Basavaraj Bommai: ಸ್ತ್ರೀಯರ ಆತ್ಮರಕ್ಷಣೆ ತರಬೇತಿಗೆ ಪೊಲೀಸ್ ಶಾಲೆ ಬಳಕೆ
ಮಹಿಳೆಯರಿಗೆ ಆತ್ಮರಕ್ಷಣೆ ತರಬೇತಿ ನೀಡಲು ರಾಜ್ಯದಲ್ಲಿರುವ 12 ಪೊಲೀಸ್ ತರಬೇತಿ ಶಾಲೆಗಳನ್ನು ಬಳಸಿಕೊಳ್ಳುವಂತೆ ಗೃಹ ಇಲಾಖೆಗೆ ಸೂಚಿಸಲಾಗಿದೆ, ಶಾಲಾ-ಕಾಲೇಜುಗಳ ಮಕ್ಕಳಿಗೂ ಶೀಘ್ರದಲ್ಲಿಯೇ ಆತ್ಮ ರಕ್ಷಣಾ ತರಬೇತಿ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಬೆಂಗಳೂರು (ಫೆ.07): ಮಹಿಳೆಯರಿಗೆ ಆತ್ಮರಕ್ಷಣೆ ತರಬೇತಿ (Women Self Defense Training) ನೀಡಲು ರಾಜ್ಯದಲ್ಲಿರುವ 12 ಪೊಲೀಸ್ ತರಬೇತಿ ಶಾಲೆಗಳನ್ನು (Police Training Schools) ಬಳಸಿಕೊಳ್ಳುವಂತೆ ಗೃಹ ಇಲಾಖೆಗೆ ಸೂಚಿಸಲಾಗಿದೆ, ಶಾಲಾ-ಕಾಲೇಜುಗಳ ಮಕ್ಕಳಿಗೂ ಶೀಘ್ರದಲ್ಲಿಯೇ ಆತ್ಮ ರಕ್ಷಣಾ ತರಬೇತಿ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಘೋಷಿಸಿದ್ದಾರೆ.
ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ ಮೂಡಿಸಲು ಹಾಗೂ ಆತ್ಮರಕ್ಷಣೆಗಾಗಿ ರಾಜ್ಯಾದ್ಯಂತ ಮೆಟ್ರಿಕ್ ನಂತರದ 1.8 ಲಕ್ಷ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡುವ ‘ಓಬವ್ವ ಆತ್ಮರಕ್ಷಣಾ ಕಲೆ ತರಬೇತಿ’ಗೆ ಭಾನುವಾರ ವಿಧಾನಸೌಧದ ಮುಂಭಾಗ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಓಬವ್ವ ಶಕ್ತಿಯ ಪ್ರತೀಕವಾಗಿದ್ದು, ನಾಡು-ನುಡಿ ಹಾಗೂ ತನ್ನ ರಕ್ಷಣೆಗಾಗಿ ತ್ಯಾಗ ಮತ್ತು ಶೌರತ್ವ ಮೆರೆದಿದ್ದಾರೆ. ಇದರ ದ್ಯೋತಕವಾಗಿ ಕರಾಟೆ ತರಬೇತಿಗೆ ಓಬವ್ವನ ಹೆಸರನ್ನೇ ಇಡಲಾಗಿದೆ. ಮುಂಬರುವ ದಿನಗಳಲ್ಲಿ ಕೆಳದಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಉತ್ಸವಗಳನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಹೇಳಿದರು.
2 ದಶಕದಲ್ಲಿ 2000 ವರ್ಷದಷ್ಟು ಪರಿಸರ ಹಾನಿ: ಸಿಎಂ ಬೊಮ್ಮಾಯಿ
ಆತ್ಮರಕ್ಷಣೆಗೆ ಟಾನಿಕ್: ಕಾನೂನು ಸುವ್ಯವಸ್ಥೆ ಉತ್ತಮವಾಗಿರುವ ಕರ್ನಾಟಕದಲ್ಲಿ ಮಹಿಳೆಯರ ರಕ್ಷಣೆಗೆ ಪ್ರಾಮುಖ್ಯತೆ ನೀಡಲಾಗುವುದು. ಈ ತರಬೇತಿಯು ಆತ್ಮರಕ್ಷಣೆಗೆ ನೀಡುವ ಟಾನಿಕ್ ಇದ್ದಂತೆ. ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಅಧಿಕಾರಿಗಳು ನೀಡುತ್ತಿರುವ ಟಾನಿಕ್ ಬಳಸಿಕೊಳ್ಳಿ ಎಂದು ಕರೆ ನೀಡಿದರು. ಇದೇ ವೇಳೆ ತರಬೇತಿಗೆ ಸಂಬಂಧಪಟ್ಟಓಬವ್ವನ ಲಾಂಛನವನ್ನು ಮುಖ್ಯಮಂತ್ರಿಗಳು ಬಿಡುಗಡೆಗೊಳಿಸಿದರು. ಸಚಿವ ಹಾಲಪ್ಪ ಆಚಾರ್, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ತುಳಸಿ ಮುನಿರಾಜುಗೌಡ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಡಾ.ರವಿಕುಮಾರ್ ಸುರಪುರ ಮತ್ತಿತರರು ಉಪಸ್ಥಿತರಿದ್ದರು.
ರಕ್ಷಣೆಗಾಗಿ ತರಬೇತಿ: ಪ್ರಥಮ ಹಂತದಲ್ಲಿ 1700 ವಸತಿ ಶಾಲೆ ವಿದ್ಯಾರ್ಥಿನಿಯರು ಕರಾಟೆ ತರಬೇತಿ ಪಡೆಯಲಿದ್ದಾರೆ. ಬ್ಲ್ಯಾಕ್ ಬೆಲ್ಟ್ ಪಡೆದ ಸಾವಿರ ಮಹಿಳಾ ತರಬೇತುದಾರರಿಂದ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಗ್ರಾಮ ಒನ್‌ನಲ್ಲೇ ಪಡಿತರ ಕಾರ್ಡ್ ವಿತರಣೆ: ರಾಜ್ಯದಲ್ಲಿ ಸುಮಾರು ನಾಲ್ಕು ಲಕ್ಷ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‌ಗಳಿಗೆ ಮಂಜೂರಾತಿ ನೀಡಲಾಗಿದ್ದು, ಇವುಗಳನ್ನು ‘ಗ್ರಾಮ ಒನ್’ ಕೇಂದ್ರಗಳ ಮೂಲಕ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಗ್ರಾಮ ಒನ್’ ಯೋಜನೆ ಕುರಿತು ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಜಿಲ್ಲಾಡಳಿತ ಮತ್ತು ಗ್ರಾಮ ಒನ್ ಕಂಪ್ಯೂಟರ್ ಆಪರೇಟರ್‌ಗಳೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಸರ್ಕಾರ ತನ್ನ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಗ್ರಾಮ ಒನ್ ಆಪರೇಟರ್ಸ್‌ಗಳಿಗೆ ವಹಿಸಿದೆ. ಹಾಗಾಗಿ ಜನರ ಬಳಿ ಸೌಜನ್ಯದಿಂದ ವರ್ತಿಸಿ, ಅವರ ಸಮಸ್ಯೆಗಳನ್ನು ಆಲಿಸಿ, ಪರಿಹಾರವನ್ನು ನೀಡಬೇಕು ಎಂದು ಸಲಹೆ ನೀಡಿದರು.
Karnataka BJP ಸಿಎಂ ಮಾಡುವಾಗಲೇ 6 ತಿಂಗ್ಳು ಷರತ್ತು ಹಾಕಿ ಪ್ರಮಾಣವಚನಕ್ಕೆ ಅವಕಾಶ, ಜಾರಕಿಹೊಳಿ ಬಾಂಬ್
ಜನರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ ತ್ವರಿತವಾಗಿ ಸರ್ಕಾರದ ಸೇವೆಯನ್ನು ನೀಡಬೇಕು, ಮಾಹಿತಿ ಕೊರತೆ ಇದ್ದರೆ ಸ್ಪಷ್ಟೀಕರಣ ನೀಡಬೇಕು. ಸೇವೆ ಪೂರೈಸಲು ಕಾನೂನಾತ್ಮಕವಾಗಿ ಸಾಧ್ಯವಾಗದಿದ್ದಲ್ಲಿ ಅರ್ಜಿಯ ತಿರಸ್ಕಾರಕ್ಕೆ ಸಕಾರಣವನ್ನು ನೀಡಬೇಕು. ತಿರಸ್ಕೃತ ಅರ್ಜಿಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಅವುಗಳನ್ನು ಬಗೆಹರಿಸಬೇಕು. ಪಿಡಿಒ, ತಹಶೀಲ್ದಾರ್‌ಗಳು ಸಿಬ್ಬಂದಿಗಳೊಂದಿಗೆ ಸೌಹಾರ್ದತೆಯಿಂದ ಇರಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಮೀರಿದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸೇವೆಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಮಾಡುವ ಅರಿವು ಇರಬೇಕು ಎಂದರು.