ಬೆಂಗಳೂರು(ಅ.18): ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿಯ ಬಹುಕೋಟಿ ವಂಚನೆ ಪ್ರಕರಣದ ಸಂಬಂಧ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್‌ ಮನ್ಸೂರ್‌ ಖಾನ್‌, ಐಜಿಪಿ ಹೇಮಂತ್‌ ನಿಂಬಾಳ್ಕರ್‌ ಹಾಗೂ ಕೆಎಸ್‌ಆರ್‌ಪಿ ಕಮಾಂಡೆಂಟ್‌ ಅಜಯ್‌ ಹಿಲೋರಿ ಸೇರಿದಂತೆ 28 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಸಿಬಿಐ ಶನಿವಾರ ದೋಷಾರೋಪ ಪಟ್ಟಿಸಲ್ಲಿಸಿದೆ.

ಅಧಿಕ ಬಡ್ಡಿ ಆಸೆ ತೋರಿಸಿ ಜನರಿಂದ ಸುಮಾರು .4 ಸಾವಿರ ಕೋಟಿ ಹಣ ಸಂಗ್ರಹಿಸಿ ವಂಚಿಸಲಾಗಿದೆ ಎಂದು 2019ರಲ್ಲಿ ಐಎಂಎ ಕಂಪನಿ ವಿರುದ್ಧ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ಪೂರ್ಣಗೊಳಿಸಿದ ಸಿಬಿಐ, ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್‌ ಹಾಗೂ ಆತನಿಗೆ ಸಹಕರಿಸಿದ ಆರೋಪದ ಮೇರೆಗೆ ಅಧಿಕಾರಿಗಳ ವಿರುದ್ಧ ಚಾಚ್‌ರ್‍ಶೀಟ್‌ ಸಲ್ಲಿಸಿದೆ. ಬಹುಕೋಟಿ ಮೋಸದ ಕೃತ್ಯಕ್ಕೆ ಮನ್ಸೂರ್‌ಗೆ ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಹಕಾರ ನೀಡಿರುವುದು ತನಿಖೆ ವೇಳೆ ಖಚಿತವಾಗಿರುವುದರಿಂದ ಅವರ ವಿರುದ್ಧವೂ ದೋಷಾರೋಪ ಪಟ್ಟಿಸಲ್ಲಿಸಲಾಗಿದೆ.

ಕೆಲ ದಿನಗಳ ಹಿಂದೆ ಆರೋಪಿ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯ ಸರ್ಕಾರ ಸಿಬಿಐಗೆ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಂದಾಯ ಹಾಗೂ ಪೊಲೀಸ್‌ ಅಧಿಕಾರಿಗಳ ಮೇಲೆ ನಗರದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಾವಿರಕ್ಕೂ ಅಧಿಕ ಪುಟಗಳ ಚಾಚ್‌ರ್‍ಶೀಟ್‌ ಸಲ್ಲಿಸಲಾಗಿದೆ. ಇದರಲ್ಲಿ ಸರ್ಕಾರಕ್ಕೆ ಮನ್ಸೂರ್‌ ಪರವಾಗಿ ಹೇಮಂತ್‌ ನಿಂಬಾಳ್ಕರ್‌, ಅಜಯ್‌ ಹಿಲೋರಿ ಹಾಗೂ ಬೆಂಗಳೂರು ಉತ್ತರ ವಿಭಾಗಾಧಿಕಾರಿ (ಎಸಿ) ಎಲ್‌.ಸಿ.ನಾಗರಾಜ್‌ ಸಲ್ಲಿಸಿದ್ದ ವರದಿಗಳನ್ನು ಸಹ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

ಹಣ ಪಡೆದು ಮನ್ಸೂರ್‌ಗೆ ಸಹಕಾರ:

2018ರಲ್ಲಿ ಐಎಂಎ ಕಂಪನಿಯ ಹಣಕಾಸು ವಹಿವಾಟಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಬೆಂಗಳೂರಿನ ರಿಸವ್‌ರ್‍ ಬ್ಯಾಂಕ್‌ (ಆರ್‌ಪಿಐ) ಪ್ರಾದೇಶಿಕ ಕಚೇರಿ ಅಧಿಕಾರಿಗಳು, ವಿಚಾರಣೆ ನಡೆಸುವಂತೆ ಕೋರಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಅಂತೆಯೇ ಅಂದು ಸಿಐಡಿ ಆರ್ಥಿಕ ವಂಚನೆಗಳ ವಿಭಾಗದ ಐಜಿಪಿ ಹುದ್ದೆಯಲ್ಲಿದ್ದ ಹೇಮಂತ್‌ ನಿಂಬಾಳ್ಕರ್‌ ಅವರು ಐಎಂಎ ಸಂಸ್ಥೆ ವಿರುದ್ಧ ವಿಚಾರಣೆ ನಡೆಸಿ ಯಾವುದೇ ಅಕ್ರಮ ನಡೆದಿಲ್ಲವೆಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಅದೇ ರೀತಿ ಪೂರ್ವ ವಿಭಾಗದ ಡಿಸಿಪಿ ಆಗಿದ್ದ ಅಜಯ್‌ ಹಿಲೋರಿ ಕೂಡಾ ಮನ್ಸೂರ್‌ ಪರವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಐಎಂಎ ಕೇಂದ್ರ ಕಚೇರಿ ವ್ಯಾಪ್ತಿಯ ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆ ಇನ್ಸ್‌ಪೆಕ್ಟರ್‌ ಆಗಿದ್ದ ರಮೇಶ್‌ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ಗೌರಿಶಂಕರ್‌ ಸಹ ಮನ್ಸೂರ್‌ ಅವರಿಂದ ಲಾಭ ಪಡೆದಿದ್ದರು ಎಂದು ಸಿಬಿಐ ಹೇಳಿದೆ.

