ಬೆಂಗಳೂರು[ಜ.24]: ಒಂದು ಕಾಲದಲ್ಲಿ ದೋಸ್ತಿಗಳಾಗಿದ್ದ, ಈಗ ಪರಸ್ಪರ ದೂರವಾಗಿರುವ ಮಾಜಿ ಸಚಿವರಾದ ಜನಾರ್ದನ ರೆಡ್ಡಿ ಹಾಗೂ ಆನಂದ ಸಿಂಗ್ ಅವರು ಬುಧವಾರ ಪರಸ್ಪರ ಭೇಟಿಯಾದರು. ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರಿಂದ ಹೊಡತ ತಿಂದಿದ್ದಾರೆ ಎನ್ನಲಾದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರನ್ನು ರೆಡ್ಡಿ ಹಾಗೂ ಬಿಜೆಪಿ ಮುಖಂಡ ಸಿ.ಟಿ. ರವಿ ಅವರು ಶೇಷಾದ್ರಿಪುರ ಅಪೋಲೋ ಆಸ್ಪತ್ರೆ ಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು

ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರೆಡ್ಡಿ, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಶಾಸಕರು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಗುಂಪು ಮತ್ತು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಗುಂಪು ಎಂದು ಇಬ್ಭಾಗವಾಗಿದ್ದಾರೆ ಎಂದರು.

ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರ ನಡುವೆ ನಡೆಯುತ್ತಿರುವ ಗಲಾಟೆ ಪರಿಣಾಮ ಆ ಪಕ್ಷದ ಶಾಸಕರಿಬ್ಬರ ನಡುವಿನ ಹೊಡೆದಾಟದ ಪ್ರಕರಣ ನಡೆದಿದೆ ಎಂದೂ ರೆಡ್ಡಿ ಆರೋಪಿಸಿದರು. ಶಾಸಕರಾದ ಭೀಮಾ ನಾಯ್ಕ್ ಮತ್ತು ಗಣೇಶ್ ಅವರು ಸಿದ್ದರಾಮಯ್ಯ ಅವರ ಗುಂಪು. ಉಳಿದ ಶಾಸಕರೆಲ್ಲ ಶಿವಕುಮಾರ್ ಗುಂಪಿಗೆ ಸೇರಿದವರು. ಈ ಗುಂಪುಗಾರಿಕೆ ಪರಿಣಾಮವೇ ಇಷ್ಟೆಲ್ಲ ಮಾರಣಾಂತಿಕ ಹಲ್ಲೆ ನಡೆದಿದೆ. ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ಮಾಡಿರುವ ಶಾಸಕ ಗಣೇಶ್ ಅವರನ್ನು ರಾಜ್ಯ ಸರ್ಕಾರವೇ ರಕ್ಷಣೆ ಮಾಡುತ್ತಿದೆ. ಆನಂದ್ ಸಿಂಗ್ ಅವರಿಗೆ ಶೋಭೆ ತರುವಂತೆ ಅವರ ಪಕ್ಷದ ನಾಯಕರು ನಡೆದುಕೊಳ್ಳುತ್ತಿಲ್ಲ ಎಂದು ಅಭಿಪ್ರಾಯಪಟ್ಟರು

ಇದೇ ವೇಳೆ ಸಿ.ಟಿ.ರವಿ ಮಾತನಾಡಿ, ಹಲವು ವರ್ಷಗಳಿಂದ ಆನಂದ್ ಸಿಂಗ್ ಅವರು ನನಗೆ ಸ್ನೇಹಿತರು. ಹೀಗಾಗಿ, ಅವರನ್ನು ಆರೋಗ್ಯ ವಿಚಾರಿಸಲು ಆಗಮಿಸಿದ್ದೆ ಎಂದು ತಿಳಿಸಿದರು

ಕಾಂಗ್ರೆಸ್ಸಿಗರ ಭೇಟಿ: ಉಳಿದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಜಮೀರ್ ಅಹ್ಮದ್, ಮಾಜಿ ಸಚಿವ ಮಾಜಿ ಸಚಿವ ಶಿವರಾಜ ತಂಗಡಗಿ, ಶಾಸಕ ಅಜಯ್‌ಸಿಂಗ್ ಸೇರಿದಂತೆ ಕಾಂಗ್ರೆಸ್‌ನ ಹಲವು ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಆನಂದ ಸಿಂಗ್ ಆರೋಗ್ಯ ವಿಚಾರಿಸಿದರು