ಇನ್ನು ಮುಂದೆ ಯಾವುದೇ ಸರ್ಕಾರಿ ಹಾಗೂ ಪಾಲಿಕೆಯಿಂದ ಕೈಗೊಳ್ಳುವ ಯೋಜನೆ ಹಾಗು ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದ ಸಾರ್ವಜನಿಕ ಜಾಹೀರಾತುಗಳಲ್ಲಿ ಜನಪ್ರತಿನಿಧಿಗಳ ಫೋಟೋ ಬಳಸುವಂತಿಲ್ಲ.

ಬೆಂಗಳೂರು[ನ.21]: ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನು ಮುಂದೆ ಯಾವುದೇ ಸರ್ಕಾರಿ ಹಾಗೂ ಪಾಲಿಕೆಯಿಂದ ಕೈಗೊಳ್ಳುವ ಯೋಜನೆ ಹಾಗು ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದ ಸಾರ್ವಜನಿಕ ಜಾಹೀರಾತುಗಳಲ್ಲಿ ಜನಪ್ರತಿನಿಧಿಗಳ ಫೋಟೋ ಬಳಸುವಂತಿಲ್ಲ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಸುತ್ತೋಲೆ ಹೊರಡಿಸಿದ್ದಾರೆ.

ನೀರಿನ ಘಟಕ, ರಸ್ತೆ, ಬಸ್‌ ನಿಲ್ದಾಣ ಸೇರಿದಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯಿಂದ ಕೈಗೊಳ್ಳುವ ಯಾವುದೇ ಯೋಜನೆ ಹಾಗೂ ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದ ಸಾರ್ವಜನಿಕ ಜಾಹೀರಾತುಗಳಲ್ಲಿ ಪ್ರಧಾನಮಂತ್ರಿ, ರಾಷ್ಟ್ರಪತಿ, ಮುಖ್ಯ ನ್ಯಾಯಮೂರ್ತಿಗಳು, ರಾಜ್ಯಪಾಲರು, ಮುಖ್ಯಮಂತ್ರಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರು ಹಾಗೂ ಮಹಾತ್ಮರ ಫೋಟೋಗಳನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಜನಪ್ರತಿನಿಧಿಗಳ ಹೆಸರಾಗಲಿ, ರಾಜಕೀಯ ಪಕ್ಷಗಳ ನಾಯಕರು, ಮುಖಂಡರ ಪೋಟೋಗಳನ್ನಾಗಲಿ ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ 2013ರ ಪ್ರಕರಣವೊಂದನ್ನು ಇತ್ಯರ್ಥಪಡಿಸುವಾಗ ತೀರ್ಪು ನೀಡಿದೆ.

ಹಾಗಾಗಿ ಇನ್ನು ಮುಂದೆ ಬಿಬಿಎಂಪಿ ವ್ಯಾಪ್ತಿಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಘಟಕ, ಬಸ್‌ ನಿಲ್ದಾಣಗಳು ಸೇರಿದಂತೆ ಇನ್ನಿತರೆ ಪಾಲಿಕೆ ಅಥವಾ ಸರ್ಕಾರಗಳ ಸಾರ್ವಜನಿಕ ಜಾಹೀರಾತು, ಪ್ರಕಟಣೆಗಳಲ್ಲಿ ಸುಪ್ರೀಂ ಕೋರ್ಟ್‌ ವಿನಾಯಿತಿ ನೀಡಿರುವ ಗಣ್ಯರು ಹಾಗೂ ಮಹಾತ್ಮರ ಫೋಟೋಗಳನ್ನು ಹೊರತುಪಡಿಸಿ ಯಾವುದೇ ರಾಜಕೀಯ ಪಕ್ಷಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳ ಹೆಸರನ್ನು ಹಾಕುವಂತಿಲ್ಲ ಎಂದು ಸುತ್ತೋಲೆ ಹೊರಡಿಸಿದ್ದಾರೆ.

ವಿನಾಯಿತಿ ಇರುವವರು

  • ಪ್ರಧಾನಮಂತ್ರಿ
  • ರಾಷ್ಟ್ರಪತಿ
  • ಮುಖ್ಯ ನ್ಯಾಯಮೂರ್ತಿಗಳು
  • ರಾಜ್ಯಪಾಲರು
  • ಮುಖ್ಯಮಂತ್ರಿ
  • ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರು
  • ಮಹಾತ್ಮರ ಫೋಟೋ