ಬೆಂಗಳೂರು[ಡಿ.17]: ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದವರ ಅಭಿವೃದ್ಧಿಗಾಗಿ 2019-20ನೇ ಸಾಲಿನಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯಡಿ ಶೇ.39ರಷ್ಟುಸಾಧನೆ ಮಾಡಲಾಗಿದ್ದು, ಯೋಜನೆಯ ಅನುದಾನ ಬಳಕೆ ಮಾಡದ ಇಲಾಖೆಗಳಿಂದ ಹಣ ಹಿಂಪಡೆದು ಹಣದ ಕೊರತೆ ಎದುರಿಸುತ್ತಿರುವ ಇತರ ಇಲಾಖೆಗಳಿಗೆ ವರ್ಗಾಯಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಸೋಮವಾರ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನ ವೆಚ್ಚವನ್ನು ವಿವಿಧ ಇಲಾಖೆ ಮಾಡಿರುವ ಕುರಿತು ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019-20ನೇ ಸಾಲಿನಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅಡಿಯಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದವರ ಅಭಿವೃದ್ಧಿಗಾಗಿ 30,445 ಕೋಟಿ ರು. ಒದಗಿಸಲಾಗಿದೆ. ವಿವಿಧ ಇಲಾಖೆಗಳು ವಿವಿಧ ಕಾರ್ಯಕ್ರಮಗಳಿಗೆ ಒಟ್ಟು 11861 ಕೋಟಿ ರು. ವೆಚ್ಚ ಮಾಡುವ ಮೂಲಕ ಶೇ.39ರಷ್ಟುಸಾಧನೆಯಾಗಿದೆ. ಕಳೆದ ಸರ್ಕಾರದ ಅವಧಿಯಲ್ಲಿ ರಾಜ್ಯ ಅಭಿವೃದ್ಧಿ ಪರಿಷತ್‌ನ ಸಭೆ ನಡೆಸಿ ಕ್ರಿಯಾಯೋಜನೆ ರೂಪಿಸಬೇಕಾಗಿತ್ತು. ಆದರೆ, ಈ ಕಾರ್ಯವು ಸಮರ್ಪಕವಾಗಿ ನಡೆದಿರಲಿಲ್ಲ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸೆ.16 ರಂದು ಎಸ್‌ಸಿಎಸ್‌ಪಿ/ಟಿಎಸ್‌ಪಿ ರಾಜ್ಯ ಅಭಿವೃದ್ಧಿ ಪರಿಷತ್‌ ಸಭೆ ನಡೆಸಿ ಕ್ರಿಯಾ ಯೋಜನೆಗಳನ್ನು ಅನುಮೋದಿಸಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ವಿವಿಧ ಇಲಾಖೆಗಳಿಗೆ ನೀಡಿರುವ ಅನುದಾನವನ್ನು ಯಾವ ಕಾರಣಕ್ಕಾಗಿ ಬಳಕೆ ಮಾಡಿಲ್ಲ ಎಂಬುದರ ಕುರಿತು ಎರಡು ದಿನದಲ್ಲಿ ವಿವರಣೆ ನೀಡುವಂತೆ ಸೂಚನೆ ನೀಡಲಾಗಿದೆ. ನಿರ್ದಿಷ್ಟಕ್ರಮಗಳಿಗೆ ಅನುದಾನ ಬಳಕೆ ಮಾಡಬೇಕು. ಇಲ್ಲದಿದ್ದರೆ ಸಂಬಂಧಪಟ್ಟಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಅನುದಾನ ವೆಚ್ಚ ಮಾಡದಿರುವ ಇಲಾಖೆಗಳಿಂದ ಹಿಂಪಡೆದು ಆ ಮೊತ್ತವನ್ನುಬೇರೆ ಇಲಾಖೆಯಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆಯಡಿ ಎಸ್‌ಸಿ ಕಲ್ಯಾಣಕಾಗಿ ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 4649 ಕೋಟಿ ರು. ಒದಗಿಸಲಾಗಿದೆ. 1150 ಕೋಟಿ ರು.ವೆಚ್ಚ ಮಾಡಲಾಗಿದೆ. ಎಸ್‌ಟಿ ಕಲ್ಯಾಣಕ್ಕಾಗಿ 1389 ಕೋಟಿ ರು. ಒದಗಿಸಿದ್ದು, 515.76 ಕೋಟಿ ರು. ವೆಚ್ಚ ಮಾಡಲಾಗಿದೆ. ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ 1,69,374 ಎಸ್‌ಸಿ ಮತ್ತು 33,098 ಎಸ್‌ಟಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ. ವಿದ್ಯಾರ್ಥಿನಿಲಯದಲ್ಲಿ ನೆಲೆಸಿರುವ ವಿದ್ಯಾರ್ಥಿಗಳಿಗೆ ಊಟ, ಸಮವಸ್ತ್ರ, ಲೇಖನ ಸಾಮಾಗ್ರಿ ಸೇರಿದಂತೆ ಇತರೆ ವೆಚ್ಚಕ್ಕಾಗಿ 279.43 ಕೋಟಿ ರು. ವೆಚ್ಚ ಮಾಡಲಾಗಿದೆ. ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಲಯಗಳ ದುರಸ್ತಿಗಾಗಿ ರು. 200 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ. ವಿದ್ಯಾರ್ಥಿನಿಯಲಗಳ ಹೊಸ ಕಟ್ಟಡಗಳ ನಿರ್ಮಾನಕ್ಕಾಗಿ 188 ಕೋಟಿ ರು. ಅನುದಾನ ಒದಗಿಸಲಾಗಿದೆ ಎಂದು ವಿವರಿಸಿದರು.

ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ 824 ವಸತಿ ಶಾಲಾ/ಕಾಲೇಜುಗಳನ್ನು ನಡೆಸಲಾಗುತ್ತಿದೆ. 1.70 ಲಕ್ಷ ಎಸ್‌ಸಿ/ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ನೀಡಲಾಗಿದೆ. 726 ಕೋಟಿ ರು. ನಿರ್ವಹಣೆಗಾಗಿ, 670 ಕೋಟಿ ರು. ಶಾಲಾ ಸಂಕೀರ್ಣಗಳ ನಿರ್ಮಾಣಕ್ಕಾಗಿ ಒದಗಿಸಲಾಗಿದೆ. ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ಪ್ರಬುದ್ಧ ಯೋಜನೆಯಡಿ ಎಸ್‌ಸಿ 45 ವಿದ್ಯಾರ್ಥಿಗಳನ್ನು ಮತ್ತು ಎಸ್‌ಟಿ 10 ವಿದ್ಯಾರ್ಥಿಗಳನ್ನು ವಿದೇಶಿ ವ್ಯಾಸಂಗಕ್ಕೆ ನಿಯೋಜಿಸಲಾಗಿದೆ. ಇದಕ್ಕಾಗಿ 7.24 ಕೋಟಿ ರು. ವೆಚ್ಚ ಭರಿಸಲಾಗುತ್ತಿದೆ. ಗಂಗ ಕಲ್ಯಾಣ ಯೋಜನೆಗೆ 300 ಕೋಟಿ ರು. ಅನುದಾನ ನೀಡಲಾಗಿದ್ದು, 1626 ಎಸ್‌ಸಿ ಫಲಾನುಭವಿಗಳಿಗೆ, 677 ಎಸ್‌ಟಿ ಫಲಾನುಭವಿಗಳಿಗೆ ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಒಟ್ಟು 122.35 ಕೋಟಿ ರು. ವೆಚ್ಚ ಭರಿಸಲಾಗಿದೆ. 1570 ಎಸ್‌ಸಿ, 2330 ಎಸ್‌ಟಿ ಕೊಳವೆ ಬಾವಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಭೂ ಒಡೆತನ ಯೋಜನೆಯಡಿ 725 ಎಸ್‌ಸಿ ಫಲಾನುಭವಿಗಳಿಗೆ 88.82 ಕೋಟಿ ರು. ಮತ್ತು 349 ಎಸ್‌ಟಿ ವರ್ಗದವರಿಗೆ 35.83 ಕೋಟಿ ರು. ವೆಚ್ಚದಲ್ಲಿ ಕೃಷಿಭೂಮಿಯನ್ನು ಖರೀದಿಸಿ ನೀಡಲಾಗಿರುತ್ತದೆ. ಸ್ವಯಂ ಉದ್ಯೋಗ ಮತ್ತು ಮೈಕ್ರೋ ಕ್ರೆಡಿಟ್‌ ಯೋಜನೆಯಡಿ 4483 ಎಸ್‌ಸಿ ಫಲಾನುಭವಿಗಳಿಗೆ 56.27 ಕೋಟಿ ರು., 2906 ಎಸ್‌ಟಿ ಫಲಾನುಭವಿಗಳಿಗೆ 31.16 ಕೋಟಿ ರು. ವೆಚ್ಚದಲ್ಲಿ ಸಹಾಯಧನ ನೀಡಲಾಗಿದೆ. ಐರಾವತ ಯೊಜನೆಯಡಿ ಎಸ್‌ಸಿ/ಎಸ್‌ಟಿ 776 ನಿರುದ್ಯೋಗಿಗಳಿಗೆ ಟ್ಯಾಕ್ಸಿಗಳನ್ನು ನೀಡಲಾಗಿದೆ. 38.80 ಕೋಟಿ ರು. ಸಹಾಯಧನ ನೀಡಲಾಗಿದೆ. ಇನ್ನೂ ಮೂರು ಸಾವಿರ ಫಲಾನುಭವಿಗಳಿಗೆ ಈ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.