ಬೀದರ್‌ [ನ.04]:  ಅನ್ನಭಾಗ್ಯ ಯೋಜನೆಗೆ ಸಂಬಂಧಪಟ್ಟು ಮತ್ತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದದ್ದು ಮನಮೋಹನ್‌ ಸಿಂಗ್‌ ಸರ್ಕಾರವೇ ಹೊರತು ಮೋದಿ ಸರ್ಕಾರವಲ್ಲ ಎಂಬುದನ್ನು ಯಡಿಯೂರಪ್ಪ ಅವರು ಅರ್ಥೈಸಿಕೊಳ್ಳಲಿ ಎಂದು ತಿಳಿಸಿದ್ದಾರೆ.

ನಗರದಲ್ಲಿ ಭಾನುವಾರ ನಡೆದ ಶೋಷಿತ ವರ್ಗಗಳ ಬೃಹತ್‌ ಜನ ಜಾಗೃತಿ ಸಮಾವೇಶ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅನ್ನಭಾಗ್ಯ ಜಾರಿಗೆ ತಂದಿದ್ದು ನಾನಾಗಿದ್ದರೂ ಇದೆಲ್ಲ ಮೋದಿ ಸರ್ಕಾರದ ಭಾಗ್ಯ ಎಂದು ಬಿಎಸ್‌ ಯಡಿಯೂರಪ್ಪ ಎಲ್ಲೆಂದರಲ್ಲಿ ಹೇಳುತ್ತ ನಡೆದಿದ್ದಾರೆ. ಆದರೆ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದದ್ದು ಮನಮೋಹನಸಿಂಗ್‌ ಸರ್ಕಾರ. ಅದು ಮೋದಿ ಸರ್ಕಾರದ ನಿರ್ಧಾರವಲ್ಲ ಎಂಬುವುದನ್ನು ಪದೇ ಪದೆ ಮೋದಿ ಯೋಜನೆಯನ್ನೇ ಸಿದ್ದು ಕೊಟ್ರು ಅನ್ನೋ ಬಿಎಸ್‌ವೈ ತಿಳಿದುಕೊಳ್ಳಲಿ, ಅರ್ಥೈಸಿಕೊಳ್ಳಲಿ, ಅಧ್ಯಯನ ಮಾಡಲಿ ಎಂದು ಗುಡುಗಿದರು.

ಅಷ್ಟಕ್ಕೂ ಅನ್ನಭಾಗ್ಯ ಯೋಜನೆ ಜಾರಿಗೆ ತಂದದ್ದು ಕರ್ನಾಟಕದಲ್ಲಿ ಮಾತ್ರ. ನಾನು ಅದೂ ಸಿಎಂ ಆಗಿದ್ದಾಗ. ಬಿಜೆಪಿಯ ಬೇರಾವ ರಾಜ್ಯದಲ್ಲಿಯೂ ಈ ಯೋಜನೆ ಜಾರಿಗೆ ತಂದಿಲ್ಲ. ಮಿಸ್ಟರ್‌ ಯಡಿಯೂರಪ್ಪ, ಸ್ವಲ್ಪ ಅಧ್ಯಯನ ಮಾಡಿ, ಇತಿಹಾಸ ಅರಿತು ಮಾತನಾಡಿ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಹೈದ್ರಾಬಾದ್‌ ಕರ್ನಾಟಕಕ್ಕೆ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದ ಬಗ್ಗೆಯೂ ಮಾತನಾಡಿದ ಅವರು, ಕಾಯಕ ಜೀವಿಗಳ ಕಲ್ಯಾಣ ಆಗದೆ ಕಲ್ಯಾಣ ಕರ್ನಾಟಕ ಅಂದು ಕರೆದುಕೊಂಡ್ರೆ ಏನೂ ಆಗಲ್ಲ ಎಂದು ಟಾಂಗ್‌ ನೀಡಿದರು. ಬಸವಣ್ಣ ಹೇಳಿದ್ದ ಕಾಯಕ ಮತ್ತು ದಾಸೋಹವನ್ನು ವಿಸ್ತರಿಸಿ ಅರ್ಥೈಸಿಕೊಳ್ಳಿ. ಬಸವಣ್ಣ ಹೇಳಿದ್ದನ್ನು ಹೇಳಿದ್ರೆ ಸಿದ್ದರಾಮಯ್ಯ ಜಾತಿ ಒಡೀತಾನೆ, ಧರ್ಮ ಒಡೀತಾನೆ ಅಂತಾರೆ. ನಾನೇನು ಮಾಡಲಿ ಎಂದು ಮಾರ್ಮಿಕವಾಗಿ ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಹಿಂದೆ ನಮ್ಮ ಸರ್ಕಾರ ಈ ಭಾಗಕ್ಕೆ ಸಂವಿಧಾನದ ಕಲಂ 371ಜೆ ಜಾರಿ ಮಾಡಿ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದರೆ, ಅಂದು ಬಿಜೆಪಿ ಸರ್ಕಾರ ವಿಶೇಷ ಸ್ಥಾನಮಾನ ಅಸಾಧ್ಯ ಎಂದು ರಾಜ್ಯದಲ್ಲಿದ್ದ ಎಸ್‌.ಎಂ.ಕೃಷ್ಣ ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು ಎಂದು ಆರೋಪಿಸಿದರು.

ಶೋಷಿತರಿಗಾಗಿ ಹೋರಾಡಿದ್ರೆ ಜಾತಿವಾದಿ ಎಂದು ಹೇಳ್ತಾರೆ

ಮಂಡಲ ವರದಿ ವಿರೋಧಿಸಿ ಶಾಲಾ ಮಕ್ಕಳಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ಮಾಡಿದವರು ಯಾರು? ಅಂದು ಇದೇ ಯಡಿಯೂರಪ್ಪ, ಈಶ್ವರಪ್ಪ ಪ್ರಶ್ನೆ ಮಾಡಿದ್ರಾ? ಶೋಷಿತರ ಅಭಿವೃದ್ಧಿ ಬಗ್ಗೆ ಚಿಂತಿಸಿದ್ರಾ? ಮಂಡಲ ವಿರೋಧಿಸಿದವ್ರಿಗೂ ಜೈ ಅಂತೀರಾ, ಮೀಸಲಾತಿ ಪ್ರಶ್ನಿಸಿದವರಿಗೂ ಜೈ ಅಂತೀರಾ ಎಂದು ಸಿದ್ದರಾಮಯ್ಯ ನೆರೆದಿದ್ದ ಸಭಿಕರ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು. ಅಷ್ಟಕ್ಕೂ ನಾನು ಶೋಷಿತರಿಗಾಗಿ ಹೋರಾಡಿದ್ರೆ ಜಾತಿವಾದಿ ಅಂತಾರೆ. ಶೋಷಿತ ಸಮಾಜಗಳು ತಮ್ಮ ಪರವಾಗಿ ನಿಲ್ಲುವವರ ಸಾಥ್‌ ನೀಡಿದ್ರೆ ಮಾತ್ರ ಸಮಾಜದಲ್ಲಿ ಆರ್ಥಿಕ, ಸಾಮಾಜಿತ ಅಭಿವೃದ್ಧಿಯ ಕನಸನ್ನು ಕಾಣಬಹುದು ಎಂದರು.