆದಿವಾಸಿಗಳ ಹಬ್ಬ. ಅದನ್ನು ಹಿಂದು ಧರ್ಮದ ಜೊತೆ ಸೇರಿಸಿರುವುದು ತಪ್ಪು ಎಂದು ಹೇಳಿದ್ದರು. ಇದರ ಬೆನ್ನಲ್ಲಿಯೇ ಅವರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ಆರಂಭವಾಗಿದ್ದವು. ಬೆಂಗಳೂರು, ಮಂಗಳೂರು, ಧಾರವಾಡ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಅವರ ವಿರುದ್ಧ ಹಿಂದು ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ದೂರು ಹಾಗೂ ಎಫ್‌ಐಆರ್ ಕೂಡ ದಾಖಲು ಮಾಡಲಾಗಿತ್ತು.
ಕಾಂತಾರದ Varaha Roopam ಹಾಡಿಗೆ ಕಾನೂನು ತೊಡಕು, ಕೋಝಿಕ್ಕೋಡ್ ಕೋರ್ಟ್‌ನಿಂದ ತಡೆಯಾಜ್ಞೆ
ಇದರ ನಡುವೆ ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ಮಾಡಿದ್ದ ದೈವದ ಪಾತ್ರವನ್ನೇ ಮರುಸೃಷ್ಟಿಸಿ ಮಾಡಿ ಶ್ವೇತಾ ರೆಡ್ಡಿ ಎನ್ನುವ ಮಹಿಳೆ ರೀಲ್ಸ್ ಮಾಡಿದ್ದರು. ಈ ವೇಳೆ ಕರಾವಳಿ ಭಾಗದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾಗಲೂ, ಕೆಲ ಎಡಪಂಥೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ರಿಷಬ್ ಶೆಟ್ಟಿಗೆ ಇಲ್ಲದ ವಿರೋಧ ಶ್ವೇತಾ ರೆಡ್ಡಿಗೆ ಏಕೆ ಎಂದು ಪ್ರಶ್ನೆ ಮಾಡಿದ್ದರು. ಇದೆಲ್ಲದರ ನಡುವೆ ಶ್ವೇತಾ ರೆಡ್ಡಿ, ಧರ್ಮಸ್ಥಳಕ್ಕೆ ಬಂದು ಮಂಜುನಾಥ ಸ್ವಾಮಿಗೆ ತಪ್ಪು ಕಾಣಿಕೆ ಹಾಕಿ, ಕ್ಷಮೆ ಕೇಳಿ ಹೋಗಿದ್ದರು.