ಪೊಲೀಸರು ಮಾತ್ರವಲ್ಲದೆ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳಾಗಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯಶಂಕರ್‌ ಹಾಗೂ ಉಪ ವಿಭಾಗಾಧಿಕಾರಿ ಎಲ್‌.ಸಿ.ನಾಗರಾಜ್‌ ಅವರು ಸಹ ಮನ್ಸೂರ್‌ ಪರವಾಗಿ ಸರ್ಕಾರಕ್ಕೆ ವರದಿ ಕೊಟ್ಟಿದ್ದರು. ಇದಕ್ಕೆ ಸುಮಾರು .1.5 ಕೋಟಿ ಲಂಚವನ್ನು ನಾಗರಾಜ್‌ ಪಡೆದಿದ್ದರು ಎಂಬ ಆಪಾದನೆ ಬಂದಿತ್ತು. ಕೊನೆಗೆ ವಂಚನೆ ಪ್ರಕರಣದ ತನಿಖೆ ನಡೆಸಿದ ಸಿಬಿಐ, ಮನ್ಸೂರ್‌ಗೆ ಕ್ಲೀನ್‌ಚೀಟ್‌ ನೀಡಿದ್ದ ಆರೋಪ ಎದುರಿಸುತ್ತಿದ್ದ ಪೊಲೀಸ್‌ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರತ್ಯೇಕವಾಗಿ ಎಫ್‌ಐಆರ್‌ ದಾಖಲಿಸಿತ್ತು. ಬಳಿಕ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿ ಕೆಲ ದಾಖಲೆಗಳನ್ನು ಜಪ್ತಿ ಮಾಡಿತ್ತು. ಮನ್ಸೂರ್‌ ಪರವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲು ಅಧಿಕಾರಿಗಳು ಲಂಚ ಪಡೆದಿರುವ ಬಗ್ಗೆ ಆರೋಪ ಕೇಳಿಬಂದಿತ್ತು.

ಅಧಿಕಾರಿಗಳ ವಿರುದ್ಧ ಆರೋಪಗಳೇನು?

ವಂಚನೆ (ಐಪಿಸಿ 420), ಅಪರಾಧ ಒಳ ಸಂಚು (ಐಪಿಸಿ 120ಬಿ), ಐಪಿಸಿ 197 ಅಪರಾಧ ಪ್ರಕ್ರಿಯೆ, ಕರ್ನಾಟಕ ಪೊಲೀಸ್‌ ಕಾಯ್ದೆ, ವಿಶ್ವಾಸ ದ್ರೋಹ (ಐಪಿಸಿ 406), ಸರ್ಕಾರಿ ಅಧಿಕಾರ ದುರ್ಬಳಕೆ (ಐಪಿಸಿ 409) ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಕರ್ನಾಟಕ ಹೂಡಿಕೆದಾರರ ರಕ್ಷಣಾ ಕಾಯ್ದೆ (ಕೆಪಿಐಡಿಎಫ್‌ಇ)ಯಡಿ ಆರೋಪಿತ ಅಧಿಕಾರಿಗಳ ವಿರುದ್ಧ ಆರೋಪ ಪಟ್ಟಿಸಲ್ಲಿಕೆಯಾಗಿದೆ ಎಂದು ತಿಳಿದು ಬಂದಿದೆ.

ಯಾರ್ಯಾರ ಹೆಸರು?

ಐಎಂಎ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್‌ ಮನ್ಸೂರ್‌ ಖಾನ್‌, ಬೆಂಗಳೂರು ಹೆಚ್ಚುವರಿ ಪೊಲೀಸ್‌ ಆಯುಕ್ತ (ಆಡಳಿತ) ಹೇಮಂತ್‌ ನಿಂಬಾಳ್ಕರ್‌, ಕೆಎಸ್‌ಆರ್‌ಪಿ ಕಮಾಡೆಂಟ್‌ ಅಜಯ್‌ ಹಿಲೋರಿ, ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಎಲ್‌.ಸಿ.ನಾಗರಾಜ್‌, ಸಿಐಡಿ ಡಿವೈಎಸ್ಪಿ ಇ.ಶ್ರೀಧರ್‌, ಇನ್ಸ್‌ಪೆಕ್ಟರ್‌ ರಮೇಶ್‌ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ಗೌರಿಶಂಕರ್‌ ಸೇರಿದಂತೆ 28 ಹೆಸರು ಉಲ್ಲೇಖವಾಗಿದೆ.