ಹೊಸ ಕಾಯ್ದೆಗಳ ಮೂಲಕ ವಿಚಾರಗಳನ್ನು ಡೈವರ್ಟ್ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ ಮತ್ತು ಇಂದಿರಾ ಗಾಂಧಿಯವರನ್ನು ಹಿಟ್ಲರ್‌ಗೆ ಹೋಲಿಸಿದ್ದಕ್ಕೆ ಕೇಸ್ ಹಾಕುವುದಾಗಿ ಹೇಳುತ್ತಿರುವುದು ಸರ್ವಾಧಿಕಾರಿ ಧೋರಣೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಬೆಂಗಳೂರು (ಜೂ.27): ವಿಚಾರಗಳನ್ನ ಡೈವರ್ಟ್ ಮಾಡಲು ಸರ್ಕಾರ ಬೇರೆ ಬೇರೆ ಪ್ರಯೋಗ ಮಾಡ್ತಿದೆ. ಹೊಸ ಕಾಯ್ದೆಗಳನ್ನು ತರುವ ಮೂಲಕ ಪ್ರಯತ್ನಿಸುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವರು, ಕೋಮುಗಲಭೆ ಕೆರಳಿಸುವ ಭಾಷಣಗಳಿಗೆ ಹೊಸ ಕಾಯ್ದೆ ತರುತ್ತೇವೆ ಅಂತಿದಾರೆ. ಆದರೆ ಈಗಾಗಲೇ ತಪ್ಪು ಭಾಷೆಯ ವಿರುದ್ಧ ಕ್ರಮ ಕೈಗೊಳ್ಳಲು ಈಗಾಗಲೇ ಕಾಯ್ದೆ ಇದೆ. ಹೊಸ ಕಾಯ್ದೆ ಯಾಕೆ ಬೇಕು? ಎಂದು ಪ್ರಶ್ನಿಸಿದರು.

ಇಂದಿರಾ ಗಾಂಧಿ-ಹಿಟ್ಲರ್ ವಿವಾದ:

ಇಂದಿರಾ ಗಾಂಧಿಯವರನ್ನು ಹಿಟ್ಲರ್ ಎಂದರೆ ಕೇಸ್ ಹಾಕುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ತುರ್ತು ಪರಿಸ್ಥಿತಿಯಲ್ಲಿ ಎಷ್ಟು ಜನರನ್ನು ಕೊಂದರು? ಎಷ್ಟು ಜನರನ್ನು ಜೈಲಿಗೆ ಹಾಕಿದರು? ಜೈಲಿನಲ್ಲಿ ಸತ್ತವರ ಸಂಖ್ಯೆ ಎಷ್ಟು? ಇಂಡಿ ಅಲೈಯನ್ಸ್‌ನ ನಾಯಕರನ್ನೂ ಆಗ ಬಂಧಿಸಲಾಗಿತ್ತು. ಇದು ಸರ್ವಾಧಿಕಾರಿ ಧೋರಣೆಯಲ್ಲವೇ? ಹಿಟ್ಲರ್ ಎಂದರೆ ಕೇಸ್ ಹಾಕುವುದಾದರೆ, ನಾನು ಇಂದಿರಾ ಗಾಂಧಿ ಹಿಟ್ಲರ್ ಎಂದೇ ಹೇಳುತ್ತೇನೆ! ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡಲು ಸರ್ಕಾರ ಹೊರಟಿದೆ ಎಂದು ಆರೋಪಿಸಿದ ಅವರು, ಚಕ್ರವರ್ತಿ ಸೂಲಿಬೆಲೆ ಅವರ ಭಾಷಣಕ್ಕೆ ತಡೆಯೊಡ್ಡಿರುವುದು ಸರ್ಕಾರದ ಹತಾಶೆಯನ್ನು ತೋರಿಸುತ್ತದೆ ಎಂದರು.

