ಯೋಧನಿಗೆ ಥಳಿತ: ಬಸವರಾಜ್ ಬೊಮ್ಮಾಯಿ ರಾಜೀನಾಮೆಗೆ ಅಭಿಯಾನ..!
ಭಾರೀ ಚರ್ಚೆಗೆ ಗ್ರಾಸವಾಗಿದ್ದ ಸಿಆರ್‌ಪಿಎಫ್ ಯೋಧ ಸಚಿನ್ ಸಾವಂತ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ನ್ಯಾಯಾಲಯ ಜಾಮೀನು ನೀಡಿದೆ. ಆದ್ರೆ, ಇದೀಗ ರಾಜ್ಯ ಗೃಹ ಸಚಿವರ ರಾಜೀನಾಮೆ ಅಭಿಯಾನ ಶುರುವಾಗಿದೆ.
ಬೆಂಗಳೂರು, (ಏ.29): ಸಿಆರ್ ಪಿಎಫ್ ಯೋಧ ಸಚಿನ್ ಸಾವಂತ್ ಅವರಿಗೆ ಸದಲಗಾ ಪೊಲೀಸರು ಬಾಸುಂಡೆ ಬರುವ ಹಾಗೆ ಥಳಿಸಿದ್ದಾರೆ. ಯೋಧನಿಗೆ ಬಾಸುಂಡೆ ಬಂದಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಪೊಲೀಸರ ನಡೆಗೆ ಕಿಡಿಕಾರಿದ್ದಾರೆ.
ಏಪ್ರಿಲ್ 23ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಪೊಲೀಸರು ಮತ್ತು ಯೋಧನ ನಡುವೆ ಗಲಾಟೆ ನಡೆದಿತ್ತು. ತದನಂತರ ಪೊಲೀಸರು ಯೋಧನನ್ನು ಠಾಣೆಗೆ ಕರೆದುಕೊಂಡು ಕೈಗೆ ಕೋಳ ಹಾಕಿದ್ದರು.
ಯೋಧನ ಮೇಲೆ ಪೊಲೀಸರ ದರ್ಪ: ಶಾಸಕರಿಗೆ ಮೃದುಧೋರಣೆ, ದೇಶ ಕಾಯುವವರಿಗೆ ಕಠಿಣ ಶಿಕ್ಷೆ!
ಕೈಗೆ ಕೋಳ ಹಾಕಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,.ದೇಶ ಕಾಯುವ ಯೋಧನನ್ನು ಅಮಾನವೀಯವಾಗಿ ನಡೆಸಿಕೊಮಡಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಬೊಮ್ಮಾಯಿ ರಾಜೀನಾಮೆಗೆ ಒತ್ತಾಯ
ಜಾಮೀನಿನ ಮೇಲೆ ಸಚಿನ್ ಸಾವಂತ್ ಬಂದಿದ್ದಾರೆ. ಆದ್ರೆ, ಅವರಿಗೆ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ರಾಜೀನಾಮೆಗೆ ಒತ್ತಾಯಿಸಿ ಟ್ವಿಟ್ಟರ್‌ನಲ್ಲಿ ಅಭಿಯಾನ ಶುರುವಾಗಿದೆ.
ಕಮಾಂಡೋ-ಪೊಲೀಸ್ ಜಟಾಪಟಿ ಕೇಸ್: CRPF ಯೋಧನಿಗೆ ಷರತ್ತುಬದ್ಧ ಜಾಮೀನು
ಠಾಣೆಯಲ್ಲಿ ಯೋಧನ ಸಚಿನ್ ಮೇಲೆ ಪೊಲೀಸರು ಅಮಾನವೀಯವಾಗಿ ಹಲ್ಲೆ ನಡೆಸಿದ ಫೋಟೋ ಕೂಡಾ ವೈರಲ್ ಆಗಿತ್ತಿದೆ. ಪೊಲೀಸ್ ದೌರ್ಜನ್ಯದ ಗಾಯದ ಗುರುತಿನ ಫೋಟೋಗಳನ್ನು ಜನರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಹಲ್ಲೆ ನಡೆಸಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.
ಅಷ್ಟೇ ಅಲ್ಲದೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ರಾಜೀನಾಮೆಗೂ ಒತ್ತಾಯಿಸಿದ್ದಾರೆ. ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಈ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಪೊಲೀಸರ ಅಮಾನವೀಯವಾಗಿ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶ ಕಾಯುವ ಯೋಧನಿಗೆ ಹೀಗೆ. ಇನ್ನು ಸಾಮಾನ್ಯ ಜನರ ಗತಿಯೇನು ಅಂತೆಲ್ಲಾ ನೆಟ್ಟಿಗರು ಪೊಲೀಸ್ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಯಿ ಅವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಬಸವರಾಜ್ ಬೊಮ್ಮಯಿ ರಾಜೀನಾಮೆಗೆ ಆಗ್ರಹಿಸಿದ್ದಾರೆ.
"