ಇತ್ತೀಚೆಗೆ ಅರ್ಬನ್ ಕಂಪನಿಯ ಬಾತ್‌ರೂಮ್ ಕ್ಲೀನಿಂಗ್ ಸಿಬ್ಬಂದಿ ಕನ್ನಡದಲ್ಲಿ ಮಾತನಾಡಲು ಹೇಳಿದ್ದಕ್ಕೆ ಸೇವೆಯನ್ನು ರದ್ದುಗೊಳಿಸಿದರು. ಕಣಾದ ಎಂಬುವವರು ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಮಾತನಾಡಿದ್ದಕ್ಕೆ ಸೇವೆ ನಿರಾಕರಿಸಿದ್ದಕ್ಕೆ ಅರ್ಬನ್ ಕಂಪನಿ ಕ್ಷಮೆ ಕೋರಿದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕೆಂದು ಕಣಾದ ಒತ್ತಾಯಿಸಿದ್ದಾರೆ. ಕಂಪನಿಯು ಭಾಷಾ ಸೇರ್ಪಡೆಯ ಮಹತ್ವವನ್ನು ಅರಿತು ಸೇವೆಯ ಗುಣಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ಕರ್ನಾಟಕದಲ್ಲಿ ಕನ್ನಡ ಮಾತನಾಡುವುದು ಎಂದರೆ ಕೆಲವರಿಗೆ ಸಂಕೋಚ ಎನ್ನುವುದು ತಿಳಿದದ್ದೇ. ಕನ್ನಡ ಗೊತ್ತಿಲ್ ಎನ್ನುವುದು ತುಂಬಾ ಖುಷಿಕೊಡುತ್ತದೆ, ಅದೇ ರೀತಿ ಬ್ಯಾಂಕ್ಗಳಲ್ಲಿ ಅಥವಾ ಇನ್ನಿತರ ಕಚೇರಿಗಳಿಗೆ ಹೋದಾಗ ಅಲ್ಲಿ ಕನ್ನಡ ಭಾಷೆಯೇ ಗೊತ್ತಿಲ್ಲ ಎನ್ನುವವರ ರೀತಿ ವರ್ತಿಸುವುದು ಬಹುತೇಕ ಎಲ್ಲರ ಗಮನಕ್ಕೆ ಬಂದಿರುತ್ತದೆ. ಕನ್ನಡದಲ್ಲಿ ಮಾತನಾಡಿ ಎಂದರೆ ಇವರು ಯಾವ ಲೋಕದಿಂದ ಬಂದವರು ಎಂದು ಮುಖವೆಲ್ಲಾ ತಿರುಚಿಕೊಂಡು ಹುಬ್ಬು ಏರಿಸುವುದು ಹಲವರಿಗೆ ಅನುಭವವೂ ಆಗಿರಬಹುದು. ಇಂಗ್ಲಿಷ್ನಲ್ಲಿ ಮಾತನಾಡುತ್ತಾ ಸ್ವಲ್ಪ ಸ್ಟೈಲಿಷ್ ಆಗಿ ಬಂದರೆ ಅಂಥವರಿಗೆ ಕರ್ನಾಟಕದಲ್ಲಿ ಮೊದಲ ಆದ್ಯತೆ. ಅದೇ ಕನ್ನಡದಲ್ಲಿ ಮಾತನಾಡಿಬಿಟ್ಟರೆ ಕೀಳು ಎನ್ನುವ ಮನೋಭಾವ. ಇನ್ನು ಬೆಂಗಳೂರಿನಲ್ಲಂತೂ ಕೇಳುವುದೇ ಬೇಡ ಬಿಡಿ. ಅದರ ಬಗ್ಗೆ ಹೇಳದೇ ಇರುವುದೇ ಒಳ್ಳೆಯದು ಎನ್ನುವ ರೀತಿ ಸ್ಥಿತಿ ಇದೆ.
