ಕೇಂದ್ರದಿಂದ ರಾಜ್ಯಕ್ಕೆ 697 ಕೋಟಿ ರೂ. ಬರ ಪರಿಹಾರ ಕೊಟ್ಟಿದ್ದೇವೆ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಕೇಂದ್ರ ಸರ್ಕಾರದಿಂದ ಈಗಾಗಲೇ 697 ಕೋಟಿ ರೂ. ಬರ ಪರಿಹಾರವನ್ನು ರಾಜ್ಯಕ್ಕೆ ಕೊಡಲಾಗಿದೆ. ಕಾಂಗ್ರೆಸ್ ಸರ್ಕಾರದಿಂದ ಸುಳ್ಳು ಹೇಳಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಬೆಂಗಳೂರು (ಏ.06): ಇಡೀ ದೇಶದಲ್ಲಿ ಒಟ್ಟು 12 ರಾಜ್ಯಗಳಲ್ಲಿ ಪ್ರಕೃತಿ ವಿಕೋಪ ಉಂಟಾಗಿದೆ. ಅದರಲ್ಲಿ ಕರ್ನಾಟಕದಲ್ಲಿಯೂ ಬರ ಕಾಣಿಸಿಕೊಂಡಿದ್ದು, ಅದಕ್ಕೆ 697 ಕೋಟಿ ರೂ. ಕೇಂದ್ರ ಸರ್ಕಾರದ ಪಾಲನ್ನು ಬಿಡುಗಡೆ ಮಾಡಲಾಗಿದೆ. ಎಸ್‌ಡಿಆರ್‌ಎಫ್ ಅಡಿ 929 ಕೋಟಿ ರೂ. ಅನುದಾನವಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ಮಾಧ್ಯಮಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ದೇಶದಲ್ಲಿ 12 ರಾಜ್ಯಗಳಲ್ಲಿ ನೈಸರ್ಗಿಕ ವಿಕೋಪಗಳಾಗಿವೆ. ಕರ್ನಾಟಕದ ಎಸ್‌ಡಿಆರ್‌ಎಫ್ ಅಡಿ 929.60 ಅನುದಾನ ಇದೆ. ಇದರಲ್ಲಿ 697 ಕೋಟಿ ಇದರಲ್ಲಿ ಕೇಂದ್ರ ಪಾಲು ಕೊಡಲಾಗಿದೆ. ಈ ಹಣ ಮುಂಚಿತವಾಗಿಯೇ ಬಿಡುಗಡೆ ಮಾಡಲಾಗಿದೆ. ಬರಕ್ಕೆ ಕೇಂದ್ರ ಹಣ ಕೊಟ್ಟಿಲ್ಲ ಅಂತಾರೆ, ಆದ್ರೆ ಈಗಾಗಲೇ ಎಸ್‌ಡಿಆರ್‌ಎಫ್‌ನಲ್ಲಿ ಹಣ ಇದೆ ಎಂದು ತಿಳಿಸಿದರು.
ಛತ್ತೀಸ್‌ಘಡದಿಂದ ರಾಜ್ಯಕ್ಕೆ ಬೀಸಿದ ಉಷ್ಣ ಅಲೆಗಳು; 18 ಮುಂಜಾಗ್ರತೆ ಕ್ರಮಗಳ ಪಟ್ಟಿ ಬಿಡುಗಡೆ ಮಾಡಿದ ಹವಾಮಾನ ಇಲಾಖೆ
ಇನ್ನು ರಾಜ್ಯ ಸರ್ಕಾರದಿಂದ ತಡವಾಗಿ ಸಲ್ಲಿಕೆ ಮಾಡಿರುವ ಈಗಿನ ಪ್ರಸ್ತಾವನೆಗೂ ಪರಿಹಾರ ಬರಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬರ ಪರಿಹಾರ ವಿಳಂಬ ಮಾಡಲ್ಲ. ಈಗಾಗಲೇ ತೆರಿಗೆ ಹಂಚಿಕೆ ಕಳೆದ ಮಾರ್ಚ್ ವರೆಗೆ ಪೂರ್ಣ ಕೊಡಲಾಗಿದೆ. ನಾಲ್ಕು ಪಟ್ಟು ಹೆಚ್ಚು ಕೊಡಲಾಗಿದೆ. 15ನೇ ಹಣಕಾಸು ಆಯೋಗ ತನ್ನ ಮಧ್ಯಂತರ ವರದಿಯಲ್ಲಿ 5,495 ಕೋಟಿ ರೂ. ವಿಶೇಷ ಅನುದಾನ ಕೊಡಬೇಕು ಅಂತ ಶಿಫಾರಸ್ಸು ಮಾಡಿದ್ದು ಹೌದು. ಆದರೆ, ಅಂತಿಮ ವರದಿಯಲ್ಲಿ ಆ ಶಿಫಾರಸು ಇರಲಿಲ್ಲ. ಹಾಗಾಗಿ ಆ ವಿಶೇಷ ಅನುದಾನ ಕರ್ನಾಟಕಕ್ಕೆ ಕೊಡುವ ಪ್ರಶ್ನೆಯೇ ಬರಲ್ಲ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಮತ್ತೊಂದು ಕಡೆಗೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರವು 6,000 ಸಾವಿರ ಕೋಟಿ ರೂ. ವಿಶೇಷ ಅನುದಾನ ಕೊಡಬೇಕು ಅಂತಾರೆ. ಆದರೆ, ಅದು ಸುಳ್ಳು. ಹಣಕಾಸು ಆಯೋಗ ಹೇಳದೇ ಹೋದರೂ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ 8,035.09 ಕೋಟಿ ಬಡ್ಡಿರಹಿತ ಸಾಲ ಕೊಡಲಾಗಿದೆ. ಇದನ್ನ ಕಾಂಗ್ರೆಸ್‌ನವರು ಎಲ್ಲಿಯೂ ಯಾಕೆ ಮಾಡನಾಡುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮೂರು ತಿಂಗಳು ತಡವಾಗಿ ಬರ ಪರಿಹಾರಕ್ಕೆ ಅರ್ಜಿ ಸಲ್ಲಿಕೆ: ಬರ ಪರಿಹಾರಕ್ಕೆ ಅರ್ಜಿ ಸಲ್ಲಿಕೆ ಕುರಿತು ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್ ಅವರು, ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಅಮಿತ್ ಶಾ ಅವರು ಬೆಂಗಳೂರಿಗೆ ಬಂದಾಗ ಕಾಂಗ್ರೆಸ್ ನವರು ಅನೇಕ ಪ್ರಶ್ನೆಗಳನ್ನು ಕೇಳಿದ್ದರು. ಅಮಿತ್ ಶಾ ಅವರು ರಾಜ್ಯ ಸರ್ಕಾರ ಬರ ನಿರ್ವಹಣೆ ಸರಿಯಾಗಿ ಮಾಡಿಲ್ಲ ಎಂದು ಹೇಳಿದ್ದರು. ಇದಕ್ಕೆ ಮುಖ್ಯಮಂತ್ರಿ ಸವಾಲು ಹಾಕಿದ್ದಾರೆ. ಕನ್ನಡ ಇಂಗ್ಲೀಷ್ ಮುಂತಾದ ಪತ್ರಿಕೆಗಳಲ್ಲಿ ರಾಜ್ಯದ ಬರ ವಿಚಾರ ಬಂದಿದೆ. ಬರ ಬಂದು 3 ತಿಂಗಳ ನಂತರ ನೀವು ಬರಪಿಡಿತ ರಾಜ್ಯ ಅಂತಾ ಘೋಷಣೆ ಮಾಡಿದ್ದೀರಾ. ಕಾಂಗ್ರೆಸ್ ಕಾಮಾಲೆ ಕಣ್ಣನ್ನು ಮಾದ್ಯಮಗಳು ತೆರೆಸಿವೆ ಎಂದು ಹೇಳಿದರು.
ಪ್ರಚಾರದಲ್ಲಿ ಮೋದಿ ಫೋಟೋ ಬಳಕೆಗೆ ಕೋರ್ಟ್ ಮೊರೆ ಹೋದ ಈಶ್ವರಪ್ಪ, ಬಳಸುವ ಹಕ್ಕಿಲ್ಲ ಎಂದ ಅಶೋಕ್
ಮುಂದುವರೆದು, ಕಾಂಗ್ರೆಸ್ ಗೆ ಮಾನ ಮರ್ಯಾದೆ ಇದ್ದಿದ್ರೆ, ಬರ ಘೋಷಣೆ ಮಾಡಬೇಕಿತ್ತು. ಜುಲೈನಲ್ಲೇ ಘೋಷಣೆ ಮಾಡಿದ್ರೆ, ಕೇಂದ್ರ ಸರ್ಕಾರದ ತಂಡ ಬಂದು ಸಮೀಕ್ಷೆ ಮಾಡ್ತಾ ಇತ್ತು. ನೀವು ತಡವಾಗು ಘೋಷಣೆ ಮಾಡಿ, ಕೇಂದ್ರದ ಕಡೆ ಯಾಕೆ ಕೈ ತೋರಿಸ್ತೀರಾ.? ಕಾಂಗ್ರೆಸ್ ಲೋಕಸಭೆಯಲ್ಲಿ ಸತ್ತು ಹೋಗಿದೆಯಾ.? ನಿಮ್ಮ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಯಾಕೆ ಲೋಕಸಭೆಯಲ್ಲಿ ಪ್ರಶ್ನೆ ಮಾಡಲಿಲ್ಲ.? ಎಂದು ವಿಪಕ್ಷ ನಾಯಕ ಆರ್. ಅಶೋಕ್ ರಾಜಗ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.