ಕರ್ನಾಟಕದಲ್ಲಿ ಹಿಂಗಾರು ಮಳೆಯ ಅಬ್ಬರಕ್ಕೆ ಮತ್ತೆರಡು ಬಲಿ!
ಬೆಂಗಳೂರಿನಲ್ಲಿ ಮಂಗಳವಾರ ಕೆಲಗಂಟೆಗಳ ಕಾಲ ಸುರಿದ ಮಳೆಗೆ ಯಲಹಂಕ ಪ್ರದೇಶದ ಹಲವು ಬಡಾವಣೆಗಳಿಗೆ ನೀರು ನುಗ್ಗಿ ಅಕ್ಷರಶಃ ದ್ವೀಪಗಳಂತೆ ಮಾರ್ಪಟ್ಟು ಆತಂಕ ಸೃಷ್ಟಿಯಾಗಿತ್ತು. ಇದರಿಂದ ದೋಣಿ ಬಳಸಿ ಈ ಭಾಗದಲ್ಲಿ ಜನ ಓಡಾಟ ನಡೆಸಬೇಕಾಯಿತು.
ಬೆಂಗಳೂರು(ಅ.23): ಬೆಂಗಳೂರು ಸೇರಿ ರಾಜ್ಯದ 11ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸೋಮವಾರ ರಾತ್ರಿಯಿಂದೀಚೆಗೆ ಭರ್ಜರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತ ಗೊಂಡಿದೆ. ಮಳೆ ಸಂಬಂಧಿ ಅನಾಹುತಕ್ಕೆ ಬಾಲಕ ಸೇರಿ ಇಬ್ಬರು ಬಲಿಯಾಗಿದ್ದಾರೆ.
ಬೆಂಗಳೂರು ಸಂಪೂರ್ಣ ನಲುಗಿದ್ದು, ತಗ್ಗು ಪ್ರದೇಶಗಳಲ್ಲಿರುವ ಬಡಾವಣೆಗಳಿಗೆ ನೀರು ನುಗ್ಗಿದೆ. ಬೆಂಗಳೂರು, ಹಾಸನ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಗದಗ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ಚಿಕ್ಕಮಗಳೂರು, 'ಶಿವಮೊಗ್ಗ ಮತ್ತಿತರ ಜಿಲ್ಲೆಗಳಲ್ಲಿ ಮಳೆಯಾಗಿದೆ. `ಉತ್ತರ ಕನ್ನಡ ಜಿಲ್ಲೆ ಮುಂಡಗೋಡಿನಲ್ಲಿ ಸ್ನೇಹಿತರ ಸಾಲಗಾಂವ್ ಗೌಡನಕಟ್ಟೆ ಕೆರೆಗೆ ಹೋಗಿದ್ದ ಸಾಮ ಹನುಮಂತಪ್ಪ ದುರಮುರ್ಗಿ (15) ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ರಾಮಘಟ್ಟ ಬಳಿ ಹಳ್ಳ ದಾಟಲು ಹೋಗಿದ್ದ ವೃದ್ಧ ರಾಜಪ್ಪ (70) ನೀರು ಪಾಲಾಗಿದ್ದಾರೆ.
ಬೆಂಗಳೂರು ರಣಮಳೆ ನಡುವೆ ಕುಸಿದ ಕಟ್ಟಡ, ಅವಶೇಷದಡಿ ಸಿಲುಕಿರುವ ಕಾರ್ಮಿಕರು!
ಮುಳುಗಿದ ವಾಹನಗಳು:
ಬೆಂಗಳೂರಿನಲ್ಲಿ ಮಂಗಳವಾರ ಕೆಲಗಂಟೆಗಳ ಕಾಲ ಸುರಿದ ಮಳೆಗೆ ಯಲಹಂಕ ಪ್ರದೇಶದ ಹಲವು ಬಡಾವಣೆಗಳಿಗೆ ನೀರು ನುಗ್ಗಿ ಅಕ್ಷರಶಃ ದ್ವೀಪಗಳಂತೆ ಮಾರ್ಪಟ್ಟು ಆತಂಕ ಸೃಷ್ಟಿಯಾಗಿತ್ತು. ಇದರಿಂದ ದೋಣಿ ಬಳಸಿ ಈ ಭಾಗದಲ್ಲಿ ಜನ ಓಡಾಟ ನಡೆಸಬೇಕಾಯಿತು.
