ಕಾವೇರಿ ಜಲವಿವಾದ ಸಭೆಯಲ್ಲಿ ಭಾಗವಹಿಸಿದ ಸಚಿವ ರಾಜೀವ್ ಚಂದ್ರಶೇಖರ್
ಇಂದು ಕಾವೇರಿ ಜಲ ವಿವಾದದ ಸಭೆಯಲ್ಲಿ ಕೇಂದ್ರ ಸಚಿವರು ಹಾಗೂ ಸರ್ವಪಕ್ಷಗಳ ಸಭೆ ನಡೆಯಿತು. ಈ ವೇಳೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಸಂಸದ ಹಾಗೂ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಕೂಡ ಸಭೆಯಲ್ಲಿ ಭಾಗಿಯಾಗಿದ್ದರು.

ಬೆಂಗಳೂರು (ಸೆ.20): ದಿನದಿಂದ ದಿನಕ್ಕೆ ಕಾವೇರಿ ಜಲವಿವಾದ ಕರ್ನಾಟಕದ ಪಾಲಿಗೆ ಕಗ್ಗಂಟಾಗಿದೆ. ಬುಧವಾರ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ರಾಜ್ಯದ ಸಂಸದರು ಹಾಗೂ ಕೇಂದ್ರ ಸಚಿವರೊಂದಿಗೆ ಸಿದ್ಧರಾಮಯ್ಯ ಸಭೆ ನಡೆಸಿದ್ದಾರೆ. ಈ ವೇಳೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಸಂಸದ ಹಾಗೂ ಕೇಂದ್ರ ಕೌಶಲಾಭಿವೃದ್ಧಿ ಸಚಿವ ರಾಜೀವ್ ಚಂದ್ರಶೇಖರ್ ಭಾಗಿಯಾಗಿದ್ದರು. ಇದರ ಬಗ್ಗೆ ಸ್ವತಃ ರಾಜೀವ್ ಚಂದ್ರಶೇಖರ್ ಮಾಹಿತಿ ಹಂಚಿಕೊಂಡಿದ್ದಾರೆ. ಇಂದು ಕರ್ನಾಟಕ ಮುಖ್ಯಮಂತ್ರಿಯವರು ಕರೆದಿದ್ದ ಕಾವೇರಿ ನೀರಿನ ವಿವಾದದ ಸಭೆಗೆ, ನನ್ನ ಸಹೋದ್ಯೋಗಿಗಳೊಂದಿಗೆ ಭಾಗಿಯಾಗಿದ್ದೆ. ನನ್ನ ಆಕ್ಷೇಪಣೆಯ ನಂತರ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ರವರು, ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವ ಬದಲು, ಸರ್ವ ಪಕ್ಷಗಳೊಂದಿಗೆ ಸಮಾಲೋಚಿಸಲು ನಿರ್ಧರಿಸಿದ್ದಾರೆ ಎಂಬುದು ತಿಳಿಸಲು ಸಂತಸವೆನಿಸುತ್ತದೆ. ನಾನು ಮತ್ತು ಕರ್ನಾಟಕ ಬಿಜೆಪಿಯು, ಕಾಂಗ್ರೆಸ್-ಡಿಎಂಕೆ/ಯು.ಪಿ.ಎ-ಇಂಡಿ ಒಕ್ಕೂಟದ ಮೈತ್ರಿಯ ರಾಜಕೀಯ ಬಲಿಪೀಠದಲ್ಲಿ, ಕರ್ನಾಟಕದ ಹಿತಾಸಕ್ತಿಯನ್ನು ರಾಜಿ ಮಾಡಿಕೊಳ್ಳಲು ಎಂದಿಗೂ ಬಿಡುವುದಿಲ್ಲ ಎಂಬುದನ್ನು ಈ ಮೂಲಕ ಖಚಿತಪಡಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ಇದಕ್ಕಾಗಿ ಅವರು ಆಗಸ್ಟ್ 21 ರಂದು ನಡೆದಿದ್ದ ಸುದ್ದಿಗೋಷ್ಠಿಯ ಲಿಂಕ್ ಕೂಡ ಶೇರ್ ಮಾಡಿಕೊಂಡಿದ್ದರೆ. ಅದರಲ್ಲಿ ಮಾತನಾಡಿರುವ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ ಸರ್ಕಾರ ಒಂದೂವರೆ ಎರಡು ತಿಂಗಳಿನಿಂದ ಕರ್ನಾಟಕದಲ್ಲಿ ಅಧಿಕಾರದಲ್ಲಿದೆ. ಈ ಅವಧಿಯಲ್ಲಿ 50ಕ್ಕೂ ಅಧಿಕ ನನ್ನ ರೈತ ಸಹೋದರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದಾಜು 16 ಜಿಲ್ಲೆಗಳಲ್ಲಿ ಬರದಂಥ ಪರಿಸ್ಥಿತಿ ನಿರ್ಮಾಣವಾಗಿದೆ. 100ಕ್ಕೂ ಅಧಿಕ ತಾಲೂಕುಗಳಿಗೆ ಈ ಬಾರಿ ನಿರೀಕ್ಷಿತ ಮಟ್ಟದ ಮಳೆ ಕೂಡ ಆಗಿಲ್ಲ. ರಾಜ್ಯದಲ್ಲಿ ರೈತರ ಪರಿಸ್ಥಿತಿ ಬಹಳ ಸವಾಲಿನದ್ದಾಗಿದೆ. ಅದರ ಮೇಲೆ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಹಾಗೂ ವಿದ್ಯುತ್ ಕೊರತೆಯ ಪರಿಣಾಮವನ್ನು ರೈತರು ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದರು.
