ಕೊಡಗಿನಲ್ಲಿ 2 ದಿನಗಳಿಂದ ಅಕಾಲಿಕ ಮಳೆ: ಕಾಫಿ, ಭತ್ತ ಸೇರಿದಂತೆ ವಿವಿಧ ಬೆಳೆಗಳು ಹಾಳು, ಸಂಕಷ್ಟದಲ್ಲಿ ರೈತರು!
ಕಳೆದ ಎರಡು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಅಕಾಲಿಕ ಮಳೆ ಸುರಿದಿದ್ದು ವಿವಿಧ ಬೆಳೆಗಳು ಹಾಳಾಗುತ್ತಿವೆ. ಹೌದು ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮೋಡ ಕವಿದ ವಾತಾವರಣವಿತ್ತು.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಜ.05): ಕಳೆದ ಎರಡು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಅಕಾಲಿಕ ಮಳೆ ಸುರಿದಿದ್ದು ವಿವಿಧ ಬೆಳೆಗಳು ಹಾಳಾಗುತ್ತಿವೆ. ಹೌದು ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮೋಡ ಕವಿದ ವಾತಾವರಣವಿತ್ತು. ಆದರೆ ಎರಡು ದಿನಗಳಿಂದ ವಿಪರೀತ ಹಿಮ ಸುರಿಯುವ ಜೊತೆಗೆ ಜಿಟಿಜಿಟಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಕಾಫಿ, ಭತ್ತದ ಬೆಳೆಗಳು ಹಾಳಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ. ಗುರುವಾರ ಬೆಳಿಗ್ಗೆಯಿಂದಲೇ ಬೆಳಿಗ್ಗೆಯಿಂದಲೇ ಜಿಟಿಜಿಟಿ ಮಳೆ ಸುರಿದಿತ್ತು. ಬಳಿಕ ಸಂಜೆಹೊತ್ತಿಗೆ ಒಂದು ಗಂಟೆಗೂ ಹೆಚ್ಚು ಸಮಯ ರಭಸವಾಗಿಯೇ ಸುರಿದಿತ್ತು.
ಗುರುವಾರ ರಾತ್ರಿಯೂ ಭಾರೀ ಮಳೆ ಸುರಿದ ಪರಿಣಾಮ ಕಾಫಿ, ಭತ್ತದ ಬೆಳೆ ನೀರು ಪಾಲಾಗಿವೆ. ಕಾಫಿ ಕೊಯ್ಲು ನಡೆಯುತ್ತಿದ್ದು ಕೊಯ್ಲು ಮಾಡಿದ್ದ ಕಾಫಿ ಕಣದಲ್ಲಿಯೇ ಮಳೆಗೆ ನೆನೆದು ಹಾಳಾಗಿದೆ. ಒಂದು ವಾರದಿಂದಲೂ ನಿರಂತರವಾಗಿ ಮೋಡ ಕವಿದ ವಾತಾವರಣ ಹಾಗೂ ಹಿಮ ಸುರಿಯುತ್ತಿರುವುದರಿಂದ ಅರ್ಧಂಬರ್ಧ ಒಣಗಿದ್ದ ಕಾಫಿ ಫಂಗಸ್ ಬಂದು ಹಾಳಾಗುತ್ತಿದೆ. ಇದರಿಂದ ಕಾಫಿಗೆ ಬೆಲೆ ಕಡಿಮೆಯಾಗಿ ನಷ್ಟ ಅನುಭವಿಸುವ ಆತಂಕಕ್ಕೆ ರೈತರು ಸಿಲುಕಿದ್ದಾರೆ. ಇನ್ನು ಗಿಡದಲ್ಲಿ ಕಾಫಿ ಹಣ್ಣಾಗಿದ್ದು ಕೊಯ್ಲು ಮಾಡದೆ ಬಿಡುವಂತೆಯೂ ಇಲ್ಲ. ಬಿಟ್ಟರೆ ಮಳೆಯಲ್ಲಿ ನೆನೆದು ಹಣ್ಣು ಉದುರಿ ಹೋಗುತ್ತದೆ.
ಗಾನಚಂದ್ರಿಕಾ ಕಲ್ಚರಲ್ ಫೌಂಡೇಷನ್‌ನಿಂದ ರಾಜ್ಯಮಟ್ಟದ ಭಾವಗೀತೆ ಸ್ಪರ್ಧೆ: ಭಾಗವಹಿಸಿ, ಬಹುಮಾನ ಗೆಲ್ಲಿ..