ತುಂಗಭದ್ರೆಯಿಂದ 1 ಲಕ್ಷ ಕ್ಯುಸೆಕ್ ನೀರು ಬಿಡುಗಡೆ:
ಘಟ್ಟಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನದಿಗೆ 1 ಲಕ್ಷ ಕ್ಯುಸೆಕ್ ನೀರು ಹರಿದು ಬಿಡಲಾಗಿದೆ. ಇದರಿಂದಾಗಿ ಕೊಪ್ಪಳದ ಆನೆಗೊಂದಿ ಸಮೀಪದ ನವವೃಂದಾವನದ ಸಂಚಾರ ಕಡಿದು ಹೋಗಿದೆ.
ಹಂಪಿಯ ಸ್ಮಾರಕಗಳಾದ ಪುರಂದರದಾಸರ ಮಂಟಪ ಹಾಗೂ ಇತರ ಸ್ಮಾರಕಗಳು ಜಲಾವೃತಗೊಂಡಿವೆ. ಇನ್ನು ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆಗೆ ಮುಳುಗಡೆ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಉಕ್ಕಡಗಾತ್ರಿಯಲ್ಲಿ ಪ್ರವಾಹ: ದಾವಣಗೆರೆ ಯಲ್ಲೂ ತುಂಗಭದ್ರಾ ಹರಿವು ಏರಿಕೆಯಾಗಿದ್ದು, ಉಕ್ಕಡಗಾತ್ರಿ ಕರಿಬಸವೇಶ್ವರ ಕ್ಷೇತ್ರದ ಸ್ನಾನಘಟ್ಟ ಮತ್ತು ಅಂಗಡಿಗಳು ಮುಳುಗಡೆಯಾಗಿವೆ.
ಬೆಂಗಳೂರಲ್ಲಿ ಭಾರೀ ಮಳೆ ಮುನ್ಸೂಚನೆ; ಮುಂಜಾಗ್ರತಾ ಕ್ರಮವಾಗಿ ನಾಳೆ ಶಾಲೆಗಳಿಗೆ ರಜೆ ಘೋಷಣೆ
ಹಾರಿ ಹೋದ ಶಾಲೆ ಚಾವಣೆ:
ಬೆಳಗಾವಿ ಜಿಲ್ಲೆಯಾದ್ಯಂತ ಸುರಿದ ಭಾರೀ ಗಾಳಿ-ಮಳೆಗೆ ಹುಕ್ಕೇರಿ ತಾಲೂಕಿನ ಯಮಕನಮರಡಿ ಸಮೀಪದ ಹಂಚಿನಾಳ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡದ ಚಾವಣಿಗೆ ಹಾಕಿದ್ದ ಪತ್ರಾಸ (ತಗಡಿನ ಹೊದಿಕೆ) ಹಾರಿಹೋಗಿದೆ.
ಮಳೆ ಅನಾಹುತ ಪರಿಹಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ
ಮೈಸೂರು: ರಾಜ್ಯದಲ್ಲಿ ಅಕಾಲಿಕ ಮಳೆ ಕಾರಣದಿಂದ ಆಗಿರುವ ಅನಾಹುತಗಳಿಗೆ ಪರಿಹಾರ ನೀಡುತ್ತೇವೆ. ಈ ಕುರಿತು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದೇವೆ. ವರದಿ ತರಿಸಿಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಳೆ ಅನಾಹುತಗಳ ಕುರಿತು ನಿಗಾ ವಹಿಸಿದ್ದೇವೆ. ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆಂದರು.