Asianet Suvarna News Asianet Suvarna News

ಒಬ್ಬ ಪ್ರಧಾನಿ ಎಷ್ಟು ಸರಳವಾಗಿ ಬದುಕಬಹುದೆಂದು ತೋರಿಸಿಕೊಟ್ಟವರು ಲಾಲ್ ಬಹದ್ದೂರ್: ಶೋಭಾ ಕರಂದ್ಲಾಜೆ

ಅಹಿಂಸೆಯನ್ನು ವಿಶ್ವಕ್ಕೆ ಪರಿಚಯಿಸಿ, ಅಹಿಂಸೆಯಿಂದ ಸ್ವಾತಂತ್ರ್ಯವನ್ನು ಗಳಿಸಬಹುದು ಎಂಬುದನ್ನು ಪ್ರಪಂಚಕ್ಕೆ ತೋರಿಸಿ ಕೊಟ್ಟವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. 

Union Minister Shobha Karandlaje Talks Over Lal Bahadur Shastri gvd
Author
First Published Oct 3, 2023, 4:45 AM IST

ಚಿಕ್ಕಮಗಳೂರು (ಅ.03): ಅಹಿಂಸೆಯನ್ನು ವಿಶ್ವಕ್ಕೆ ಪರಿಚಯಿಸಿ, ಅಹಿಂಸೆಯಿಂದ ಸ್ವಾತಂತ್ರ್ಯವನ್ನು ಗಳಿಸಬಹುದು ಎಂಬುದನ್ನು ಪ್ರಪಂಚಕ್ಕೆ ತೋರಿಸಿ ಕೊಟ್ಟವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ , ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. 

ಬ್ರಿಟೀಷರನ್ನು ಅಹಿಂಸೆ ಹೋರಾಟದಿಂದ ಮಾತ್ರ ದೇಶದಿಂದ ಓಡಿಸ ಬಹುದು ಎಂಬ ಪರಿಕಲ್ಪನೆಯನ್ನು ರಾಷ್ಟ್ರದ ಜನತೆಗೆ ಗಾಂಧೀಜಿ ಕೊಟ್ಟರು, ಅದನ್ನು ದೇಶದ ಜನತೆ ಒಪ್ಪಿ ಅವರನ್ನು ಹಿಂಬಾಲಿಸಿದರು ಹಾಗಾಗಿ ಈ ದೇಶಕ್ಕೆ ಸ್ವಾತಂತ್ರ್ಯ ದೊರಕಿತು ಎಂದರು. ರಾಷ್ಟ್ರಪಿತನ ಆದರ್ಶ, ಸಂದೇಶದೊಂದಿಗೆ ಅವರು ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರೂ ಸಾಗಬೇಕು. ಅವರ ಬದುಕನ್ನು ಅಧ್ಯಯನ ಮಾಡಿ ಅದರಂತೆ ನಾವು ನಡೆದರೆ ಸಾಕು ಭಾರತ ಮತ್ತೊಮ್ಮೆ ಉತ್ತುಂಗಕ್ಕೇರುತ್ತದೆ ಎಂದರು. ಒಬ್ಬ ಪ್ರಧಾನಿ ಎಷ್ಟು ಸರಳವಾಗಿ ಬದುಕಬಹುದು ಎಂಬುದನ್ನು ತೋರಿಸಿಕೊಟ್ಟವರು ಲಾಲ್ ಬಹದ್ದೂರ್ ಶಾಸ್ತ್ರಿ. 

