ಕಾಂಗ್ರೆಸ್ ಬಂಡೀಪುರ ಉಳಿಸಿ ಅಭಿಯಾನದ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಕಾಡಿನ ವನ್ಯಜೀವಿಗಳು ಸುರಕ್ಷಿತವಾಗಿವೆ: ಸಚಿವ ಪ್ರಲ್ಹಾದ್ ಜೋಶಿ
ಬೆಂಗಳೂರು(ಏ.10): ಭ್ರಷ್ಟ ಆಡಳಿತದ ಇತಿಹಾಸ ಹೊಂದಿರುವ ಕಾಂಗ್ರೆಸ್‌ಗೆ ಎಲ್ಲದರಲ್ಲೂ ಮಾರಾಟವೇ ಕಾಣುವುದು ಸಹಜ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ. ಪ್ರಧಾನಿ ಮೋದಿ ಅವರ ಬಂಡೀಪುರ ಸಫಾರಿ ಬಗ್ಗೆ ಸಿದ್ದರಾಮಯ್ಯ ಅವರಿಗೆ ಟ್ವೀಟರ್‌ನಲ್ಲಿಯೇ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ. ಎಲ್ಲಿ ಹಿಡಿದು ಮಾರಿಬಿಡ್ತಾರೋ ಅಂತಾ ಹುಲಿಗಳು ಯಾವ ಗುಹೆಯೊಳಗೆ ಅಡಗಿ ಕುಳಿತಿದೆಯೋ ಎಂದು ಸಿದ್ದರಾಮಯ್ಯ ಮೋದಿ ಅವರ ಬಂಡೀಪುರ ಪ್ರವಾಸದ ಬಗ್ಗೆ ಟೀಕಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಲ್ಹಾದ್ ಜೋಶಿ, ಭ್ರಷ್ಟಾಚಾರಿಗಳು, ರಾಷ್ಟ್ರ ವಿರೋಧಿಗಳು ಗುಹೆಯೊಳಗೆ ಅಡಗಿ ಕುಳಿತು ಕೊಳ್ಳುವ ಸಮಯ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದಲ್ಲಿ ನಾಡು - ನಾಡಿನ ಜನ, ಕಾಡು- ಕಾಡಿನ ವನ್ಯಜೀವಿ ಎಲ್ಲರೂ ಸುರಕ್ಷಿತವಾಗಿದ್ದಾರೆ. ಹೀಗಾಗಿ ಬಂಡೀಪುರದಲ್ಲಿ ಹುಲಿಗಳು ಗುಹೆಯೊಳಗೆ ಅಡಿಗಿ ಕುಳಿತುಕೊಳ್ಳುವ ಪರಿಸ್ಥಿತಿಯಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಕುಟುಂಬ ರಾಜಕಾರಣ..ಮಕ್ಕಳಿಗಾಗಿ ಹೇಗೆ ನಡೀತಿದೆ ಗೊತ್ತಾ ಸೀಕ್ರೆಟ್ ಪಾಲಿಟಿಕ್ಸ್..!
ಇನ್ನು ಕೆಲವೇ ದಿನಗಳಲ್ಲಿ ಬಂಡಿಪುರ ಉಳಿಸಿ ಎಂಬ ಅಭಿಯಾನವನ್ನು ಕನ್ನಡಿಗರು ಶುರು ಮಾಡುವಂತೆ ಆಗದಿರಲಿ ಎಂಬ ಸಿದ್ದರಾಮಯ್ಯ ಟ್ವೀಟ್ ಗೆ ಲೇವಡಿ ಮಾಡಿರುವ ಪ್ರಲ್ಹಾದ್ ಜೋಶಿ, ಕಾಂಗ್ರೆಸ್ ಬಂಡೀಪುರ ಉಳಿಸಿ ಅಭಿಯಾನದ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಕಾಡಿನ ವನ್ಯಜೀವಿಗಳು ಸುರಕ್ಷಿತವಾಗಿವೆ ಅಂತ ಹೇಳಿದ್ದಾರೆ.
ಸಿದ್ದರಾಮಯ್ಯ ಸೇವ್ ಬಂಡೀಪುರದ ಬದಲು ಸೇವ್ ಕಾಂಗ್ರೆಸ್ ಅಭಿಯಾನದ ಬಗ್ಗೆ ಮೊದಲು ಯೋಚಿಸಲಿ ಎಂದು ಪ್ರಲ್ಹಾದ್ ಜೋಶಿ ಸಲಹೆ ನೀಡಿದ್ದಾರೆ. ದೇಶದಾದ್ಯಂತ ಕಾಂಗ್ರೆಸ್ ಜನರಿಂದ ತಿರಸ್ಕೃತ ಪಕ್ಷವಾಗಿದೆ. ಕಾಂಗ್ರೆಸ್ ನ ಪರಿಸ್ಥಿತಿ ನೋಡಿ ಪಕ್ಷದಿಂದ ಸಾಲು ಸಾಲು ನಾಯಕರು ಹೊರಗೆ ಹೆಜ್ಜೆ ಹಾಕಿದ್ದಾರೆ. ಇಂಥಹ ಪರಿಸ್ಥಿತಿಯಲ್ಲಿ ಸೇವ್ ಕಾಂಗ್ರೆಸ್ ಬಗ್ಗೆ ಸಿದ್ದರಾಮಯ್ಯ ಅವರು ಯೋಚಿಸಬೇಕಾಗಿದೆ ಎಂದು ಜೋಶಿ ತಿರುಗೇಟು ನೀಡಿದ್ದಾರೆ.
