ಬೆಂಗಳೂರು (ಅ.17):  ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಪರಿಹಾರದ ಕುರಿತು ಕೇಂದ್ರಕ್ಕೆ ರಾಜ್ಯವು ಮನವಿ ಮಾಡಿದ್ದ ಆಯ್ಕೆ-1ರಡಿಗೆ ಅನುಮತಿ ನೀಡಿದ್ದು, ವಿಶೇಷ ಗವಾಕ್ಷಿ ಮೂಲಕ ಸಾಲ ಪಡೆಯಲು ಅನುವು ಮಾಡಿಕೊಟ್ಟಿದೆ ಎಂದು ಜಿಎಸ್‌ಟಿ ಪರಿಷತ್ತಿನ ಸದಸ್ಯರೂ ಆಗಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕೋವಿಡ್‌ ನಿರ್ವಹಣೆ ಮತ್ತು ಆರ್ಥಿಕತೆ ಬೆಳವಣಿಗೆಗಾಗಿ ಜಿಎಸ್‌ಟಿ ಪರಿಹಾರವನ್ನು ಸಂಪೂರ್ಣವಾಗಿ ಪಡೆಯಲು ಆಯ್ಕೆ-1ರ ಅಡಿಯಲ್ಲಿ ಕೇಂದ್ರದಿಂದ ಹಣಕಾಸು ನೆರವು ಪಡೆಯಲು ತೀರ್ಮಾನಿಸಲಾಗಿದೆ. ಆಯ್ಕೆ ಒಂದರಲ್ಲಿ ಅಸಲು ಹಾಗೂ ಬಡ್ಡಿ ಮರುಪಾವತಿ ಇಲ್ಲದೆ ಸೆಸ್‌ ಮುಖಾಂತರ ತುಂಬಿಕೊಡುತ್ತದೆ. ಇದರಿಂದ ರಾಜ್ಯಕ್ಕೆ ಯಾವುದೇ ರೀತಿಯ ಆರ್ಥಿಕ ಭಾರವಾಗುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೋದಿ ಬಿಡುಗಡೆ ಮಾಡಿದ 17 ಸುಪರ್ ತಳಿಗಳು, ಏನಿದರ ವಿಶೇಷ?

ರಾಜ್ಯವು 2020-21ನೇ ಸಾಲಿನಲ್ಲಿ 12,407 ಕೋಟಿ ರು.ವರೆಗೆ ಸಾಲ ಪಡೆಯಲು ಅರ್ಹವಾಗಿರುತ್ತದೆ. ಭವಿಷ್ಯದಲ್ಲಿ ಸೆಸ್‌ ಆದಾಯದಿಂದ ಪೂರ್ತಿ ಅಸಲು ಮತ್ತು ಬಡ್ಡಿಯನ್ನು ಭರಿಸಲಾಗುವುದು. ಇದರಿಂದಾಗಿ ರಾಜ್ಯದ ಆಯವ್ಯಯ ಸಂಪನ್ಮೂಲಗಳಿಂದ ಅಸಲು ಮತ್ತು ಬಡ್ಡಿಯನ್ನು ಪಾವತಿಸುವ ಅವಶ್ಯಕತೆ ಇರುವುದಿಲ್ಲ. ರಾಜ್ಯದ ಪಾಲಿನ ಸಂಪೂರ್ಣ ಜಿಎಸ್‌ಟಿ ಪರಿಹಾರವನ್ನು ಪಾವತಿಸಲು ಮತ್ತು ಈ ಸಂಬಂಧದ ಎಲ್ಲಾ ಕಾನೂನಾತ್ಮಕ ಹೊಣೆಗಾರಿಕೆಗಳನ್ನು ನಿರ್ವಹಿಸುವುದಾಗಿ ಕೇಂದ್ರ ಒಪ್ಪಿದೆ.

ಬಾಕಿ ಪರಿಹಾರ ಸಂಬಂಧ ಪರಿಹಾರ ಸೆಸ್‌ ಅನ್ನು ವಿಧಿಸುವುದನ್ನು 2022ರ ಜುಲೈ ನಂತರವೂ ವಿಸ್ತರಿಸಲು ಜಿಎಸ್‌ಟಿ ಪರಿಷತ್‌ ಈಗಾಗಲೇ ನಿರ್ಧರಿಸಿದೆ. 2020-21ನೇ ಸಾಲಿನಲ್ಲಿ ರಾಜ್ಯಗಳಿಂದ ಅಥವಾ ರಾಜ್ಯದ ಪರವಾಗಿ ಪಡೆಯುವ ಸಾಲದ ಮೇಲಿನ ಬಡ್ಡಿಯನ್ನು ರಾಜ್ಯಗಳಿಗೆ ಕಾಲಾನುಕಾಲಕ್ಕೆ ನೀಡಲಾಗುವುದು. ಜಿಎಸ್‌ಟಿ ಪರಿಹಾರದ ಮೊತ್ತದಿಂದ ಕಡಿತಗೊಳಿಸಲಾಗುವುದು ಎಂದು ಭಾವಿಸಲಾಗಿದೆ. ಆದರೆ, ಈ ಮೊತ್ತವು ಬಡ್ಡಿಯ ದರದ ಮೇಲೆ ಅವಲಂಬಿತವಾಗಿರುತ್ತದೆ. ಸೆಸ್‌ ಸಂಗ್ರಹದಿಂದ ಪಡೆಯುವ ಸಂಪೂರ್ಣ ಪಾವತಿಯವರೆಗೂ ರಾಜ್ಯಗಳ ಜಿಎಸ್‌ಟಿ ಪರಿಹಾರದ ಹಕ್ಕು ಮುಂದುವರಿಯುತ್ತದೆ ಎಂದು ವಿವರಿಸಿದ್ದಾರೆ.