ಬೆಂಗಳೂರು/ನವದೆಹಲಿ(ಡಿ,23): ಬ್ರಿಟನ್‌ ದೇಶವನ್ನು ಕಂಗೆಡಿಸಿರುವ ‘ಹೈಸ್ಪೀಡ್‌ ಕೊರೋನಾ ವೈರಸ್‌’ ಇದೀಗ ಕರ್ನಾಟಕ ಸೇರಿದಂತೆ ಭಾರತದ ವಿವಿಧ ರಾಜ್ಯಗಳಿಗೂ ಆತಂಕ ಮೂಡಿಸಿದೆ. ಬೆಂಗಳೂರಿನ ತಾಯಿ-ಮಗಳು ಸೇರಿದಂತೆ ಬ್ರಿಟನ್‌ನಿಂದ ಇತ್ತೀಚೆಗೆ ಭಾರತಕ್ಕೆ ಆಗಮಿಸಿದ ವಿವಿಧ ರಾಜ್ಯಗಳ 22 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, ಚಿಂತೆಗೆ ಕಾರಣವಾಗಿದೆ. ಸಾಮಾನ್ಯ ಕೊರೋನಾ ವೈರಸ್‌ಗಿಂತ ಶೇ.70ರಷ್ಟುವೇಗವಾಗಿ ಹಬ್ಬಬಲ್ಲುದು ಎಂದೇ ವಿಶ್ಲೇಷಿಸಲಾಗಿರುವ ಬ್ರಿಟನ್‌ ಮಾದರಿಯ ವೈರಾಣು ಸೋಂಕು ಇವರಿಗೆ ತಗುಲಿದೆಯಾ ಎಂದು ಪತ್ತೆ ಹಚ್ಚಲು ಇವರನ್ನೆಲ್ಲ ಉನ್ನತ ಮಟ್ಟದ ಪರೀಕ್ಷೆಗೆ ಒಳಪಡಿಸಲಾಗಿದೆ.

ಇದೇ ವೇಳೆ, ಬ್ರಿಟನ್‌ ವಿಮಾನಗಳ ಆಗಮನ-ನಿರ್ಗಮನಕ್ಕೆ ಕೇಂದ್ರ ಸರ್ಕಾರ ಹೇರಿರುವ ಡಿ.31ರವರೆಗಿನ ನಿಷೇಧ ಮಂಗಳವಾರ ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ.

ಈ ನಡುವೆ, ಬ್ರಿಟನ್‌ನಲ್ಲಿ ಪತ್ತೆಯಾದ ಕೊರೋನಾದ ಹೊಸ ಮಾದರಿ ಭಾರತದಲ್ಲಿ ಈವರೆಗೂ ಪತ್ತೆಯಾಗಿಲ್ಲ. ಆದರೂ ಈ ಬಗ್ಗೆ ಮುನ್ನೆಚ್ಚರಿಕೆ ಅಗತ್ಯ. ಆದರೆ ಭಾರತೀಯರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್‌ ಭರವಸೆ ತುಂಬುವ ಯತ್ನ ಮಾಡಿದ್ದಾರೆ.

ತಾಯಿ-ಮಗಳು ಪಾಸಿಟಿವ್‌:

ಬೆಂಗಳೂರಿನ ವಸಂತಪುರದ ವಿಠಲ ನಗರ ವಾರ್ಡ್‌ನ ನಿವಾಸಿಯಾದ 35 ವರ್ಷದ ತಾಯಿ ಹಾಗೂ 6 ವರ್ಷದ ಮಗಳು ಡಿ.19ರಂದು ನಗರಕ್ಕೆ ಆಗಮಿಸಿದ್ದರು. ಸೋಂಕು ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಖಾಸಗಿ ಪ್ರಯೋಗಾಲಯದಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಗಾಗಿದ್ದು, ವರದಿ ಪಾಸಿಟಿವ್‌ ಬಂದಿದೆ.