ಕೊಯ್ಲು ಮಾಡಿದರೆ ಒಣಗಿಸಲಾಗದೆ ಫಂಗಸ್ ಬಂದು ಹಾಳಾಗುತ್ತದೆ. ಹೀಗಾಗಿ ಕಾಫಿ ಬೆಳೆಗಾರರು ಏನು ತೋಚದಂತಹ ಇಕ್ಕಟ್ಟಿಗೆ ಸಿಲುಕಿದ್ದಾರೆ. ಮತ್ತೊಂದೆಡೆ ಭತ್ತದ ಬೆಳೆಯೂ ಹಾಳಾಗಿದೆ. ರೈತರು ಮಳೆಕೊರತೆಯ ನಡುವೆಯೂ ಕಷ್ಟಪಟ್ಟು ಬೆಳೆದಿದ್ದ ಭತ್ತವನ್ನು ಕೊಯ್ಲು ಮಾಡಿ ಕಣಕ್ಕೆ ಸಾಗಿಸದೆ ಗದ್ದೆಯಲ್ಲೇ ಬಿಟ್ಟಿದ್ದರು. ಆದರೆ ಮಳೆ ಬಂದು ಗದ್ದೆಗಳಿಗೆ ನೀರು ತುಂಬಿಕೊಂಡಿರುವುದರಿಂದ ಕೊಯ್ಲು ಮಾಡಿದ್ದ ಭತ್ತದ ಬೆಳೆ ಗದ್ದೆಯಲ್ಲಿ ನೆನೆದು ಹಾಳಾಗುತ್ತಿದೆ. ಕೊಯ್ಲು ಮಾಡಿದ್ದ ಭತ್ತ ನೆನೆದಿರುವುದರಿಂದ ಅದನ್ನು ಕಣಕ್ಕೆ ಸಾಗಿಸುವಂತೆಯೂ ಇಲ್ಲ, ಗದ್ದೆಯಲ್ಲಿಯೂ ಬಿಡುವಂತಿಲ್ಲ.
ಕಣಕ್ಕೆ ಸಾಗಿಸಲು ಕೊಯ್ಲು ಮಾಡಿರುವ ಭತ್ತದ ಬೆಳೆಯನ್ನು ತೆಗೆದರೆ ಎಲ್ಲವೂ ಉದುರಿ ಹೋಗುತ್ತದೆ. ಹಾಗೆಯೇ ಬಿಟ್ಟರೆ ಗದ್ದೆಯಲ್ಲೇ ಮೊಳಕೆ ಬರುತ್ತದೆ. ಹೀಗಾಗಿ ಬೆಳೆ ಹಾಳಾಗುವ ಆತಂಕದಲ್ಲಿ ರೈತರು ಕಂಗಾಲಾಗಿದ್ದಾರೆ. ಈ ಕುರಿತು ಮಾತನಾಡಿರುವ ಕಾಫಿ ಬೆಳೆಗಾರ ಸುಂಟಿಕೊಪ್ಪದ ಪ್ರಸಾದ್ ಕುಟ್ಟಪ್ಪ ನಮಗೆ ವರ್ಷಕ್ಕೊಮ್ಮೆಯ ಬೆಳೆ. ಕಷ್ಟಪಟ್ಟು ಬೆಳೆದು ಬೆಳೆ ಕೈ ಸೇರುವ ಹೊತ್ತಿನಲ್ಲಿ ಹೀಗೆ ಅಕಾಲಿಕ ಮಳೆ ಬಂದು ಹಾಳಾಗುತ್ತಿದೆ. ಇದರಿಂದ ಕಾಫಿಗೆ ಬೆಲೆ ಕಡಿಮೆಯಾಗಿ ನಷ್ಟ ಅನುಭವಿಸುವಂತೆ ಆಗಿದೆ.
ರಾಮಭಕ್ತ ಹನುಮನ ದೇವಸ್ಥಾನ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತ ಶಾಸಕ ಬೆಲ್ಲದ!
ಇಂದು ಕಾಫಿ ಬೆಳೆಗಾರರಿಗೆ ತೀವ್ರ ವೆಚ್ಚಗಳಾಗುತ್ತಿದ್ದು ಅದರ ನಡುವೆ ಈ ರೀತಿ ಬೆಳೆ ಹಾಳಾದರೆ ಏನು ಮಾಡಬೇಕೆಂಬುದೇ ತೋಚದಂತೆ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಭತ್ತದ ಬೆಳೆಗಾರರಾದ ರೈತ ರಾಮಚಂದ್ರ ಅವರು ಮುಂಗಾರಿನಲ್ಲಿ ಮಳೆ ಕೈ ಕೊಟ್ಟಿತ್ತು. ಆದರೂ ಸಾಲ ಮಾಡಿ ನೀರು ಹಾಯಿಸಿ ಭತ್ತದ ಬೆಳೆ ಬೆಳೆದಿದ್ದೆವು. ಭತ್ತದ ಕೊಯ್ಲು ಮಾಡಿ ಕಣಕ್ಕೆ ಸಾಗಿಸಬೇಕೆಂಬ ಸಂದರ್ಭದಲ್ಲಿ ಮಳೆ ಸುರಿಯುತ್ತಿರುವುದರಿಂದ ಏನು ಮಾಡಬೇಕೆಂದು ದಿಕ್ಕು ತೋಚದಂತೆ ಆಗಿದೆ. ಇನ್ನೂ ನಾಲ್ಕೈದು ದಿನಗಳ ಕಾಲ ಮಳೆ ಸುರಿಯುವ ಮಾಹಿತಿ ಇದೆ. ಹೀಗಾಗದರೆ ನಮ್ಮ ಪರಿಸ್ಥಿತಿ ಏನು. ಸರ್ಕಾರ ಪರಿಹಾರ ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.