ಬೆಂಗಳೂರು (ಅ.01):  ಇತ್ತೀಚೆಗೆ ದೆಹಲಿಯಲ್ಲಿ ನಿಧನ ಹೊಂದಿದ ಕೇಂದ್ರ ಸಚಿವರಾಗಿದ್ದ ಸುರೇಶ್‌ ಅಂಗಡಿ ಅವರ ಸಮಾಧಿ ಹಾಗೂ ವೀರಶೈವ ಲಿಂಗಾಯತ ರುದ್ರಭೂಮಿಗೆ ತಡೆಗೋಡೆ ನಿರ್ಮಿಸುವಂತೆ ಅವರ ಕುಟುಂಬದ ಸದಸ್ಯರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಸುರೇಶ್‌ ಅಂಗಡಿ ಅವರ ಅಳಿಯಂದಿರಾದ ಸಂಕಲ್ಪ ಶೆಟ್ಟರ್‌ ಹಾಗೂ ಡಾ.ರಾಹುಲ್‌ ಪಾಟೀಲ್‌ ಅವರು ಬುಧವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಈ ವೇಳೆ ಅಂಗಡಿ ಅವರ ಬೀಗರಾದ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಅವರೂ ಉಪಸ್ಥಿತರಿದ್ದರು.

'ಸಿಎಂ ರೇಸ್‌ನಲ್ಲಿ ಸುರೇಶ್ ಅಂಗಡಿ ಹೆಸರಿತ್ತು'

ಕೊರೋನಾ ರೋಗಕ್ಕೆ ತುತ್ತಾಗಿ ಈ ತಿಂಗಳ 23ರಂದು ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಕೇಂದ್ರ ಸಚಿವ ಸುರೇಶ್‌ ಅಂಗಡಿ ಅವರು ನಿಧನರಾಗಿದ್ದರು. ಕರೋನಾ ಹಿನ್ನಲೆಯಲ್ಲಿ ಅವರ ಪಾರ್ಥಿವ ಶರೀರವನ್ನು ದೆಹಲಿಯ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಯನ್ನು ನಡೆಸಲಾಗಿತ್ತು. ಈ ಸ್ಥಳದಲ್ಲಿ ದಿವಂಗತರ ಘನತೆಗೆ ತಕ್ಕುದಾದಂತಹ ಸಮಾಧಿಯನ್ನು ನಿರ್ಮಿಸುವ ಮೂಲಕ ಗೌರವ ಸಲ್ಲಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ದೆಹಲಿಯ ದ್ವಾರಕಾದಲ್ಲಿರುವ ವೀರಶೈವ ಲಿಂಗಾಯತ ರುದ್ರಭೂಮಿಗೆ ತಡೆಗೋಡೆ ಹಾಗೂ ಸಮಾಧಿಯನ್ನು ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.