ಈ ಕೊರೋನಾ ಸೋಂಕು ಮಹಾಮಾರಿ ಹೊಸ ರೂಪಾಂತರದಿಂದ ಉಂಟಾಗಿರುವುದೇ ಎಂಬುದನ್ನು ಪತ್ತೆ ಮಾಡಲು ತಾಯಿ-ಮಗಳ ಗಂಟಲ ದ್ರವವನ್ನು ನಿಮ್ಹಾನ್ಸ್‌ನ ವೈರಾಣು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸದ್ಯಕ್ಕೆ ತಾಯಿ ಮಗಳು ಮನೆಯಲ್ಲೇ ಕ್ವಾರಂಟೈನ್‌ ಆಗಿದ್ದು, ಅವರ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತಿದೆ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲೆಲ್ಲಿ ಪತ್ತೆ?:

ಏರ್‌ ಇಂಡಿಯಾ ವಿಮಾನದ ಮೂಲಕ ಸೋಮವಾರ ರಾತ್ರಿ ನವದೆಹಲಿಗೆ ಆಗಮಿಸಿದ ಪ್ರಯಾಣಿಕರ ಪೈಕಿ 5 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಆ ವಿಮಾನದಿಂದ ಇಳಿದು ಚೆನ್ನೈಗೆ ಪ್ರಯಾಣ ಬೆಳೆಸಿದ್ದ ಮತ್ತೊಬ್ಬ ಪ್ರಯಾಣಿಕರಿಗೆ ಚೆನ್ನೈನಲ್ಲಿ ಪರೀಕ್ಷೆ ನಡೆಸಿದಾಗ ಸೋಂಕಿರುವುದು ಪತ್ತೆಯಾಗಿದೆ. ಬ್ರಿಟನ್‌ನಿಂದ ಅಮೃತಸರಕ್ಕೆ ಆಗಮಿಸಿದ ಏರ್‌ ಇಂಡಿಯಾ ವಿಮಾನದ ಪ್ರಯಾಣಿಕರ ಪೈಕಿ 7 ಪ್ರಯಾಣಿಕರು, ಓರ್ವ ಸಿಬ್ಬಂದಿಯಲ್ಲಿ ಕೊರೋನಾ ದೃಢಪಟ್ಟಿದೆ.

ಅಹಮದಾಬಾದ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಏರ್‌ ಇಂಡಿಯಾ ವಿಮಾನದಲ್ಲಿನ ಪ್ರಯಾಣಿಕರ ಪೈಕಿ ಬ್ರಿಟಿಷ್‌ ಪ್ರಜೆ ಸೇರಿ ನಾಲ್ವರು ಪ್ರಯಾಣಿಕರಲ್ಲಿ ಸೋಂಕು ಪತ್ತೆಯಾಗಿದೆ. ಕರ್ನಾಟಕದಲ್ಲಿ 2, ಕೋಲ್ಕತಾದಲ್ಲಿ 2 ಸೋಂಕಿನ ಪ್ರಕರಣಗಳು ವರದಿಯಾಗಿವೆ. ಈ ಪ್ರಯಾಣಿಕರು ಕೂಡ ಬ್ರಿಟನ್‌ನಿಂದ ಬಂದವರೇ ಆಗಿದ್ದಾರೆ.

ಹೆದರಿಕೆ ಬೇಕಿಲ್ಲ, ಮಾರಣಾಂತಿಕವಲ್ಲ

ಹೊಸ ಪ್ರಬೇಧದ ವೈರಸ್‌ನಿಂದ ಸೋಂಕು ತೀವ್ರವಾಗಿ ಹರಡುತ್ತಿದೆ, ಆದರೆ, ಮಾರಣಾಂತಿಕವಾಗಿಲ್ಲ. ಹೊಸ ವೈರಸ್‌ ಲಕ್ಷಣ ಕೋವಿಡ್‌-19 ಇದ್ದಂತೆಯೇ ಇರುತ್ತದೆ. ಹರಡುವಿಕೆ ವೇಗ ಹೆಚ್ಚಾಗಿರುವುದರಿಂದ ಎಚ್ಚರಿಕೆ ತೆಗೆದುಕೊಳ್ಳುವುದು ಅಗತ್ಯ.

ಡಾ| ಸಿ.ಎನ್‌. ಮಂಜುನಾಥ್‌, ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