ಇದರ ನಡುವೆ, ಅದಂತೆ ರೈತರ ಈ ಎಲ್ಲಾ ಸಮಸ್ಯೆಗಳ ನಡುವೆಯೇ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೋರ್ಟ್‌ನ ಯಾವುದೇ ಸೂಚನೆಗಳೂ ಇಲ್ಲದೆ ಸರ್ವಪಕ್ಷಗಳ ಸಭೆಯೂ ಇಲ್ಲದೆ, 10 ಟಿಎಂಸಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವ ತೀರ್ಮಾನ ಮಾಡಿದ್ದಾರೆ. ಈ ವೇಳೆ ಒಂದು ಪ್ರಶ್ನೆಯಂತೂ ಉದ್ಭವವಾಗಲಿದೆ. ಅವರು ಈ ನಿರ್ಧಾರ ಮಾಡಲು ಕಾರಣವೇನು ಎನ್ನುವುದು. ಯಾಕೆಂದರೆ, ರಾಜ್ಯದಲ್ಲಿನ ರೈತರ ಪರಿಸ್ಥಿತಿಯೇ ಅತ್ಯಂತ ಕರುಣಾಜನಕವಾಗಿದೆ. ಅದು ಎಲ್ಲರಿಗೂ ಬರಿಗಣ್ಣಿನಲ್ಲಿಯೇ ಕಾಣುತ್ತಿದೆ. ಇದರ ನೇರ ಉತ್ತರ ಏನೆಂದರೆ, ಅವರು ತಮ್ಮ ಘಮಂಡಿಯಾ ಘಟ್‌ಬಂದನ್ ಅಥವಾ ಯುಪಿಎಯ ಅತ್ಯಂತ ಪ್ರಮುಖ ಪಕ್ಷವಾಗಿರುವ ಡಿಎಂಕೆಯ ಒತ್ತಡದ ಕಾರಣದಿಂದಾಗಿ ಕಾವೇರಿ ನದಿ ನೀರನ್ನು ಯಾರಿಗೂ ಮಾಹಿತಿ ನೀಡದೇ ಬಿಡುಗಡೆ ಮಾಡಿದ್ದಾರೆ. ಇದು ಬಹಳ ಪ್ರಮುಖ ವಿಚಾರ ಏಕೆಂದರೆ, ಕರ್ನಾಟಕ ಕಾಂಗ್ರೆಸ್ ಸರ್ಕಾರ ಒಂದು ಕಡೆ ತನ್ನ ರಾಜಕೀಯ ಅಳಿವು ಉಳಿವಿನ ಹೋರಾಟದಲ್ಲಿದ್ದರೆ, ಇನ್ನೊಂದೆಡೆ ರಾಷ್ಟ್ರೀಯ ಮಟ್ಟದಲ್ಲಿ ತನ್ನ ಒಕ್ಕೂಟವನ್ನು ಗಟ್ಟಿಯಾಗಿ ಇಡುವಂಥ ಒತ್ತಡವನ್ನೂ ಎದುರಿಸುತ್ತಿದೆ. ಹಾಗಾಗಿ ಡಿಕೆಶಿ ಈ ನಿರ್ಧಾರ ನೀಡಿದ್ದಾರೆ ಎಂದಿದ್ದರು.
ಮೋದಿ ವಿಶ್ವಮಾನ್ಯ ನಾಯಕ, ದೇಶದಲ್ಲಿ ಹೊಸ ಮನ್ವಂತರ ತಂದ ಲೀಡರ್: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ಕಾಂಗ್ರೆಸ್ ಹಾಗೂ ಡಿಎಂಕೆ ನಡುವೆ ಇಂಥ ಸಂಬಂಧ ಮೊದಲಿನಿಂದಲೂ ಇದೆ. ಕಾಂಗ್ರೆಸ್ ಪಕ್ಷದ ಮೇಲೆ ಡಿಎಂಕೆ ಮಾಡಿದಷ್ಟು ಪ್ರಭಾವ ಮತ್ಯಾವ ಪಕ್ಷ ಕೂಡ ಮಾಡಿಲ್ಲ. ಇನ್ನು ಕಾಂಗ್ರೆಸ್ ಕೂಡ ಡಿಎಂಕೆ ಪಕ್ಷದ ಒತ್ತಡಕ್ಕೆ ಮಣಿದಿರುವ ಸಾಕಷ್ಟು ಟ್ರ್ಯಾಕ್ ರೆಕಾರ್ಡ್‌ಗಳು ನಮ್ಮ ನಡುವೆ ಇದೆ. ಇದನ್ನು ಇತಿಹಾಸವನ್ನೂ ಕೆದಕಿ ಬೇಕಾದರೂ ನೋಡಬಹುದು. 2ಜಿ ಸ್ಕ್ಯಾಮ್ ಸಂದರ್ಭದಲ್ಲೂ ಇದೆ ರೀತಿ ಡಿಎಂಕೆ ಒತ್ತಡ ಹೇರಿತ್ತು. ಇಂದು ಕರ್ನಾಟಕದ ರೈತರು ಕಾಂಗ್ರೆಸ್‌ನ ರಾಜಕೀಯಕ್ಕೆ ಬಲಿಯಾಗುತ್ತಿದ್ದಾರೆ ಎಂದು ಹೇಳಿದ್ದರು.
ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲೂ ದೇಸಿ ಜಿಪಿಎಸ್ ನಾವಿಕ್ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಪ್ಲ್ಯಾನ್!