Siddaramaiah ಮೊದಲ ಅವಧಿಯಲ್ಲಿ ಟಿಪ್ಪು, ಇವಾಗ ಔರಂಗಜೇಬ್‌ನನ್ನು ಮರೆಸಲಾಗುತ್ತಿದೆ: ಪ್ರಲ್ಹಾದ್‌ ಜೋಶಿ

ಜೈ ಜವಾನ್ ಜೈ ಕಿಸಾನ್ ಘೋಷಣೆ ಮೂಲಕ ದೇಶದ ಜನತೆಯಲ್ಲಿ ಹೊಸ ಚೈತನ್ಯ ಮೂಡಿಸಿ ದೇಶಪ್ರೇಮಕ್ಕೆ ಇನ್ನೊಂದು ಹೆಸರಾಗಿದ್ದರು ಶಾಸ್ತ್ರಿ ಎಂದರು. ಗಾಂಧಿ ಜಯಂತಿಗೆ ಸ್ವದೇಶಿ ಅಭಿಯಾನ ಆಯೋಜಿಸಲಾಗಿದ್ದು ಪ್ರತಿಯೊಬ್ಬರೂ ಕನಿಷ್ಠ ಗಾಂಧಿ ಜಯಂತಿ ದಿನವಾದರೂ ಖಾದಿ ಭಂಡಾರದಲ್ಲಿ ಬಟ್ಟೆ ಖರೀದಿಸಿದರೆ 140 ಕೋಟಿ ಬಟ್ಟೆ ವ್ಯಾಪಾರವಾಗಿ ಅದರಿಂದ ನೇಕಾರರಿಗೆ ಉದ್ಯೋಗ ದೊರೆಯುತ್ತದೆ ಎಂದು ಮನವಿ ಮಾಡಿದರು. ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಅಹಿಂಸಾ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪ್ರಪಂಚದಲ್ಲೇ ಮೊದಲ ವ್ಯಕ್ತಿ ಮಹಾತ್ಮ ಗಾಂಧೀಜಿ. ಅವರ ಬದುಕೇ ಒಂದು ಸಂದೇಶ. ಇಡೀ ಪ್ರಪಂಚಕ್ಕೇ ಮಾದರಿಯಾಗಿ ಬದುಕಿ ದವರು ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಸಾಮರಸ್ಯದ ಬದುಕು ಸಾರಿಧವರು ಮಹಾತ್ಮ ಗಾಂಧೀಜಿ ಅವರ ಆದರ್ಶ, ತತ್ವ, ಸಿದ್ಧಾಂತ ಸಂದೇಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಮೂಲಕ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಧಾನಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದವರು ಅವರ ಹೆಸರನ್ನು ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಸಲಹೆ ಮಾಡಿದರು. ಸುರೇಂದ್ರ ನಾಯಕ್ ಮತ್ತು ತಂಡದವರು ರಘುಪತಿ ರಾಘವ ರಾಜಾರಾಂ, ವೈಷ್ಣವ ಜನತೋ ಸೇರಿದಂತೆ ವಿವಿಧ ಭಕ್ತಿಗೀತೆಗಳನ್ನು ಹಾಡಿದರು. ಸರ್ವಧರ್ಮ ಪ್ರಾರ್ಥನೆ ನಾಗಶ್ರೀ ತ್ಯಾಗರಾಜ್ ಭಗವದ್ಗೀತೆ, ಮೌಲಿಮಹಮ್ಮದ್ ಇಬ್ರಾಹಿಂ ಕುರಾನ್, ಅಯ್ಯಪ್ಪನ್ ಬೈಬಲ್ ಪಠಣ ಮಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಹಾತ್ಮಗಾಂಧೀಜಿ 154ನೇ ಜಯಂತಿ ಅಂಗವಾಗಿ ಪದವಿ, ಸ್ನಾತಕೋತ್ತರ, ಪದವಿ ಪೂರ್ವ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವರಿಗೆ ಗಣ್ಯರು ಬಹುಮಾನ ವಿತರಿಸಿದರು.

ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಕರೇಗೌಡ, ಉಪ ವಿಭಾಗಾಧಿಕಾರಿ ಡಾ. ರಾಜೇಶ್, ನಗರಸಭೆ ಪೌರಾಯುಕ್ತ ಬಸವರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಮಂಜುಳ ಹುಲ್ಲಹಳ್ಳಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸೋಮಶೇಖರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

Follow Us:
Download App:
  • android
  • ios