ಇದೀಗ, ಅಂಥದ್ದೇ ಒಂದು ಘಟನೆ ಅರ್ಬನ್ ಕಂಪೆನಿಯ ಸಿಬ್ಬಂದಿ ಬಾತ್‌ರೂಮ್ ಕ್ಲೀನ್ ಮಾಡಲು ಬಂದಾಗ ನಡೆದಿದ್ದು, ಇದೀಗ ಕಂಪೆನಿಯೇ ಕ್ಷಮೆ ಕೋರುವ ಮಟ್ಟಿಗೆ ಬಂದಿದೆ. ಬಾತ್‌ರೂಮ್ ಕ್ಲೀನ್ ಮಾಡಲು ಬಂದವರಿಗೆ ಕನ್ನಡದಲ್ಲಿ ಮಾತನಾಡು ಎಂದು ಹೇಳಿದ್ದಕ್ಕೆ ಸರ್ವಿಸ್ ಅನ್ನೇ ಕ್ಯಾನ್ಸಲ್ ಮಾಡಿ ಹೋಗಿದ್ದಾರೆ! ಈ ವಿಚಾರ ಕಣಾದ ಎನ್ನುವವರು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಕೊನೆಗೆ ಅರ್ಬನ್ ಕಂಪೆನಿ ಕ್ಷಮೆಕೋರಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಇಬ್ಬರು ಬಾತ್‌ರೂಮ್ ಶುಚಿಗೊಳಿಸಲು ಬಂದಿದ್ದರು. ಅವರಿಗೆ ಬಾತ್‌ರೂಮ್ ತೋರಿಸಿದಾಗ ಬೇರೆ ಭಾಷೆಯಲ್ಲಿ ಮಾತನಾಡಿದರು. ಆಗ ಕರೆ ಮಾಡಿದವರು ಕನ್ನಡದಲ್ಲಿ ಮಾತನಾಡಿ ಎಂದದ್ದೇ ಇಷ್ಟೆಲ್ಲಾ ಘಟನೆಗೆ ಕಾರಣವಾಗಿದೆ.
ಮನೆಕೆಲಸಕ್ಕೆ ಜನ ಸಿಕ್ತಿಲ್ಲಾ ಎನ್ನೋ ಕೊರಗಾ? 15 ನಿಮಿಷದಲ್ಲೇ ಮನೆಬಾಗಿಲಿಗೆ- ಗಂಟೆಗೆ ಕೇವಲ 49 ರೂ!
ಕಣಾದ ಅವರೇ ಹೇಳಿಕೊಂಡಿರುವಂತೆ, ʼನಾನು ಅರ್ಬನ್ ಕಂಪನಿ ಮೂಲಕ ಬಾತ್‌ರೂಂ ಶುಚಿಗೊಳಿಸುವ ಸೇವೆಯನ್ನು ಬುಕ್ ಮಾಡಿದ್ದೆ. ಇದಕ್ಕಾಗಿ ಇಬ್ಬರು ಸಿಬ್ಬಂದಿ ಬಂದರು. ಬಾತ್‌ರೂಮ್ ತೋರಿಸಿದಾಗ ಬೇರೆ ಭಾಷೆಯಲ್ಲಿ ಮಾತನಾಡಿದರು. ಅದು ನನಗೆ ಅರ್ಥವಾಗಲಿಲ್ಲ. ಕನ್ನಡ ಪ್ಲೀಸ್ ಎಂದೆ. ಆಗ ಕನ್ನಡ ಬಾರದ ಅವರು, ಕನ್ನಡ ಮಾತನಾಡುವ ಯಾರೋ ಒಬ್ಬರಿಗೆ ಕರೆ ಮಾಡಿ ಇಲ್ಲಿ ನಡೆದ ಘಟನೆ ಹೇಳಿದರು. ಆಗ ಅವರು ನನ್ನ ಬಳಿ ಮಾತನಾಡಿದರು. ಆದರೆ ವಿಚಿತ್ರ ಎಂದರೆ ಅವರಿಗೆ ಕನ್ನಡ ಬರುತ್ತಿದ್ದರೂ, ಮತ್ತು ಇಲ್ಲಿ ನಡೆದಿರುವುದು ಕನ್ನಡದ ಕುರಿತಾದ ಘಟನೆ ಎಂದು ತಿಳಿದಿದ್ದರೂ ಇಂಗ್ಲಿಷ್ನಲ್ಲಿ ಮಾತನಾಡಿದರು. ಅವರು ಬೇರೆ ಭಾಷೆಯಲ್ಲಿ ಮಾತನಾಡಿದ್ರೆ ನಿಮಗೇನು ಕಷ್ಟ ಎಂದರು. ಆಗ ನಾನು, ನನ್ನ ಬಾತ್‌ರೂಂನಲ್ಲಿ ಅವರಿಗೆ ಕವಿತೆ ಬರೆಯಲು ಕೇಳಿಲ್ಲ, ಕ್ಲೀನ್ ಮಾಡಿ ಹೊರಡಲು ಏನ್ ಪ್ರಾಬ್ಲಂ ಎಂದು ಪ್ರಶ್ನಿಸಿದೆ. ಬಳಿಕ ಅವರು ಅರ್ಬನ್ ಕಂಪೆನಿಯ ಕಸ್ಟಮರ್ ಕೇರ್‌ಗೆ ಫೋನ್ ಮಾಡಿದ್ರು. ಅವರು ಕೂಡ ತಮಗೆ ಕನ್ನಡ ಬರಲ್ಲ ಎಂದರು. ಕೋಪಗೊಂಡು ಫೋನ್ ಕಟ್ ಮಾಡಿದೆ. ಬಳಿಕ ಅವರು ಬುಕಿಂಗ್ ಕ್ಯಾನ್ಸಲ್ ಮಾಡಿ ಹೊರಟೇ ಹೋದರು ಎಂದಿದ್ದಾರೆ.