ರಾಜಣ್ಣ ಸೆಪ್ಟಂಬರ್ ಕ್ರಾಂತಿಗೆ ಪ್ರತಿಕ್ರಿಯೆ:

ಸೆಪ್ಟೆಂಬರ್‌ನ ಬಳಿಕ ಕ್ರಾಂತಿಯಾಗಲಿದೆ ಎಂಬ ಸಚಿವ ರಾಜಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಕಾಂಗ್ರೆಸ್ ಸರ್ಕಾರದಲ್ಲಿ ಒಬ್ಬೊಬ್ಬ ನಾಯಕರು ಮನಸ್ಸಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಇದು ಸರ್ಕಾರದ ಅಸ್ಥಿರತೆಯನ್ನು ತೋರಿಸುತ್ತದೆ ಎಂದರು.

ಇನ್ನು ಬಿಜೆಪಿ ನಾಯಕರ ದೆಹಲಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅಶೋಕ್ ಅವರು ದೆಹಲಿಯಲ್ಲಿ ಭೇಟಿಯಾಗಿದ್ದರು. ಅವರು ಶಿಕ್ಷಣ ಸಂಸ್ಥೆಯ ಲೈಸೆನ್ಸ್‌ಗಾಗಿ ಬಂದಿದ್ದರು. ಎಲ್ಲರೂ ಅಧ್ಯಕ್ಷರ ಬದಲಾವಣೆಗಾಗಿ ದೆಹಲಿಗೆ ಬಂದಿದ್ದಾರೆ ಎಂದು ಭಾವಿಸುವುದು ತಪ್ಪು. ನಮ್ಮ ಪಕ್ಷದ ನಾಯಕತ್ವ ದೃಢವಾಗಿದೆ. ಮೋದಿ ಮತ್ತು ಜೆ.ಪಿ.ನಡ್ಡಾ ನೇತೃತ್ವದಲ್ಲಿ ಸೂಕ್ತ ಸಮಯದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಪಕ್ಷದಲ್ಲಿ ಆಕಾಂಕ್ಷಿಗಳು ಹೆಚ್ಚಿರುವುದು ಸಹಜ. ಸಂಘಟನಾ ಪರ್ವ ದೇಶಾದ್ಯಂತ ನಡೆಯುತ್ತಿದ್ದು, ಚುನಾವಣೆ ಪ್ರಕ್ರಿಯೆಯ ಮೂಲಕ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದರು.

ಕೈನಲ್ಲಿ ಸ್ವಪಕ್ಷೀಯ ಅಸಮಾಧಾನ: ಸರ್ಕಾರದ ವಿರುದ್ಧ ಸ್ವಪಕ್ಷೀಯ ಶಾಸಕರಾದ ಬಿಆರ್ ಪಾಟೀಲ್, ಬಸವರಾಜ ರಾಯರೆಡ್ಡಿ ಮತ್ತು ಪರಮೇಶ್ವರ್ ಅವರಿಂದಲೂ ಟೀಕೆಗಳು ಕೇಳಿಬಂದಿವೆ. ಸರ್ಕಾರದ ವ್ಯವಸ್ಥೆಯ ಬಗ್ಗೆ ಶಾಸಕರೇ ಭಾಷಣ ಮಾಡಿ, ತಮಾಷೆಗೆ ಹೇಳಿದೆವು ಎಂದು ಸಮಜಾಯಿಷಿ ನೀಡುತ್ತಾರೆ. ಮಾಧ್ಯಮಗಳು ತೋರಿಸಿದಾಗ, ‘ನಾನು ಹೇಳಿಲ್ಲ’ ಎಂದು ತಿರುಚುತ್ತಾರೆ ಎಂದು ಜೋಶಿ ಆರೋಪಿಸಿದ್ದಾರೆ. "ಪರಮೇಶ್ವರ್ ಅವರು ‘ಸಿದ್ದರಾಮಯ್ಯ ಜತೆ ದುಡ್ಡಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ಈಗ ಹೇಳಿಕೆ ತಿರುಚಿದ್ದಾರೆ. 136 ಶಾಸಕರಿದ್ದರೂ ಸರ್ಕಾರಕ್ಕೆ ಅಸ್ಥಿರತೆ ಕಾಡುತ್ತಿದೆ. ಆಡಳಿತದ ಮೇಲೆ ಹಿಡಿತ ತಪ್ಪಿದೆ. ಇದು ರಾಜ್ಯದ ದುರ್ದೈವ ಎಂದು ಅವರು ವಿಷಾದಿಸಿದರು.