ಅವರಿಗೆ ಕನ್ನಡ ಬರಲ್ಲ ಎಂದರೆ, ಬಾತ್‌ರೂಮ್ ಕ್ಲೀನ್ ಮಾಡುವ ನೇರ ಸೇವೆಗೆ ಭಾಷೆ ಏಕೆ ಅಡ್ಡಿಯಾಗಬೇಕು, ಕರ್ನಾಟಕದಲ್ಲಿ ಕನ್ನಡ ಮೊದಲ ಆಯ್ಕೆಯಾಗಿರಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ. ಕ್ಲೀನ್ ಮಾಡಲು ಭಾಷೆ ಯಾಕೆ ಬೇಕು? ಬಂದ ಕೆಲಸ ಮುಗಿಸಿಕೊಂಡು ಹೋಗಿ ಎಂದು ಕನ್ನಡದಲ್ಲಿ ಹೇಳಿದ್ದಕ್ಕೆ ಅವರಿಗೆ ಸಿಟ್ಟುಬಂತು ಎಂದಿದ್ದಾರೆ. ಕರ್ನಾಟಕದಲ್ಲಿರುವ ನನ್ನ ಸ್ವಂತ ಮನೆಯಲ್ಲಿ ನಾನು ಕನ್ನಡ ಮಾತನಾಡುವ ಕಾರಣಕ್ಕೆ ನನಗೆ ಸರ್ವೀಸ್ ಕ್ಯಾನ್ಸಲ್ ಮಾಡ್ತಾರೆ ಅನ್ನೋದು ತುಂಬಾ ಬೇಸರದ ಸಂಗತಿ. ಎಲ್ಲ ಕನ್ನಡಿಗರು ನಮ್ಮ ನೆಲೆಯನ್ನು ಕಳೆದುಕೊಳ್ಳಬಾರದು. ಮುಂದಿನ ಹಾದಿ ತುಂಬಾ ಸವಾಲಿನಿಂದ ಕೂಡಿರುತ್ತದೆ. ಆದರೆ ನಾವು ಬಲವಾಗಿ ಉಳಿಯಬೇಕು ಎಂದಿದ್ದಾರೆ.
ಕನ್ನಡ ಸಿನಿಮಾಗಳ ಬಗ್ಗೆ ಬೇಸರ ತೋಡಿಕೊಂಡ ನಟ ಯಶ್: ಗೋಳೋ ಅನ್ನೋ ಮೊದ್ಲು ಹೀಗೆ ಮಾಡಿ ಅಂದ ನಟ...
ಇದನ್ನು ಅರ್ಬನ್ ಕಂಪೆನಿಗೂ ಅವರು ಟ್ಯಾಗ್ ಮಾಡಿದ್ದ ಹಿನ್ನೆಲೆಯಲ್ಲಿ, ಕೊನೆಗೆ ಕಂಪೆನಿ ಕ್ಷಮೆ ಕೋರಿದೆ. ನೀವು ಅನುಭವಿಸಿದ ಅನಾನುಕೂಲತೆಗಾಗಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಅರ್ಬನ್ ಕಂಪನಿಯಲ್ಲಿ ನಿಮ್ಮ ಅನುಕೂಲತೆ ಮತ್ತು ಸಂತೋಷವೇ ನಮ್ಮ ಮೊದಲ ಆದ್ಯತೆ. ಈ ಬಾರಿ ನಾವು ನಿಮ್ಮ ನಿರೀಕ್ಷೆಗಳಿಗೆ ಅನುಗುಣವಾಗಿ ಸೇವೆ ನೀಡಲು ಸಾಧ್ಯವಾಗದಿದ್ದಕ್ಕೆ ವಿಷಾದಿಸುತ್ತೇವೆ. ಭಾಷಾ ಸೇರ್ಪಡೆ ಮಹತ್ವವನ್ನು ನಾವು ಸಂಪೂರ್ಣವಾಗಿ ಅರಿತಿದ್ದೇವೆ. ನಿಮ್ಮ ಪ್ರತಿಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿ, ಸೇವೆಯ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡುತ್ತೇವೆ. ನಿಮ್ಮ ಅಮೂಲ್ಯ ಪ್ರತಿಕ್ರಿಯೆಗೆ ಧನ್ಯವಾದಗಳು ಎಂದು ಹೇಳಿದೆ.
